ಏಕಾಏಕಿ ಕೆಲಸದಿಂದ ವಜಾ: ದಾವಣಗೆರೆ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆಯ 5 ಶುಶ್ರೂಷಕರಿಂದ ಆತ್ಮಹತ್ಯೆಗೆ ಯತ್ನ

Update: 2019-06-01 09:23 GMT

ದಾವಣಗೆರೆ, ಜೂ.1: ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದರಿಂದ ನೊಂದ ದಾವಣಗೆರೆ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆಯ ಶುಶ್ರೂಷಕರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

ಹನುಮಂತಪ್ಪ, ಸೋಮಶೇಖರ್, ಸುಮಯ್ಯ ಬಾನು, ಸಿಂಧೂ, ದೀಪಾ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರರಾಗಿದ್ದಾರೆ. ಈ ಪೈಕಿ ಸುಮಯ್ಯ ಬಾನು ಹಾಗೂ ಹನುಮಂತಪ್ಪ ಅವರ ಸ್ಥಿತಿ ಗಂಭೀರವಾಗಿದೆ.

ಕಳೆದ ಎಂಟು ವರ್ಷಗಳಿಂದ ಟ್ರಾಮ್ ಕೇರ್ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 54ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ಅನುದಾನದ ಕೊರತೆಯ ಕಾರಣ ಕೆಲಸಕ್ಕೆ ಹಾಜರಾಗಿ ಸಹಿ ಮಾಡುವ ವೇಳೆ ಕೆಲಸದಿಂದ ತೆಗೆದು ಹಾಕಿರುವುದಾಗಿ ಹೇಳಿದ್ದಾರೆ. ಇದರಿಂದ ಮನನೊಂದ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಐವರು ನೌಕರರು ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಿ ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗಿದೆ.

‘’ಕಳೆದ 8 ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಅದರೆ ಇತ್ತೀಚಿಗೆ 8 ತಿಂಗಳಿಂದ ನಮಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಈಗ ಕೆಲಸದಿಂದ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ದಿಕ್ಕೆ ತೋಚದಂತಾಗಿದೆ. ನಮ್ಮ ಕುಟುಂಬಗಳು ಬೀದಿಗೆ ಬಂದಿವೆ’’ ಎಂದು ಹೊರಗುತ್ತಿಗೆ ಶುಶ್ರೂಷಕರು ತಮ್ಮ ಆಳಲು ತೋಡಿಕೊಂಡರು.

ಈಗಾಗಲೇ ಹಲವು ಬಾರಿ ಈ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿ, ಉದ್ಯೋಗ ಭದ್ರತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗೊಂದಲ: ಏಕಾಏಕಿ ನೌಕರರು ವಿಷ ಕುಡಿದಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾರವಣ ಉಂಟಾಯಿತು. ಉಳಿದ ಹೊರಗುತ್ತಿಗೆ ನೌಕರರು ಅತಂಕಕ್ಕೆ ಒಳಗಾಗಿ ಡಿಎಚ್‌ಓ ಮತ್ತು ಜಿಲ್ಲಾಸ್ಪತ್ರೆಯ ಅಧೀಕ್ಷಕರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ವಿಷ ಸೇವಿಸಿದ ನೊಂದ ನೌಕರರಿಗೆ ಸಾಂತ್ವನ ಹೇಳಿದರು. ಯಾವುದೇ ಕಾರಣಕ್ಕೂ ಇಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ತಿಳಿಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News