ಚಿಕ್ಕಮಗಳೂರು ಜಿ.ಪಂ ಪ್ರಗತಿ ಪರಿಶೀಲನಾ ಸಭೆ: ಅಸಮರ್ಪಕ ಟ್ಯಾಂಕರ್ ನೀರು ಪೂರೈಕೆಗೆ ಶಾಸಕರ ಆಕ್ರೋಶ

Update: 2019-06-01 17:35 GMT

ಚಿಕ್ಕಮಗಳೂರು, ಜೂ.1: ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದ್ದರೂ ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ, ಟ್ಯಾಂಕರ್ ನೀರು ಪೂರೈಕೆ ಗುತ್ತಿಗೆದಾರರು ಗ್ರಾಮೀಣ ಭಾಗಗಳ ಜನರಿಗೆ ಕಲುಷಿತ ನೀರನ್ನು ಸರಬರಾಜು ಮಾಡುತ್ತಿದ್ದಾರೆ, ಟೆಂಡರ್ ಕರೆಯುವ ವೇಳೆ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ ? ಗುತ್ತಿಗೆದಾರರು ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆಯೇ ಎಂಬುದರ ನಿರ್ವಹಣೆ ಹೇಗೆ? ಗುತ್ತಿಗೆದಾರರ ಟ್ಯಾಂಕರ್ ಗಳಿಗೆ ಹೆಚ್ಚುವರಿ ಹಣ ನೀಡುತ್ತಿರುವುದೇಕೆ ? ಪೂರೈಸಲಾಗುತ್ತಿರುವ ನೀರು ಶುದ್ಧವಾಗಿದೆಯೇ? ನಿಗದಿತ ಪ್ರಮಾಣದಲ್ಲೇ ನೀರು ಪೂರೈಕೆಯಾಗುತ್ತದೆಯೇ ಎಂಬುದರ ಖಾತ್ರಿ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಶನಿವಾರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು ಜಿಲ್ಲಾಡಳಿತದ ಮುಂದಿಟ್ಟರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ನಝೀರ್ ಸಾಬ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ನೇತೃತ್ವದಲ್ಲಿ ನಡೆದ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಅಗತ್ಯ ಅಭಿವೃದ್ಧಿ ಕ್ರಮಗಳು ಹಾಗೂ ಕೈಗೊಳ್ಳಬೇಕಾಗಿರುವ ತುರ್ತುಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಟ್ಯಾಂಕರ್ ಮೂಲಕ ಜಿಲ್ಲೆಯ ಬರಪೀಡಿತ ಪ್ರದೇಶಗಳ ಗ್ರಾಮಗಳಿಗೆ ಜಿಲ್ಲಾಡಳಿತ ಗುತ್ತಿಗೆದಾರ ಮೂಲಕ ಸರಬರಾಜು ಮಾಡುತ್ತಿರುವ ಟ್ಯಾಂಕರ್ ನೀರು ಪೂರೈಕೆ ಅಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಪ್ರಾಣೇಶ್, ಸಿ.ಟಿ.ರವಿ, ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ ಹಾಗೂ ಟಿ.ಡಿ.ರಾಜೇಗೌಡ ಆರೋಪಿಸಿದರು.

ಸಭೆ ಆರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಹಿಂದಿನ ಜಿಲ್ಲಾಧಿಕಾರಿ ಅವಧಿಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡುವ ಪ್ರತೀ ಟ್ಯಾಂಕರ್ ಗೆ ನೀಡುತ್ತಿದ್ದ ಶುಲ್ಕಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಇಷ್ಟಾದರೂ ನೀರು ಪೂರೈಕೆ ಮಾಡುವ ಗುತ್ತಿಗೆದಾರರು ಬರ ಪೀಡಿತ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಟ್ಯಾಂಕರ್ ಗಳು ರಸ್ತೆಗಳಲ್ಲಿ ಓಡಾಡುವುದೇ ಕಾಣುತ್ತಿಲ್ಲ. ಕೆಲ ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗುತ್ತಿಗೆ ಪಡೆದವರೇ ನೀರು ಪೂರೈಸುತ್ತಿದ್ದಾರೆಂಬುದೂ ತಿಳಿಯುತ್ತಿಲ್ಲ, ನೀರು ಪೂರೈಕೆ ಮಾಡುವ ಟ್ಯಾಂಕರ್ ಮಾಲಕರಿಗೆ ಯಾವ ಮಾನದಂಡದಡಿಯಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ಪ್ರಶ್ನಿಸಿದ ಅವರು, ಜಿಲ್ಲಾಡಳಿತದ ಸಮರ್ಪಕ ಮೇಲ್ವಿಚಾರಣೆ ಕೊರತೆಯಿಂದಾಗಿ ಟ್ಯಾಂಕರ್ ನೀರು ಪೂರೈಕೆ ದಂಧೆಯಾಗಿ ಮಾರ್ಪಡುತ್ತಿದೆ. ಸಮರ್ಪಕ ನೀರು ಪೂರೈಕೆ ದೃಷ್ಟಿಯಿಂದ ಗ್ರಾಮ ಪಂಚಾಯತ್‍ಗಳಿಗೆ ಟ್ಯಾಂಕರ್ ನೀರು ಪೂರೈಕೆ ಜವಾಬ್ದಾರಿ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಬರಪೀಡಿತ ಪ್ರದೇಶಗಳಲ್ಲಿ 100 ಟ್ಯಾಂಕರ್ ಗಳ ಮೂಲಕ 87 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಂಕಿಅಂಶ ಹೇಳುತ್ತದೆ. ಆದರೆ ಗುತ್ತಿಗೆದಾರರಿಗೆ ನೀರಿನ ಮೂಲಗಳು ಯಾವುದು?, ಯಾವ ಗ್ರಾಮಕ್ಕೆ ಎಷ್ಟು ಟ್ಯಾಂಕರ್ ಗಳ ಮೂಲಕ, ಎಷ್ಟು ಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿದೆ?  ಗ್ರಾಮಗಳಲ್ಲಿರುವ ಜನಸಂಖ್ಯೆ ಎಷ್ಟು? ಎಂಬುದರ ಮಾಹಿತಿ ಇಲ್ಲ. ಬರಪೀಡಿತ ಪ್ರದೇಶಗಳ ಗ್ರಾಮಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿದೆ ಎಂಬುದಕ್ಕೆ ಖಾತ್ರಿ ಏನಿದೆ? ಗುತ್ತಿಗೆದಾರರು ಕಲುಷಿತ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಆರೋಪಗಳಿವೆ ಎಂದು ಸಭೆಯಲ್ಲಿ ದೂರು ಹೇಳಿದ ಅವರು, ಬಯಲು ಸೀಮೆ ಭಾಗಗಳಲ್ಲಿ ಜಲದಾರೆ ಯೋಜನೆಯಡಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲು ಈಗಾಗಲೇ ಸರಕಾರಕ್ಕೆ ಡಿಪಿಆರ್ ಸಲ್ಲಿಸಲಾಗಿದೆ. ಇದನ್ನು ಕೂಡಲೇ ಸರಕಾರ ಮಂಜೂರು ಮಾಡಬೇಕೆಂದರು.

ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಈ ವೇಳೆ ಮಧ್ಯಪ್ರವೇಶಿಸಿ, ಟ್ಯಾಂಕರ್ ನೀರು ಪೂರೈಕೆಯಲ್ಲಿ ಭಾರೀ ಅವ್ಯವಹಾರವಾಗುತ್ತಿಲ್ಲವಾದರೂ ಟ್ಯಾಂಕರ್ ಗಳಿಗೆ ನೀಡುತ್ತಿರುವ ಶುಲ್ಕಗಳಲ್ಲಿ ವ್ಯತ್ಯಾಸವಾಗಿದೆ. ಕಡೂರು ತಾಲೂಕಿನಲ್ಲಿ 198 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇತ್ತು. ಈ ಪೈಕಿ 102 ಗ್ರಾಮಗಳಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ಕೆಲವೆಡೆ ಕೊಳವೆ ಬಾವಿ ಕರೆಸಲಾಗಿದ್ದು, ಇದರ ಬಾಕಿ ಮೊತ್ತ 87 ಲಕ್ಷ ರೂ. ಬಾಕಿ ಇದೆ. ಅನುದಾನ ಬಿಡುಗಡೆಯಾಗದೇ ವಿದ್ಯುತ್ ಸಂಪರ್ಕ, ಪೈಪ್‍ಲೈನ್ ಕೆಲಸ ಮಾಡಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‍ನಿಂದ( ಪರ್ಸನಲ್ ಡಿಪಾಸಿಟ್ ಅಕೌಂಟ್) ನಿಧಿಯಿಂದ ಹಣ ನೀಡಲು ಬೇರೆ ಜಿಲ್ಲೆಗಳಲ್ಲಿ ಅವಕಾಶವಿದ್ದರೂ ಇಲ್ಲಿ ಹಣ ನೀಡುತ್ತಿಲ್ಲ. ಪಿಡಿ ಅಕೌಂಟ್ ನಿಧಿಯಿಂದ ಹಣ ಬಿಡುಗಡೆ ಮಾಡಲು ಉಸ್ತುವಾರಿ ಸಚಿವರು ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಶಾಸಕರ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಟ್ಯಾಂಕರ್ ನೀರು ಪೂರೈಕೆಯಲ್ಲಿ ಕೆಲ ದೋಷಗಳಿದ್ದು ಅದನ್ನು ಪರಿಹಾರ ಮಾಡಲಾಗುವುದು. ಹಿಂದಿನ ಜಿಲ್ಲಾಧಿಕಾರಿ ಅವಧಿಯಲ್ಲಿ ಟ್ಯಾಂಕರ್ ನೀರು ಪೂರೈಕೆದಾರರಿಗೆ ಸರಿಯಾಗಿ ಬಿಲ್ ಪಾವತಿ ಆಗಿಲ್ಲ ಎಂಬ ದೂರಿದ್ದು, ಈ ಸಂಬಂಧ ಎನ್‍ಡಿಆರ್‍ಎಫ್ ನಿಯಮಗಳಂತೆ ದಾಖಲೆಗಳ ಆಧಾರದ ಮೇಲೆ ಕೆಲವವರಿಗೆ ಬಿಲ್ ಪಾವತಿ ಮಾಡಲಾಗಿದೆ. ಈ ಬಾರಿ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ ಎಂದರು. ಜಿಪಂ ಎಎಎ ವೆಂಕಟರಮಣಸ್ವಾಮಿ, ಟ್ಯಾಂಕರ್ ನೀರು ಪೂರೈಕೆ ಗುತ್ತಿಗೆಯನ್ನು ಜಿಲ್ಲೆಯೊಳಗಿನವರಿಗೆ ಟೆಂಡರ್ ಕರೆದು ನೀಡಲಾಗಿದೆ. ಟೆಂಡರ್ ಅನ್ನು ನಿಯಮಾನುಸಾರವಾಗಿ ಕೆಲ ಮಾನದಂಡಗಳಡಿಯಲ್ಲಿಯೇ ನೀಡಲಾಗಿದೆ. ನಿಗದಿತ ಪ್ರಮಾಣದ ನೀರು ಪೂರೈಕೆ ಮಾಡದಿರುವ ತಾಲೂಕು ಮಟ್ಟದಲ್ಲಿರುವ ತಹಶೀಲ್ದಾರ್ ನೇತೃತ್ವದ ಸಮಿತಿ ಮೂಲಕ ಪರಿಶೀಲಿಸಲಾಗುತ್ತಿದ್ದು, ಸಮಿತಿ ಈ ಬಗ್ಗೆ ನೀಡಿದ ವರದಿ ಮೇರೆಗೆ ಇಂತಹ ಟ್ಯಾಂಕರ್ ಗಳಿಗೆ ಹಣ ಕಡಿತಗೊಳಿಸಿ ಬಿಲ್ ಪಾವತಿ ಮಾಡಲಾಗಿದೆ. ನೀರಿನ ಶುದ್ಧತೆ ಬಗ್ಗೆ ಕೆಲ ಟ್ಯಾಂಕರ್ ಗಳ ನೀರನ್ನು ಲ್ಯಾಬ್‍ಗಳ ಮೂಲಕ ಪರೀಕ್ಷಿಸಲಾಗಿದೆ ಎಂದರು.

ಈ ವೇಳೆ ಸಚಿವ ಜಾರ್ಜ್ ಮಾತನಾಡಿ, ಹಿಂದಿನ ಜಿಪಂ ಸಭೆಗಳಲ್ಲಿ ಟ್ಯಾಂಕರ್ ನೀರು ಪೂರೈಕೆದಾರರಿಗೆ ಬಿಲ್ ಪಾವತಿಯಲ್ಲಿ ಗೊಂದಲ ಏರ್ಪಟಿದ್ದನ್ನು ಗಮನಕ್ಕೆ ತರಲಾಗಿತ್ತು. ಇದಕ್ಕೆ ಪರಿಹಾರವಾಗಿ ಜಿಪಂ ಹಿಂದಿನ ಸಭೆಯ ತೀರ್ಮಾನದಂತೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಟೆಂಡರ್ ಕರೆದ ವೇಳೆ ಸಮಸ್ಯೆ ಎದುರದಾಗ ತನ್ನ ಗಮನಕ್ಕೆ ತಂದಿದ್ದರೆ ಪರಿಹಾರ ಕಂಡುಕೊಳ್ಳಬಹುದಿತ್ತು. ಸದ್ಯ ಟೆಂಡರ್ ನೀಡಿರುವಂತೆ ನೀರು ಪೂರೈಕೆಯಾಗಲಿ. ಈ ಸಂಬಂದದ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಬೇಕು. ಮುಂದಿನ ಬಾರಿ ಹೋಬಳಿವಾರು ನೀರು ಪೂರೈಕೆಗೆ ಟೆಂಡರ್ ಕರೆಯಲು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಕ್ರಮಕೈಗೊಳ್ಳಬೇಕೆಂದ ಅವರು, ಟ್ಯಾಂಕರ್ ನೀರು ಪೂರೈಕೆ ಸಮರ್ಪಕವಾಗಿ ನಡೆಯಲು ಟ್ಯಾಂಕರ್ ಗಳಲ್ಲಿ ಜಿಪಿಎಸ್ ಇರುವುದನ್ನು ಪೊಲೀಸ್ ಇಲಾಖೆಯವರು ಖಾತ್ರಿ ಪಡಿಸಿಕೊಳ್ಳಬೇಕು. ಇದರಿಂದ ಟ್ಯಾಂಕರ್ ಯಾವ ನೀರಿನ ಮೂಲದಿಂದ ಎಲ್ಲೆಲ್ಲಿಗೆ ನೀರು ಪೂರೈಕೆ ಮಾಡಿದ್ದಾರೆಂಬುದು ತಿಳಿಯುತ್ತದೆ. ನೀರಿನ ಪ್ರಮಾಣ ಹಾಗೂ ಶುದ್ಧ ನೀರಿನ ಪೂರೈಕೆ ಬಗ್ಗೆ ಜಿಪಂ ಇಂಜಿನಿಯರ್‍ಗಳು ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ನಂತರ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಮಲೆನಾಡು ಭಾಗದಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಆಲ್ದೂರು ಹೋಬಳಿ ಹಾಗೂ ಸಿರವಾಸೆ ಗ್ರಾಮಗಳಲ್ಲಿ ನೀರಿನ ಮೂಲಗಳಿಲ್ಲ. ಈ ಭಾಗದಲ್ಲಿ ಕೊಳವೆ ಭಾವಿಗಳನ್ನು ಕೊರೆಸಲು ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಲೆನಾಡಿನಲ್ಲಿ ಐದು ನದಿಗಳು ಹರಿಯುತ್ತಿದ್ದರೂ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಜಲಧಾರೆ ಯೋಜನೆಯಡಿ ಬಯಲುಸೇಮೆ ಸೇರಿದಂತೆ ಮಲೆನಾಡು ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಸರಕಾರ ಮುಂದಾಗಬೇಕೆಂದು ಉಸ್ತುವಾರಿ ಸಚಿವರ ಗಮನಸೆಳೆದರು.

ಶಾಸಕ ಸಿಟಿ ರವಿ ಮಾತನಾಡಿ, ಜಿಲ್ಲೆಯ ಕೆಲವೆಡೆ ನೀರಿನ ಮೂಲಗಳಿಲ್ಲದಿರುವೆಡೆ ಕಾಮಗಾರಿ ನಿರ್ವಹಿಸಲಾಗಿದೆ. ನೀರಿನ ಮೂಲವಿಲ್ಲದೇ ಪೈಪ್‍ಲೈನ್ ಕೆಲಸ ಮಾಡಲಾಗುತ್ತಿಲ್ಲ. ಕಾಮಗಾರಿ ಹಣ ವ್ಯರ್ಥವಾಗುತ್ತಿದೆ ಎಂದು ದೂರಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನೀರಿನ ಮೂಲವಿಲ್ಲದೇ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಅಂತಹ ಕಾಮಗಾರಿ ನಡೆದಿರುವ ಬಗ್ಗೆ ದೂರು ನೀಡಿದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಕಡೂರು ತಾಲೂಕಿನಲ್ಲಿ 96 ಗ್ರಾಮಗಳ ಪೈಕಿ 45 ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಮುಂಗಡವಾಗಿ 60 ಕೊಳವೆ ಬಾವಿಗಳನ್ನು ತೆರೆಯಲಾಗಿದೆ. ಹಣ ಬಿಡುಗಡೆಯಾಗಿಲ್ಲ. ಪೈಪ್‍ಲೈನ್ ಕೆಲಸ, ವಿದ್ಯುತ್ ಸಂಪರ್ಕ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ ಎಂದು ಕಡೂರು ಶಾಸಕ ಜಿಲ್ಲಾಧಿಕಾರಿಗೆ ದೂರು ಹೇಳಿದಾಗ, ನೀರಿನ ಕಾಮಗಾರಿಗೆ ಪೈಪ್‍ಲೈನ್ ಮತ್ತಿತರ ಕೆಲಸಕ್ಕೆ ಪ್ರತೀ ತಾಲೂಕಿಗೆ ಪಿಡಿ ಖಾತೆಯಿಂದ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನೀರಿನ ಮೂಲಗಳಿರುವುದನ್ನು ತಾಲೂಕು ಮಟ್ಟದ ಟಾಸ್ಕ್ ಪೋಸ್ ಖಚಿತಪಡಿಸಿಕೊಂಡ ನಂತರ ಹಣ ಮಂಜೂರಾತಿ ನೀಡಬೇಕೆಂದು ಸಚಿವ ಜಾರ್ಜ್ ಇದೇ ವೇಳೆ ಸಲಹೆ ನೀಡಿದರು.

ತಾಲೂಕಿನ ಮರ್ಲೆ ಗ್ರಾಮದಲ್ಲಿ ವೈರಾಣ ರೋಗ ಹರಡುತ್ತಿರುವ ಬಗ್ಗೆ ಶಾಸಕ ಕುಮಾರಸ್ವಾಮಿ, ಸಿಟಿ ರವಿ ಸಭೆಯ ಗಮನ ಸೆಳೆದು, ಗಣಿಗಾರಿಕೆ ರಾಸಾಯನಿಕಗಳಿಂದ ವೈರಾಣು ರೋಗ ಹರಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿ, ಆರೋಗ್ಯಾಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೈರಾಣು ರೋಗ ಹರಡುತ್ತಿರುವುದು ನಿಜ. ಗ್ರಾಮದಲ್ಲಿ 1 ಡೆಂಗ್ ಪ್ರಕರಣ ಪತ್ತೆಯಾಗಿದ್ದು, ವೈರಾಣು ರೋಗ ಯಾವುದೆಂದು ಪತ್ತೆ ಹಚ್ಚಲು ಪುಣೆ ಪ್ರಯೋಗಾಲಯಕ್ಕೆ ರೋಗಿಗಳ ರಕ್ತ ಕಳಿಸಲಾಗುವುದು. ರೋಗದಿಂದ ಗಂಭೀರವಾಗಿ ಬಳಲುತ್ತಿರುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದರು.

ಸಭೆಯಲ್ಲಿ ಮರಳು ಪೂರೈಕೆ, ನೀರಿನ ಸಮಸ್ಯೆ ಸಂಬಂಧ ಟೋಲ್ ಫ್ರಿ ನಂಬರ್ ಕರೆ ಮಾಡಿದಾಗ ಕರೆ ಸ್ವೀಕರಿಸದಿರುವುದು, ಮೇವು ಪೂರೈಕೆ, ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಮಂಜೂರಾತಿ-ರನ್‍ವೇ ವಿಸ್ತರಣೆ, ಗ್ರಾಪಂ ಮಟ್ಟದಲ್ಲಿ 14ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳಿಗೆ ಮಂಜೂರಾರಿ ನೀಡದಿರುವುದು ಮತ್ತಿತರ ಸಮಸ್ಯೆಗಳನ್ನು ಶಾಸಕರು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಲಹೆ, ಸೂಚನೆ ಪಡೆದರು. ಸಭೆಯಲ್ಲಿ ಜಿಪಂ ಸಿಇಒ ಅಶ್ವತಿ, ಎಸ್ಪಿ ಹರೀಶ್ ಪಾಂಡೆ, ಎಡಿಸಿ ಕುಮಾರ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್. ಆನಂದಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳಸ ತಾಲೂಕು ಘೋಷಣೆಗಷ್ಟೆ ಸೀಮಿತವಾಗಿದೆ:
ಎ.1ರಿಂದ ಕಳಸ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ಆದರೆ ತಾಲೂಕು ಆಡಳಿತ ಸಂಬಂಧ ಯಾವುದೇ ಚಟುವಟಿಕೆ, ಕಚೇರಿಗಳು, ಸಿಬ್ಬಂದಿ ನೇಮಕದಂತಹ ಪ್ರಕ್ರಿಯೆ ನಡೆದಿಲ್ಲ ಎಂದು ಶಾಸಕ ಕುಮಾರಸ್ವಾಮಿ ಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಗೌತಮ್, ತಾಲೂಕು ರಚನೆ ಬಳಿಕ ಸಿಬ್ಬಂದಿ, ಆಡಳಿತ ಕಚೇರಿಗಳ ಚಟುವಟಿಕೆ ಆರಂಭಿಸಲು ಕಾಲಾವಕಾಶ ಬೇಕು. ಈ ಸಂಬಂಧ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದು, ತಾಲೂಕು ಆಡಳಿತ ಸಂಬಂಧದ ಪ್ರಸ್ತಾವವನ್ನು ಶೀಘ್ರ ಸರಕಾರಕ್ಕೆ ಕಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಇಂದಾವರ ಗ್ರಾಮದಲ್ಲಿ ಕಸವಿಲೇವಾರಿ ಘಟಕದಿಂದಾಗಿ ಡೆಂಗ್ ರೋಗ ಹರಡುತ್ತಿದೆ ಎಂದು ಉಸ್ತುವಾರಿ ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಾದ್ಯಂತ ಕಸವಿಲೇವಾರಿಗಾಗಿ ಗ್ರಾಪಂ ಮಟ್ಟದಲ್ಲಿಯೇ ಎನ್‍ಜಿಒ ಸಂಸ್ಥೆಗಳ ಮೂಲಕ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಇದಕ್ಕೆ ಕೋಟ್ಯಂತರ ರೂ. ಅನುದಾನ ಬೇಕು. ಈ ಸಂಬಂಧ ಸರಕಾರ ಶೀಘ್ರ ಕ್ರಮ ವಹಿಸಲಿದೆ. ಕಸವಿಲೇವಾರಿಗೆ ಸ್ಥಳೀಯ ಮಟ್ಟದಲ್ಲಿ ಗೈಡ್‍ಲೈನ್ ಮಾಡಿಕೊಂಡು ಅದರಂತೆ ನಿರ್ವಹಿಸಬೇಕೆಂದರು.

ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರ ಸಾಗಣೆ ನಿಷೇಧದಿಂದಾಗಿ ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದರೆಂದು ಶಾಸಕ ಕುಮಾರಸ್ವಾಮಿ ಸಭೆಯ ಗಮನಸೆಳೆದಾಗ, ಪ್ರತಿಕ್ರಿಯಿಸಿದ ಎಸ್ಪಿ ಹರೀಶ್ ಪಾಂಡೆ, ಮಂಡ್ಯದ ಬಸ್ ದುರಂತ ಹಾಗೂ ಬಾಗಲಕೋಟೆಯಲ್ಲಿ ಟ್ರಾಲಿಯಲ್ಲಿ ಕಾರ್ಮಿಕರ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಕಾರ್ಮಿಕರ ಪ್ರಾಣದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಆದೇಶ ನೀಡಿದೆ.  ಪೊಲೀಸ್ ಇಲಾಖೆ ನ್ಯಾಯಾಲಯದ ಆದೇಶ ಪಾಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News