ಮಳೆಗಾಗಿ ಪರ್ಜನ್ಯ ಜಪ-ವಿಶೇಷ ಪೂಜೆ: ಮೈತ್ರಿ ಸರಕಾರದ ಆದೇಶಕ್ಕೆ ವಿಚಾರವಾದಿಗಳ ಆಕ್ಷೇಪ

Update: 2019-06-01 12:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 1: ತೀವ್ರ ಸ್ವರೂಪದ ಬರಗಾಲ, ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜೂ.6ರಂದು ಮುಜರಾಯಿ ಇಲಾಖೆ ವ್ಯಾಪ್ತಿ ಎಲ್ಲ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ, ಹೋಮ ಹಾಗೂ ವಿಶೇಷ ಪೂಜೆ ನಡೆಸಬೇಕೆಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮೌಢ್ಯ ಪ್ರತಿಬಂಧಕ ವಿಧೇಯಕ ಜಾರಿಗೊಳಿಸಬೇಕೆಂಬ ಒತ್ತಾಯದ ಬೆನ್ನಲ್ಲೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮಳೆಗಾಗಿ ಪರ್ಜನ್ಯ ಜಪ-ತಪ, ಪೂಜೆ, ಹವನ-ಹೋಮಗಳ ಮೊರೆ ಹೊಕ್ಕಿರುವುದಕ್ಕೆ ವಿಚಾರವಾದಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಶೇಷ ಪೂಜೆ ನಡೆಸುವ ಸಂಬಂಧ ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆಯು, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಸುವೃಷ್ಟಿಯಾಗಿ ರಾಜ್ಯ ಸುಭಿಕ್ಷವಾಗಲಿ ಎಂಬ ಕಾರಣಕ್ಕೆ ದೇವಾಲಯಗಳಲ್ಲಿ ಪರ್ಜನ್ಯ ಜಪ, ವಿಶೇಷ ಪೂಜೆ ನಡೆಸುವುದು ಅತ್ಯಾವಶ್ಯಕ ಎಂದು ಸರಕಾರ ಮನಗಂಡಿರುತ್ತದೆ. ಈ ಹಿನ್ನೆಲೆಯಲ್ಲಿ ವರುಣ ದೇವನ ಪ್ರಾರ್ಥನೆ ಮಾಡಲು ಸೂಚಿಸಲಾಗಿದೆ. ಈ ವಿಶೇಷ ಪೂಜೆಗೆ ಗರಿಷ್ಠ 10,001ರೂ.ಗಳಿಗೆ ಮೀರದಂತೆ ಖರ್ಚು ಮಾಡಬಹುದು. ಆರ್ಥಿಕವಾಗಿ ಸದೃಢವಾಗಿರುವ ಆಯಾ ದೇವಾಲಯಗಳು ತಮ್ಮ ನಿಧಿಯಿಂದ ಈ ವೆಚ್ಚ ಭರಿಸಲು ಅನುಮತಿ ನೀಡಲಾಗಿದೆ.

ಜೂ.6ರ ಗುರುವಾರದಂದು ಬ್ರಾಹ್ಮೀ ಮುಹೂರ್ತದಿಂದ ಪ್ರಾರಂಭಿಸಿ, ವಿಶೇಷ ಪೂಜೆಗಳನ್ನು ನೆರವೇರಿಸಲು ಆದೇಶಿಸಲಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶಿಲ್ದಾರರಿಗೆ ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಪೂಜೆಯಿಂದ ಮಳೆ ಬಂದಿದ್ದಕ್ಕೆ ಆಧಾರವಿದ್ದರೆ ಕೊಡಿ

‘ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ, ಪೂಜೆ ಬದಲಿಗೆ ಫೆಬ್ರವರಿ, ಮಾರ್ಚ್ ತಿಂಗಳಲ್ಲೆ ಏಕೆ ವಿಶೇಷ ಪೂಜೆ ಮಾಡಿಸಿ ಮಳೆ ಭರಿಸಲಿಲ್ಲ. ಮಳೆಗಾಲದಲ್ಲಿ ಪೂಜೆ ಮಾಡಿಸಿ, ಪೂಜೆಯಿಂದಲೇ ಮಳೆ ಬಂತು ಎಂದು ಜನರನ್ನು ನಂಬಿಸಲು ಹೊರಟಿದ್ದಾರೆ. ಪೂಜೆಯಿಂದಲೇ ಮಳೆ ಬಂದಿರುವ ಬಗ್ಗೆ ಆಧಾರವಿದ್ದರೆ ಕೊಡಿ. ವೈಯಕ್ತಿಕವಾಗಿ ಪೂಜೆ ಮಾಡಲಿಕ್ಕೆ ಆಕ್ಷೇಪವಿಲ್ಲ. ಆದರೆ, ಜನರ ತೆರಿಗೆ ಹಣದಲ್ಲಿ ಪೂಜೆ ಸರಿಯಲ್ಲ’

-ಪ್ರೊ.ನರೇಂದ್ರ ನಾಯಕ್, ವಿಚಾರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News