‘ಉನ್ನತಿ’ ಯೋಜನೆಯಡಿ 22 ನವೋದ್ಯಮಿಗಳಿಗೆ 4.7ಕೋಟಿ ರೂ.ಪ್ರೋತ್ಸಾಹಧನ ವಿತರಣೆ

Update: 2019-05-31 17:18 GMT

ಬೆಂಗಳೂರು, ಮೇ 31: ಸಮಾಜದಲ್ಲಿನ ದುರ್ಬಲ ವರ್ಗದವರಿಗೆ ಅನುಕೂಲ ಆಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ರೂಪಿಸಿರುವ ‘ಉನ್ನತಿ’ ಯೋಜನೆಯಡಿ ಆಯ್ಕೆಯಾಗಿರುವ ನವೋದ್ಯಮಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

ಶುಕ್ರವಾರ ದೊಮ್ಮಲೂರಿನಲ್ಲಿ ಪ್ರೋತ್ಸಾಹ ಧನ ವಿತರಣೆ ಮಾಡಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಉನ್ನತಿ ಯೋಜನೆ ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆಗಳನ್ನು ಪೂರೈಸುವ ಪರಿಕಲ್ಪನೆ ಹೊಂದಿದ್ದು, ಆಯ್ಕೆಗೊಳ್ಳುವ ಉದ್ಯಮಿಗೆ ಗರಿಷ್ಠ 50ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ತಂತ್ರಜ್ಞಾನ ಕ್ಷೇತ್ರದಲ್ಲಿನ ನವೋದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಉದ್ಯಮಗಳ ಬಗ್ಗೆ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ವಿಚಾರ ದೃಢೀಕರಣ, ಮೂಲ ಬಂಡವಾಳ ನೀಡಿಕೆ ಹಾಗೂ ಅಂತಿಮವಾಗಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ಮಹತ್ತರ ಆಶಯವನ್ನು ಉನ್ನತಿ ಹೊಂದಿದೆ ಎಂದರು.

ಉನ್ನತಿ ಎರಡು ವಿಭಾಗಗಳನ್ನು ಹೊಂದಿದ್ದು, ತಂತ್ರಜ್ಞಾನ ಆವಿಷ್ಕಾರ ಒಂದು ವಿಭಾಗವಾದರೆ, ಗ್ರಾಮೀಣ ಮತ್ತು ಸಾಮಾಜಿಕ ಪ್ರಭಾವವನ್ನು ಹೊಂದಿದ ಆವಿಷ್ಕಾರಗಳಲ್ಲಿ ನವೋದ್ಯಮಿಗಳಿಗೆ ನೆರವಾಗಲಿರುವುದು ಮತ್ತೊಂದು ವಿಭಾಗವಾಗಿರುತ್ತದೆ.

ಈ ವಿನೂತನ ಯೋಜನೆಗಾಗಿ ಸಮಾಜ ಕಲ್ಯಾಣ ಇಲಾಖೆ 20ಕೋಟಿ ರೂ. ಅನುದಾನ ಒದಗಿಸಿದೆ. ತಂತ್ರಜ್ಞಾನ ಆವಿಷ್ಕಾರ ವಿಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದದವರು ಯಾವುದೇ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಆರಂಭಿಸಬಹುದು ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರಭಾವವನ್ನು ಬೀರುವ ಉತ್ಪನ್ನಗಳಿಗೆ ಆಸರೆಯಾಗಲಿರುವ ಯಾವುದೇ ವ್ಯಕ್ತಿ ಆರಂಭಿಸುವ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಿಗೆ ಎರಡನೆಯ ವಿಭಾಗದಡಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ತಂತ್ರಜ್ಞಾನ ಕ್ಷೇತ್ರದ ಹೊಸ ಅನ್ವೇಷಣೆಗಳು ಎಸ್ಸಿ-ಎಸ್ಟಿ ಸಮುದಾಯಗಳು ಮತ್ತು ಇತರ ದುರ್ಬಲ ವಿಭಾಗಗಳನ್ನು ತಡವಾಗಿ ತಲುಪುವುದನ್ನು ನಾವು ನೋಡಿದ್ದೇವೆ. ಯುವ ಉದ್ಯಮಿಗಳು ಬಂಡವಾಳ, ತಾಂತ್ರಿಕಜಾಲ ಹಾಗೂ ಮಾರುಕಟ್ಟೆ ಪ್ರವೇಶದ ಕೊರತೆಯಿಂದ ಬಳಲುತ್ತಿದ್ದಾರೆ. ಈ ವ್ಯವಸ್ಥಿತ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷವಾಗಿ ಉನ್ನತಿ ಯೋಜನೆ ರೂಪಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ತಂತ್ರಜ್ಞಾನದ ಅನ್ವೇಷಣೆಗಳು ತುಂಬಾ ಸರಳ, ಬಹಳ ಮಂದಿ ಈ ಕ್ಷೇತ್ರದಲ್ಲಿ ಮುನ್ನೆಡೆಯುತ್ತಿದ್ದಾರೆ. ನಮ್ಮ ಬದುಕಿನ ಸಮಸ್ಯೆಗಳನ್ನೂ ತಂತ್ರಜ್ಞಾನ ಕ್ಷೇತ್ರದಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ. ತಂತ್ರಜ್ಞಾನದಿಂದ ಸಾಮಾಜಿಕ ಬದಲಾವಣೆಯೂ ಸಾಧ್ಯ ಎಂದರು.

ಉನ್ನತಿ ಯೋಜನೆಯಡಿ ಧನಸಹಾಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಿದಾಗ 300ಅರ್ಜಿಗಳು ಸ್ವೀಕೃತಗೊಂಡವು. ಅಗ್ರಿಟೆಕ್, ಡಾಟಾ ಅನಾಲಿಟೆಕ್ಸ್ ಡಿಸೈನ್, ಆರೋಗ್ಯಕ್ಕೆ ಸಂಬಂಧಿಸಿದ ತಾಂತ್ರಿಕತೆ, ವೈದ್ಯಕೀಯ ಉಪಕರಣಗಳು, ರೊಬೋಟಿಕ್ಸ್ ಮುಂತಾದ ೇತ್ರಗಳಿಂದ ಅರ್ಜಿಗಳು ಬಂದಿದ್ದವು.

ತಜ್ಞರ ಆಯ್ಕೆ ಸಮಿತಿಗಳ ಮೂಲಕ ಎರಡು ಹಂತಗಳಲ್ಲಿ ದೊಮ್ಮಲೂರಿನಲ್ಲಿರುವ ಕೆ-ಟೆಕ್ ಇನೊವೇಷನ್ ಹಬ್ ಕೇಂದ್ರದಲ್ಲಿ 70 ಮಾನವ ದಿನಗಳಷ್ಟು ಕಾಲ ಜನವರಿ 8, 17 ಹಾಗೂ 19ರಂದು ಆರಂಭಿಕ ಮೌಲ್ಯಮಾಪನ ನಡೆಯಿತು. ತಂತ್ರಜ್ಞಾನ, ಅನ್ವೇಷಣೆ, ವ್ಯಾಪಾರ, ಸಾಮಾಜಿಕ ಪರಿಣಾಮ, ಬಂಡವಾಳ, ಪರಿಣಿತ ತಂಡಗಳ ಸಾಮರ್ಥ್ಯವನ್ನು ಆರಿಸಿ ಮೌಲ್ಯಮಾಪನ ಮಾಡಲಾಯಿತು.

ಉನ್ನತಿ ಬಹಳ ಸರಳವಾಗಿದೆ. ಹಳೆಯ ಸಮಸ್ಯೆಗಳನ್ನು ಬಗೆಹರಿಸಲು ನಾವು ಹೊಸ ಹೊಸ ವಿಚಾರಗಳನ್ನು ಹುಡುಕುತ್ತಿದ್ದೇವೆ. ತಂತ್ರಜ್ಞಾನವು ಮಾನವನ ಬದುಕು ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬೇಕು. ತಂತ್ರಜ್ಞಾನದ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವಂತಾಗಬೇಕು, ಪ್ರಗತಿಗಾಗಿ ತಂತ್ರಜ್ಞಾನವು ಮಾರ್ಗಗಳನ್ನು ಸೃಷ್ಟಿಸಬೇಕು. ಅದು ಉನ್ನತಿ ಮೂಲಕ ಸಾಧ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದರು.

‘ತಂತ್ರಜ್ಞಾನದ ನೆರವಿನೊಂದಿಗೆ ಸಮರ್ಥನೀಯ ಅಭಿವೃದ್ಧಿ ಹಾಗೂ ಸಮಾಜದ ಉನ್ನತಿಯ ಭರವಸೆ ನೀಡುವ ಈ ಉನ್ನತಿ ಯೋಜನೆಯ ಲಾಭವನ್ನು ಪರಿಶಿಷ್ಟ ಜಾತಿ/ಪಂಗಡದ ಯುವಜನತೆ ಸಮರ್ಪಕವಾಗಿ ಬಳಸಿಕೊಳ್ಳುತ್ತದೆ ಎಂಬ ಆಶಯ ನನ್ನದಾಗಿದೆ’
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News