ತಂಬಾಕಿನಿಂದ ಸಾವೇ ಹೊರತು ಜೀವನವಿಲ್ಲ: ನ್ಯಾ.ಬಸವರಾಜ ಚೇಂಗಟಿ

Update: 2019-05-31 12:25 GMT

ಚಿಕ್ಕಮಗಳೂರು, ಮೇ 31: ತಂಬಾಕಿನ ಉತ್ಪನ್ನಗಳು ಸಾವಿಗೆ ರಹದಾರಿ ಎಂದು ತಿಳಿದಿದ್ದರೂ ಯುವಜನತೆ ತಂಬಾಕಿನ ಮೊರೆ ಹೋಗುವುದು ಹೆಚ್ಚುತ್ತಿದೆ, ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ತಂಬಾಕು ಉತ್ಪನ್ನಗಳಿಂದಾಗುವ ಮಾರಕ ದುಷ್ಪರಿಣಾಮಗಳ ಬಗ್ಗೆ ಹದಿಯರೆಯದವರಲ್ಲಿ ಇಂದಿನಿಂದಲೇ ಜಾಗೃತಿ ಮೂಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ತಂಬಾಕಿನಂತಹ ಮಾರಕ ವಸ್ತುವಿನ ಬಗ್ಗೆ ವರ್ಷಕ್ಕೊಮ್ಮೆ ಜಾಗೃತಿ ಕಾರ್ಯಕ್ರಮ ನಡೆಸದೇ ಪ್ರತಿದಿನ ನಡೆಯನಬೇಕೆಂದು ಜಿಲ್ಲಾ ಕಾನೂನು ಪ್ರಾಧಿಕಾರದ ಅಧ್ಯಕ್ಷ, ನ್ಯಾಯಾಧೀಶ ಬಸವರಾಜ ಚೇಂಗಟಿ ಅಭಿಪ್ರಾಯಿಸಿದರು.

ನಗರದ ಟಿಎಂಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ, ಪೊಲೀಸ್, ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕಿನಿಂದಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಮಂದಿ ಪ್ರತಿದಿನ ಮರಣಹೊಂದುತ್ತಿದ್ದಾರೆ. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಘಟನೆ 1987ರಿಂದ ಪ್ರತೀ ವರ್ಷ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ವಿಶ್ವದಾದ್ಯಂತ ನಡೆಸುತ್ತಿದೆ ಎಂದ ಅವರು, ದೇಶದಲ್ಲಿ ಹದಿಹರೆಯದವರು ಬೀಡಿ, ಸಿಗರೇಟು, ಗುಟ್ಕಾದಂತಹ ತಂಬಾಕಿನ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದರ ಚಟಕ್ಕೆ ಬಲಿಯಾದವರು ಕಡೆಗೆ ಮಾರಕ ರೋಗಗಳಿಗೆ ತುತ್ತಾಗಿ ನರಕಯಾತನೆ ಅನುಭವಿಸಿ ಸಾವಿಗೀಡಾಗುತ್ತಿದ್ದಾರೆ. ಯುವಜನತೆಯಲ್ಲಿ ತಂಬಾಕಿನ ದುಷ್ಪರಿಣಾಮಗಳನ್ನು ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳಿಂದ ಪ್ರತಿದಿನ ನಡೆಯಬೇಕೆಂದು ಕರೆ ನೀಡಿದರು.

ಜಿಲ್ಲಾಸ್ಪತ್ರೆಯ ಮನೋರೋಗತಜ್ಞ ಡಾ.ಚಂದ್ರಶೇಖರ್, ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿ, ತಂಬಾಕು ಉತ್ಪನ್ನಗಳ ಚಟಕ್ಕೆ ಬಲಿಯಾಗುತ್ತಿರುವವರು ಹದಿಹರೆಯದವರು, ಕುತೂಹಲಕ್ಕಾಗಿ, ಶೋಕಿಗಾಗಿ ಸಿಗರೇಟು, ಗುಟ್ಕಾದಂತಹ ಮಾರಕ ಉಪತ್ಪನ್ನಗಳ ಚಟಕ್ಕೆ ಬೀಳುವ ಹದಿಹರೆಯದವರಲ್ಲಿ ಈ ಉತ್ಪನ್ನ ತಾತ್ಕಾಲಿಕ ನೆಮ್ಮದಿ, ಖುಷಿ, ಒತ್ತಡಗಳಿಂದ ಬಿಡುಗಡೆ ನೀಡುತ್ತದೆ. ತಂಬಾಕಿನಲ್ಲಿರುವ 2 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ವ್ಯಕ್ತಿಯ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ಈ ಉತ್ಪನ್ನಗಳು ಪದೇಪದೇ ಬೇಕೆನಿಸುತ್ತವೆ. ಒಮ್ಮೆ ಇದರ ಚಟಕ್ಕೆ ಬಲಿಯಾದವರು ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಇತಂಹ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಸಲಹೆಯಂತೆ ನಿಯಮಿತವಾಗಿ ಔಷಧ ಸೇವನೆ ಮಾಡಿದಲ್ಲಿ ಈ ಚಟಗಳಿಂದ ಬಿಡುಗಡೆ ಹೊಂದಬಹುದು ಎಂದ ಅವರು, ತಂಬಾಕಿನಿಂದ ಅಂತಿಮವಾಗಿ ಸಾವೇ ಸಿಗುವುದುರಿಂದ ಮಾದಕ ಉತ್ಪನ್ನಗಳ ಬಗ್ಗೆ ಹದಿಹರೆಯದವರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.

ವಕೀಲರ ಸಂಘದ ಸದಸ್ಯ ಚಂದ್ರಶೇಖರ್ ಕೊಟ್ಪಾ ಕಾಯ್ದೆ ಬಗ್ಗೆ ವಿವರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರುವುದು ಹಾಗೂ ಧೂಮಪಾನ ಮಾಡುವುದನ್ನು ಸರಕಾರ ಈಗಾಗಲೇ ನಿಷೇದಿಸಿದೆ. ಆದರೂ ಈ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದಾಗಿ ಶಾಲಾ ಆವರಣ, ಬಸ್‍ನಿಲ್ದಾಣ, ಕೋರ್ಟ್ ಕಚೇರಿಗಳ ಸುತ್ತಲೂ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಧೂಮಪಾನ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕೂಡಲೇ ಕ್ರಮಕೈಗೊಂಡು ದಂಡ ವಿಧಿಸಬಹುದಾದ ಅಧಿಕಾರ ವಿವಿಧ ಇಲಾಖೆಗಳ ನಿರ್ದಿಷ್ಟ ಅಧಿಕಾರಿಗಳಿಗೆ ನೀಡಲಾಗಿದೆ. ಇಂತಹ ಕಾನೂನಿನ ಬಗ್ಗೆ ಅರಿವು ಹೊಂದಿ ತಂಬಾಕು ಉತ್ಪನ್ನಗಳ ಮಾರಾಟ, ಧೂಮಪಾನವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ತಂಬಾಕಿನಂತಹ ಮಾರಕ ವಸ್ತುಗಳ ಸೇವನೆಯಿಂದಾಗಿ ವಿಶ್ವದಾದ್ಯಂತ ಪ್ರತಿದಿನ 60 ಲಕ್ಷ ಜನರು ಸಾಯುತ್ತಿದ್ದು, ದೇಶದಲ್ಲಿ ಪ್ರತಿದಿನ 22 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ. ವಿಶ್ವದಲ್ಲಿ ಏಡ್ಸ್, ಟಿಬಿ, ಕ್ಯಾನ್ಸರ್ ರೋಗಗಳಿಗೆ ತುತ್ತಾಗಿ ಸಾಯುವವರಿಗಿಂತ ತಂಬಾಕು ಉತ್ಪನ್ನಗಳನ್ನು ಸೇವಿಸಿ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಿದೆ. ಇದನ್ನು ತಡೆಗಟ್ಟಲು ಜನಜಾಗೃತಿಯೊಂದೇ ಮಾರ್ಗ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಗರದ ತಾಲೂಕು ಕಚೇರಿ ಆವರಣದಿಂದ ಜನಜಾಗೃತಿ ಕಾರ್ಯಕ್ರಮ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಜಿಲ್ಲಾ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಂತ ವೈದ್ಯ ಡಾ. ಪ್ರೇಮ್‍ಕುಮಾರ್, ಟಿಎಂಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಳಿನಾ ಡೀಸಾ,ಜಿಲ್ಲಾ ಸರ್ಜನ್ ಕುಮಾರ್ ನಾಯ್ಕ್, ವಕೀಲರ ಸಂಘದ ಅಧ್ಯಕ್ಷ ದುಶ್ಯಂತ್, ಕಾಲೇಜು ಪ್ರಾಂಶುಪಾಲ ಇಂದ್ರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News