ಮೂಡಿಗೆರೆ ಪಪಂ: ಬಹುಮತವಿದ್ದರೂ ಬಿಜೆಪಿಗೆ ಪಪಂ ಅಧ್ಯಕ್ಷ ಸ್ಥಾನ ಕೈತಪ್ಪುವ ಸ್ಥಿತಿ

Update: 2019-05-31 12:17 GMT
ಮೂಡಿಗೆರೆ ಪಪಂ ಚುನಾವಣೆಯಲ್ಲಿ ಜಯಗಳಿಸಿದ ಪಪಂ ನೂತನ ಸದಸ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕಾಂಗ್ರಸ್ ಭವನದಲ್ಲಿ ಅಭಿನಂದಿಸಿದರು

ಮೂಡಿಗೆರೆ, ಮೇ 31: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಪಕ್ಷಗಳು ಮೂಡಿಗೆರೆ ಪಪಂ ಚುನಾವಣೆಯಲ್ಲಿ ಮೈತ್ರಿಗಾಗಿ ಹರಸಾಹಸ ಮಾಡಿದ್ದು, 8ನೇ ವಾರ್ಡ್‍ಗಾಗಿ ಉಭಯ ಪಕ್ಷಗಳು ಪರಸ್ಪರ ಕಿತ್ತಾಡಿಕೊಂಡು ದೋಸ್ತಿಯನ್ನು ಮುರಿದುಕೊಂಡಿದ್ದವು. ಬಳಿಕ ಏಕಾಂಗಿಯಾಗಿ ಎರಡೂ ಪಕ್ಷಗಳೂ ಸ್ಪರ್ಧಿಸಿದ್ದು, ಕಾಂಗ್ರೆಸ್ 4 ಹಾಗೂ ಜೆಡಿಎಸ್ 1 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿವೆ. ಒಂದುವೇಳೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರೆ ಬಹುತೇಕ ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿತ್ತು.

6 ವಾರ್ಡ್‍ಗಳಲ್ಲಿ ಗೆದ್ದಿರುವ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೂ ಪಪಂ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿರುವುದರಿಂದ ಅಧಿಕಾರ ಹಿಡಿಯುವುದು ಕಷ್ಟಸಾಧ್ಯವಾಗಿದೆ.

ಪಪಂ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮೇಲುಗೈ ಸಾಧಿಸಿದೆ. 11 ವಾರ್ಡ್‍ಗಳ ಪೈಕಿ 9 ವಾರ್ಡ್‍ಗಳಲ್ಲಿ ಗೆಲುವು ಪಡೆದೇ ತೀರಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ಪಟ್ಟಣ ಮಾತ್ರವಲ್ಲದೇ ಹಳ್ಳಿಗಳಿಂದಲೂ ತನ್ನ ಪಕ್ಷದ ಮುಖಂಡರು,  ಕಾರ್ಯಕರ್ತರನ್ನು ಪ್ರಚಾರಕ್ಕೆ ಬಿಟ್ಟು ಕೊನೆಗೂ 6 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ಪಟ್ಟಣ ಪಂಚಾಯತ್‍ನಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತ ಪಡೆದಿದೆ. ಪಟ್ಟಣದ ಛತ್ರಮೈದಾನ ಮತ್ತು ಗಂಗನಮಕ್ಕಿ ಬಡಾವಣೆ ಸೇರುವ 8ನೇ ವಾರ್ಡ್ ಎಸ್ಸಿ ಮೀಸಲಾಗಿದ್ದರೂ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಈ ಕ್ಷೇತ್ರದಲ್ಲಿ ಜಯಗಳಿಸಿದ ಸದಸ್ಯರೇ ಅಧ್ಯಕ್ಷರಾಗುವ ಮೀಸಲಾತಿ ಇರುವುದರಿಂದ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಈ ವಾರ್ಡ್‍ನಲ್ಲಿ ಮೇಲುಗೈ ಸಾಧಿಸಿದೆ. 

7ನೇ ವಾರ್ಡ್‍ನಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‍ನ ಕೆ.ವೆಂಕಟೇಶ್ ಸತತವಾಗಿ 6ನೇ ಬಾರಿ ಆಯ್ಕೆಯಾಗಿದ್ದಾರೆ. 9ನೇ ವಾರ್ಡ್‍ಗೆ ಸ್ಪರ್ಧಿಸಿರುವ ಪಪಂ ಮಾಜಿ ಅಧ್ಯಕ್ಷೆ ಬಿಜೆಪಿಯ ಲತಾ ಲಕ್ಷ್ಮಣ್ 3ನೇ ಬಾರಿ ಸ್ಫರ್ಧಿಸಿ ಈ ಬಾರಿ ಸೋಲನುಭವಿಸಿದ್ದಾರೆ. ಇದೇ ವಾರ್ಡ್‍ಗೆ ಸ್ಪರ್ಧಿಸಿರುವ ಮಾಜಿ ಸದಸ್ಯ ಅಲ್ತಾಫ್ ಹುಸೇನ್ ಪರಾಭವಗೊಂಡು ಮೂರನೇ ಸ್ಥಾನ ಪಡೆದಿದ್ದಾರೆ. ಪಪಂ ಮಾಜಿ ಉಪಾಧ್ಯಕ್ಷೆ ನಯನಾ ಲೋಕಪ್ಪಗೌಡ ಅವರು ಕಳೆದ ಬಾರಿ ಬಿಜೆಪಿಯಿಂದ ಆರಿಸಿ ಬಂದಿದ್ದರು. ಈ ಬಾರಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್‍ಗೆ ಸೇರಿ 10ನೇ ವಾರ್ಡ್‍ನಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಸೋಲನುಭವಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಪತ್ನಿ ಗೀತಾ ಸಿ.ಎಂ. ಅವರು ಜೆಡಿಎಸ್‍ನಿಂದ ಸ್ಪರ್ಧಿಸಿ ಕಾಂಗ್ರೆಸ್‍ನ ಮಾಜಿ ಪಪಂ ಸದಸ್ಯೆ ಬಿ.ಕೆ.ಜಯಮ್ಮ ಅವರನ್ನು ಸೋಲಿಸಿ, ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ದಿನಪತ್ರಿಕೆಯೊಂದರ ವಿತರಕರಾಗಿದ್ದ ಕೆ.ಲಿಂಗಪ್ಪಗೌಡ 2ನೇ ವಾರ್ಡ್‍ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 3 ಮತಗಳನ್ನು ಗಳಿಸಿದ್ದಾರೆ. ಒಟ್ಟು 7 ವಾರ್ಡ್‍ಗಳಲ್ಲಿ ನೋಟಾಕ್ಕೆ 30 ಮತಗಳು ಬಿದ್ದಿವೆ. 4 ವಾರ್ಡ್‍ಗಳಲ್ಲಿ ನೋಟಾಕ್ಕೆ ಯಾವುದೇ ಮತ ಬಿದ್ದಿಲ್ಲ. 

ಕಾಂಗ್ರೆಸ್‍ನ ಜಿಯಾವುಲ್ಲಾ ಹಿಂದೊಮ್ಮೆ ಪಪಂ ಸದಸ್ಯರಾಗಿದ್ದರು. ಈ ಬಾರಿಯೂ ಕಾಂಗ್ರೆಸ್‍ನಿಂದ 3ನೇ ವಾರ್ಡ್‍ನಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಪರಾಭಾವಗೊಂಡಿದ್ದಾರೆ. ಪಪಂ ಅಧ್ಯಕ್ಷರಾಗಿದ್ದ ಕಾಂಗ್ರೆಸ್‍ನ ರಮೀಝಾಬಿ ಅವರ ಪತಿ ಹಾಗೂ ಮಾಜಿ ಸದಸ್ಯ ಇಮ್ತಿಯಾಝ್ 2ನೇ ವಾರ್ಡ್‍ನಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದಾರೆ. ಬಸ್‍ನಿಲ್ದಾಣದ ಸಮೀಪ ಹೂವು ಮಾರಾಟ ಮಾಡಿಕೊಂಡಿದ್ದ ಕಮಲಮ್ಮ ಬಿಜೆಪಿಯಿಂದ 1ನೇ ವಾರ್ಡ್‍ನಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಜೆಡಿಎಸ್‍ನ ಹಿರಿಯ ಮುಖಂಡ ಮುಹಮ್ಮದ್ ನೂರುಲ್ಲಾ ಅವರು ಜೆಡಿಎಸ್‍ನಿಂದ 4ನೇ ವಾರ್ಡ್‍ನಿಂದ ಸ್ಪರ್ಧಿಸಿ ಚುನಾವಣೆಗೆ 2 ದಿನಗಳಿರುವಾಗ ಕಾಂಗ್ರೆಸ್‍ನ ಮುಹಮ್ಮದ್ ಇರ್ಷಾದ್‍ಗೆ ಬೆಂಬಲ ಸೂಚಿಸಿ ಕಣದಿಂದ ನಿವೃತ್ತಿಯಾಗಿ ಕೇವಲ 1 ಮತವನ್ನಷ್ಟೇ ಪಡೆದಿದ್ದಾರೆ. ಈ ವಾರ್ಡ್‍ನಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ.

ಮೂಡಿಗೆರೆ ಪಟ್ಟಣ ಪಂಚಾಯತ್ ಫಲಿತಾಂಶ:

1ನೇ ವಾರ್ಡ್:  ಕಮಲಾಕ್ಷಿ (ಬಿಜೆಪಿ) 279 ಮತ ಪಡೆದು 53 ಮತಗಳ ಅಂತದಲ್ಲಿ ಜಯಗಳಿಸಿದ್ದಾರೆ. ನೇರ ಪ್ರತಿಸ್ಪರ್ಧಿಯಾಗಿದ್ದ ಗೀತಾ (ಕಾಂಗ್ರೆಸ್) 226 ಮತ ಗಳಿಸಿದ್ದಾರೆ. ಚಲಾವಣೆಯಾಗಿದ್ದ ಒಟ್ಟು 511 ಮತಗಳಲ್ಲಿ ಉಳಿದ 6 ಮತಗಳು ನೋಟಾಗೆ ಬಿದ್ದಿವೆ. 

2ನೇ ವಾರ್ಡ್: ಅನುಕುಮಾರ್ (ಬಿಜೆಪಿ) 271 ಮತ ಪಡೆದು 135 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಇಮ್ತಿಯಾಜ್ ಅಹಮ್ಮದ್ (ಕಾಂಗ್ರೆಸ್) 136 ಮತ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುನೀಲ್ 81 ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಚಲಾವಣೆಯಾಗಿದ್ದ ಒಟ್ಟು 515 ಮತಗಳಲ್ಲಿ ಪಕ್ಷೇತರರಾದ ಆಶಾ ನಯಿಮ್ 13, ಮಧುಚಂದ್ರ 11, ಕೆ.ಲಿಂಗಪ್ಪಗೌಡ 3 ಮತಗಳು ಬಿದ್ದಿವೆ. 

3ನೇ ವಾರ್ಡ್ : ಜಿ.ಬಿ.ಧರ್ಮಪಾಲ್ (ಬಿಜೆಪಿ) 340 ಮತ ಗಳಿಸಿ 164 ಮತಗಳ ಭಾರೀ ಅಂತರದಲ್ಲಿ ಜಯಗಳಿಸಿದ್ದಾರೆ. ನೇರ ಪ್ರತಿಸ್ಪರ್ಧಿ ಎಂ.ಆರ್.ಜಿಯಾವುಲ್ಲಾ (ಕಾಂಗ್ರೆಸ್) 176 ಮತ ಪಡೆದಿದ್ದಾರೆ. ಚಲಾವಣೆಯಾಗಿದ್ದ 521 ಮತಗಳಲ್ಲಿ ಉಳಿದ 5 ಮತಗಳು ನೋಟಾ ಪಾಲಾಗಿದೆ. 

4ನೇ ವಾರ್ಡ್: ಸುಧೀರ್ ಕೆ.(ಬಿಜೆಪಿ) 266 ಮತ ಪಡೆದು 182 ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಮಹಮ್ಮದ್ ಇರ್ಷಾದ್ (ಕಾಂಗ್ರೆಸ್) 84 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಹಮ್ಮದ್ ನೂರುಲ್ಲಾಗೆ ಕೇವಲ 1 ಮತ ಬಿದ್ದಿದೆ. ಒಟ್ಟು 356 ಮತಗಳಲ್ಲಿ ಉಳಿದ 5 ಮತದಾರರು ನೋಟಾ ಒತ್ತಿದ್ದಾರೆ. 

5ನೇ ವಾರ್ಡ್: ಮನೋಜ್‍ಕುಮಾರ್ (ಬಿಜೆಪಿ) 268 ಮತ ಗಳಿಸಿ 91 ಮತಗಳ ಅಂತರದಲ್ಲಿ ಗೆದಿದ್ದಾರೆ. ಪ್ರತಿಸ್ಪರ್ಧಿಗಳಾದ ರಾಗಿಣಿ (ಜೆಡಿಎಸ್) 177 ಮತಗಳಿಸಿದ್ದಾರೆ. ರಾಘವೇಂದ್ರ (ಕಾಂಗ್ರೆಸ್) 74 ಮತ ಪಡೆದಿದ್ದು, ಒಟ್ಟು 521 ಮತಗಳಲ್ಲಿ ಉಳಿದ 2 ಮತವನ್ನು ನೋಟಾ ಪಡೆದಿದೆ. 

6ನೇ ವಾರ್ಡ್: ಗೀತಾ ಸಿ.ಎಂ. (ಜೆಡಿಎಸ್) 361 ಮತ ಪಡೆದು 168 ಮತಗಳ ಭಾರೀ ಅಂತರದಲ್ಲಿ ಜಯಶೀಲರಾಗಿದ್ದಾರೆ. ಪ್ರತಿಸ್ಫರ್ಧಿಗಳಾದ ಬಿ.ಕೆ.ಜಯಮ್ಮ (ಕಾಂಗ್ರೆಸ್) 193ಮತಗಳು ಹಾಗೂ ಗೀತಾ ಕೆ.ಎಸ್. (ಬಿಜೆಪಿ)126 ಮತಗಳು, ಆಶಾ ಬಿ.ವೈ.(ಪಕ್ಷೇತರ) 15 ಮತಗಳು ಬಿದ್ದಿವೆ. ಚಲಾವಣೆಯಾದ 697 ಮತಗಳಲ್ಲಿ 2 ಮತ ನೋಟಾಗೆ ಬಿದ್ದಿದೆ. 

7ನೇ ವಾರ್ಡ್: ಕೆ.ವೆಂಕಟೇಶ್ (ಕಾಂಗ್ರೆಸ್) 233 ಮತ ಗಳಿಸಿ 19 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಇವರ ನೇರ ಪ್ರತಿಸ್ಪರ್ಧಿ ಸಂದರ್ಶ (ಬಿಜೆಪಿ) 214 ಮತ ಗಳಿಸಿದ್ದಾರೆ. ಚಲಾವಣೆಯಾದ ಮತಗಳು 456. ಉಳಿದ 2 ಮತಗಳು ನೋಟಾಕ್ಕೆ ಬಿದ್ದಿವೆ. 

8ನೇ ವಾರ್ಡ್: ರಮೇಶ್ ಎಚ್.ಪಿ (ಕಾಂಗ್ರೆಸ್) 186 ಮತಗಳಿಸಿ 11 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಸುಶೀಲ(ಬಿಜೆಪಿ) 175 ಮತ ಗಳಿಸಿದ್ದಾರೆ. ವನಜಾಕ್ಷಿ (ಜೆಡಿಎಸ್) 54 ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಅಯ್ಯಪ್ಪ (ಪಕ್ಷೇತರ) 15 ಮತ ಗಳಿಸಿದ್ದಾರೆ. ಒಟ್ಟು ಚಲಾವಣೆಯಾದ ಮತಗಳು 430. 

9ನೇ ವಾರ್ಡ್: ಹಂಝಾ (ಕಾಂಗ್ರೆಸ್) 163 ಮತಗಳು ಲಭಿಸಿದ್ದು, 60 ಮತಗಳ ಅಂತರದÀಲ್ಲಿ ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಲತಾ (ಬಿಜೆಪಿ) 103 ಮತ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಲ್ತಾಫ್ ಹುಸೇನ್ 84 ಮತ ಗಳಿಸಿದ್ದಾರೆ. ಒಟ್ಟು ಚಲಾವಣೆಯಾದ ಮತಗಳು 350. 

10ನೇ ವಾರ್ಡ್: ಖುರ್ಷಿದ್ ಬಾನು (ಕಾಂಗ್ರೆಸ್) 132 ಮತ ಗಳಿಸಿ, 35 ಮತಗಳ ಅಂತರದಲ್ಲಿ ವಿಜೇತರಾಗಿದ್ದಾರೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಸೈಯದ್ ಅಂಜುಂ ಪ್ರತಿಸ್ಪರ್ಧಿಯಾಗಿ 97 ಮತ ಗಳಿಸಿದ್ದಾರೆ. ಉಳಿದಂತೆ ಐ.ವಿ.ರೋನಾಲ್ಡ್ ಪಿಂಟೋ (ಬಿಜೆಪಿ) 51 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ರಹಮತ್ ಉನ್ನೀಸಾ 14 ಮತ ಗಳಿಸಿದ್ದಾರೆ. ಒಟ್ಟು ಚಲಾವಣೆಯಾದ ಮತಗಳು 294. 

11ನೇ ವಾರ್ಡ್: ಆಶಾ ಎಚ್.ಜಿ.(ಬಿಜೆಪಿ) 335 ಮತಗಳಿಸಿ 159 ಮತಗಳ ಭಾರೀ ಅಂತರದಲ್ಲಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿಗಳಾದ ಎಚ್.ಎಲ್.ಶುಭ(ಕಾಂಗ್ರೆಸ್) 176 ಮತ ಗಳಿಸಿದ್ದಾರೆ. ಕೆ.ವಿ.ನಯನಾ(ಜೆಡಿಎಸ್) 158 ಮತ ಗಳಿಸಿದ್ದಾರೆ. ಚಲಾವಣೆಯಾಗಿರುವ ಮತಗಳು 677. ಇಲ್ಲಿ ನೋಟಾಕ್ಕೆ 8 ಮತಗಳು ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News