ಕಮ್ಯುನಿಸ್ಟರ ಮುಂದಿನ ದಾರಿ ಯಾವುದು?

Update: 2019-06-02 18:30 GMT

ಕಮ್ಯುನಿಸ್ಟರು ಬಡವರನ್ನು, ದುಡಿಯುವ ಜನರನ್ನು ಜಾತಿ ಮತದ ಅಡ್ಡಗೋಡೆ ಕೆಡವಿ ಒಂದುಗೂಡಿಸಿದರು. ದುಡಿಯುವ ಜನ ಒಂದುಗೂಡಿದರೆ ಜಗತ್ತನ್ನೆ ಗೆಲ್ಲಬಹುದು. ಇದು ತಿಳಿದೇ ಕಾರ್ಪೊರೇಟ್ ಬಂಡವಾಳಶಾಹಿಗಳು ಆರೆಸ್ಸೆಸ್‌ನಂಥ ಕೋಮುವಾದಿ, ಫ್ಯಾಶಿಸ್ಟ್ ಸಂಘಟನೆಗಳನ್ನು ಬಳಸಿಕೊಂಡು ಬಡವರ ಏಕತೆ ಒಡೆದರು.


ಭಾರತದ ಮುಂದಿನ ದಾರಿ ಯಾವುದು ಇರಬೇಕು ಎಂಬುದರ ಬಗ್ಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ನಿರ್ದಿಷ್ಟ ಸೂಚನೆ ನೀಡಿದೆ. ಇವಿಎಂ ಗೋಲ್‌ಮಾಲ್ ನಡೆದ ಖಚಿತ ಆರೋಪಗಳ ಹಿನ್ನೆಲೆಯಲ್ಲಿ ಜನಾದೇಶದ ಬಗ್ಗೆ ಸಂದೇಹಗಳಿದ್ದರೂ ಒಟ್ಟಾರೆ ಬಹುತೇಕ ಹಿಂದೂಗಳೆನ್ನಲಾದವರ ಒಲವು ನಿಲುವು ಅಸ್ಪಷ್ಟವಾಗಿ ಉಳಿದಿಲ್ಲ.

ಹಿಂದೂರಾಷ್ಟ್ರ ನಿರ್ಮಾಣದ ಗುರಿ ಸಾಧನೆಯ ದಿಕ್ಕಿನಲ್ಲಿ ಜನರ ಮನಸ್ಸನ್ನು ಒಲಿಸಿಕೊಳ್ಳುವ ಆರೆಸ್ಸೆಸ್‌ನ 90 ವರ್ಷಗಳ ನಿರಂತರ ಯತ್ನ ಈ ಬಾರಿ ಕೊಂಚ ಫಲ ನೀಡಿದಂತೆ ಕಾಣುತ್ತಿದೆ. ಇದೇನೇ ಇರಲಿ, ಈ ಬಾರಿ ಚುನಾವಣೆಯಲ್ಲಿ ಎಡ ಪಕ್ಷಗಳ ಶೋಚನೀಯ ಸೋಲು ಆತಂಕಕಾರಿಯಾಗಿದೆ. ಸಂಸತ್ತಿನಲ್ಲಿ ಬಡವರ ಪರವಾಗಿ ಧ್ವನಿಯೆತ್ತುತ್ತಿದ್ದ, ಅವಕಾಶ ವಂಚಿತರಿಗೆ ಆತ್ಮಗೌರವದ ಬದುಕು ಕಲ್ಪಿಸಲು ಹೋರಾಟ ಮಾಡುತ್ತಿದ್ದ ಕಮ್ಯುನಿಸ್ಟ್ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಗೆದ್ದಿರುವುದು ಬರೀ 5 ಸ್ಥಾನಗಳು. ಅದೂ ತಮಿಳುನಾಡಿನಲ್ಲಿ ಡಿಎಂಕೆ ಹೊಂದಾಣಿಕೆಯೊಂದಿಗೆ ನಾಲ್ಕು ಸ್ಥಾನಗಳನ್ನು ಗೆದ್ದಿವೆ. ಇದರಲ್ಲಿ ಎರಡು ಸಿಪಿಎಂ, ಎರಡು ಸಿಪಿಐ. ಇದನ್ನು ಬಿಟ್ಟರೆ ಕೇರಳದಲ್ಲಿ ಒಂದು ಕಡೆ ಸಿಪಿಎಂ ಆರಿಸಿ ಬಂದಿದೆ. ಕಳವಳಕಾರಿ ಸಂಗತಿ ಅಂದರೆ, ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಕೋಟೆ ಕುಸಿದು ಬಿದ್ದಿದೆ. ಅಲ್ಲಿ ಸ್ಪರ್ಧಿಸಿದ 38 ಕ್ಷೇತ್ರಗಳಲ್ಲಿ ಜಾಧವಪುರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳು ಠೇವಣಿ ಕಳೆದುಕೊಂಡಿವೆ.

ಈ ದೇಶದಲ್ಲಿ ಆರೆಸ್ಸೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಒಂದೇ ಇಸವಿ 1925ರಲ್ಲಿ ಜನ್ಮತಾಳಿದವು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅವಿಭಜಿತ ಕಮ್ಯುನಿಸ್ಟ್ ಪಕ್ಷ 37 ಸ್ಥಾನಗಳನ್ನು ಗೆದ್ದು ಲೋಕಸಭೆಯಲ್ಲಿ ಪ್ರತಿಪಕ್ಷವಾಗಿ ಮಾನ್ಯತೆ ಪಡೆಯಿತು. ಆಗ ಬಿಜೆಪಿ ಇರಲಿಲ್ಲ. ಅದರ ಬದಲಾಗಿ ಸಂಘಪರಿವಾರವು ಜನಸಂಘ ಎಂಬ ಪಕ್ಷವನ್ನು ಹುಟ್ಟು ಹಾಕಿತ್ತು. ಆದರೆ ಆ ಪಕ್ಷ ಲೋಕಸಭೆಯಲ್ಲಿ ಅರವತ್ತರ ದಶಕದವರೆಗೆ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ನಂತರ ಗೆದ್ದರೂ ಕಮ್ಯುನಿಸ್ಟರ ಸರಿಸಾಟಿಯಾಗಿರಲಿಲ್ಲ. ಆಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಮ್ಯುನಿಸ್ಟರು ಗೆಲ್ಲುತ್ತಾ ಬಂದರು. 2004ರಲ್ಲಿ ಲೋಕಸಭೆಯಲ್ಲಿ 60 ಸ್ಥಾನಗಳನ್ನು ಗೆದ್ದುಕೊಂಡು ಯುಪಿಎ-1 ಸರಕಾರಕ್ಕೆ ಆಸರೆಯಾಗಿ ನಿಂತರು .

ಇಂಥ ಕಮ್ಯುನಿಸ್ಟ್ ಪಕ್ಷಗಳ ಅವನತಿ ಆರಂಭವಾಗಿದ್ದು ಹಿಂದಿನ 2014ರ ಲೋಕಸಭಾ ಚುನಾವಣೆಯಲ್ಲಿ. ಆ ಬಾರಿ 9 ಸ್ಥಾನಗಳನ್ನು ಗೆದ್ದಿದ್ದ ಕಮ್ಯುನಿಸ್ಟ್ ಪಕ್ಷಗಳು ಈ ಬಾರಿ ಐದನ್ನು ಮಾತ್ರ ಪಡೆದಿವೆ.

ಒಂದು ಕಾಲದಲ್ಲಿ ಸಂಸತ್ತಿನಲ್ಲಿ ಕಮ್ಯುನಿಸ್ಟರ ಧ್ವನಿಗೆ ತುಂಬಾ ಗೌರವವಿತ್ತು. ಲೋಕಸಭೆಯಲ್ಲಿ ಎ.ಕೆ. ಗೋಪಾಲನ್, ಎಸ್.ಎ. ಡಾಂಗೆ, ಪ್ರೊ. ಹಿರೇನ್ ಮುಖರ್ಜಿ, ಜ್ಯೋತಿರ್ಮಯಿ ಬೋಸ್, ಇಂದ್ರಜಿತ್ ಗುಪ್ತ, ಸೋಮನಾಥ ಚಟರ್ಜಿ, ರಾಜ್ಯಸಭೆಯಲ್ಲಿ ಭೂಪೇಶ ಗುಪ್ತ, ಪಿ ರಾಮಮೂರ್ತಿ, ನಿರೇನ್ ಘೋಷ, ಗುರುದಾಸ ದಾಸಗುಪ್ತಾರಂಥ ಮೇಧಾವಿಗಳಿದ್ದರು. ಭೂಪೇಶ ಗುಪ್ತ ಸದನದಲ್ಲಿ ಮಾತಾಡುತ್ತಾರೆಂದರೆ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಗುಪ್ತ ಅವರ ಮಾತನ್ನು ಕೇಳಲು ಸದನದಲ್ಲಿ ಇರುತ್ತಿದ್ದರು. ಅವರ ಮಾತುಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ನಂತರ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗಲೂ ಕಮ್ಯುನಿಸ್ಟ್ ಸದಸ್ಯರ ಅಧ್ಯಯನಪೂರ್ಣ ಮಾತುಗಳನ್ನು ಗಂಭೀರವಾಗಿ ಆಲಿಸುತ್ತಿದ್ದರು.ವಾಜಪೇಯಿ ಕೂಡಾ ಕಮ್ಯುನಿಸ್ಟ್ ನಾಯಕರ ಪಾಂಡಿತ್ಯಕ್ಕೆ ತಲೆ ಬಾಗಿದ್ದರು.

ಕಮ್ಯುನಿಸ್ಟರು ಸಂಸತ್ತಿನಲ್ಲಿ ಇದ್ದಾಗ ಬಡವರ ಪರ ಅನೇಕ ಶಾಸನಗಳು ಜಾರಿಗೆ ಬಂದವು. ಸಾರ್ವಜನಿಕ ವಿತರಣೆ ವ್ಯವಸ್ಥೆ(ಪಡಿತರ), ಅಸಂಘಟಿತ ಕಾರ್ಮಿಕರ ವೇತನ ಮತ್ತಿತರ ಕಲ್ಯಾಣ ಕಾನೂನುಗಳು, ಭೂ ರಹಿತರಿಗೆ ಭೂಮಿ ಹಂಚಿಕೆ, ಮಹಿಳೆಯರ ಹಕ್ಕುಗಳ ರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ನರೇಗಾ ಉದ್ಯೋಗ ಖಾತ್ರಿ ಯೋಜನೆ, ಸಬ್ಸಿಡಿ ಹೀಗೆ ಬಡವರ, ಇಲ್ಲದವರ ದನಿಯಾಗಿ ಅನೇಕ ಕಾನೂನುಗಳು ಬರಲು ಕಾರಣರಾದವರು ಎಡಪಂಥೀಯರು.

ಬಡವರ ಮೇಲೆ ಪ್ರಭುತ್ವ ಎರಗಲು ಬಂದಾಗ ಇಲ್ಲದವರ ರಕ್ಷಾ ಕವಚವಾಗಿ ನಿಂತವರು ಕಮ್ಯುನಿಸ್ಟರು. ದಲಿತರು ಅಲ್ಪಸಂಖ್ಯಾತರ ಪರವಾಗಿ ದನಿಯೆತ್ತುತ್ತ ಬಂದವರು ಕಮ್ಯುನಿಸ್ಟರು. ಈ ಬಾರಿ ಅವರೇ ಗೆದ್ದಿಲ್ಲ. ಬಿಜೆಪಿಯಿಂದ ಜಯಶಾಲಿಯಾದವರೆಲ್ಲ ಕೋಟ್ಯಧೀಶರು. ಅವರನ್ನು ಬಿಟ್ಟರೆ ಸಾಧ್ವಿ ಪ್ರಜ್ಞಾ ಸಿಂಗ್, ಸಾರಂಗಿಯಂತಹ ಕೋಮುವಾದಿ ವಿಷ ಸರ್ಪಗಳು. ಇನ್ನು ಬಡವರ ಪರವಾಗಿ, ಇಲ್ಲದವರ ಪರವಾಗಿ ದನಿಯೆತ್ತುವವರು ಯಾರು?
ಹಿಂದೆ ಕಮ್ಯುನಿಸ್ಟರನ್ನು ಬಿಟ್ಟರೆ ಸಮಾಜವಾದಿಗಳು ಬಡವರ ಪರವಾಗಿ ಸಂಸತ್ತಿನಲ್ಲಿ ಸೆಣಸುತ್ತಿದ್ದರು. ಆದರೆ ಲೋಹಿಯಾ, ಜೆಪಿ ಅವರ ಕಾಂಗ್ರೆಸ್ ವಿರೋಧಿ ರಾಜಕಾರಣ ಸೋಶಿಯಲಿಸ್ಟ್ ಪಕ್ಷಗಳನ್ನು ನಾಶ ಮಾಡಿ ಸಂಘ ಪರಿವಾರ ಇಂದಿನ ಸ್ಥಿತಿಗೆ ಬರಲು ಕಾರಣವಾಯಿತು. ಸೋಷಲಿಸ್ಟ ಪಕ್ಷ ಈಗಿಲ್ಲ. ಅಳಿದುಳಿದ ಸೋಷಲಿಸ್ಟರಾದ, ಪಾಸ್ವಾನ, ನಿತೀಶ್ ಕುಮಾರ್ ಬಿಜೆಪಿ ಜೊತೆಗೆ ಇದ್ದಾರೆ. ಕೋಮುವಾದದ ವಿರುದ್ಧ ಗಟ್ಟಿಯಾಗಿ ನಿಂತು ಅಡ್ವಾಣಿ ಅವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದಾರೆ. ಈ ಬಾರಿ ಬಿಹಾರದಲ್ಲಿ ಆರ್‌ಜೆಡಿ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.

ಈಗ ಎಡ ಅಂದರೆ ಕಮ್ಯುನಿಸ್ಟರು ಮಾತ್ರ. ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಕಾಲಿಟ್ಟಿದೆ. 35 ವರ್ಷಗಳ ಕಮ್ಯುನಿಸ್ಟ್ ಆಡಳಿತದ ನಂತರ ಮಮತಾ ದೀದಿ ಬಂದರು. ಈಗ ಅವರೂ ದುರ್ಬಲಗೊಂಡು ಸಂಘ ಪರಿವಾರ ಅಲ್ಲಿ ನೆಲೆಯೂರಿದೆ. ಇನ್ನು ಬಂಗಾಳದಲ್ಲಿ ಮತ್ತೆ ಕೆಂಬಾವುಟ ಹಾರುವ ಲಕ್ಷಣಗಳಿಲ್ಲ. ನಾಲ್ಕು ದಶಕಗಳ ಕಾಲ ಕೆಂಪು ಕೋಟೆಯಾಗಿದ್ದ ತ್ರಿಪುರಾ ಈಗ ಗೊಡ್ಸೆ, ಗೋಳ್ವಾಲ್ಕರ್‌ವಾದಿಗಳ ಕೈವಶವಾಗಿದೆ.

ಆರೆಸ್ಸೆಸ್‌ನ್ನು ಹಿಮ್ಮೆಟ್ಟಿಸುವುದು ಈಗ ಸುಲಭವಲ್ಲ. ಅದೀಗ ದೇಶದ ಸಾಮಾಜಿಕ ಬದುಕಿನಲ್ಲಿ ಪ್ರವೇಶ ಪಡೆದಿದೆ. 6 ಲಕ್ಷ ಸ್ವಯಂ ಸೇವಕರ ಬಲಿಷ್ಠ ಸಂಘಟನೆ ಅದಕ್ಕಿದೆ. ಅದರಲ್ಲಿ 40 ಸಾವಿರ ಯುವಕರಿಗೆ ಸಶಸ್ತ್ರ ತರಬೇತಿ ನೀಡಲಾಗಿದೆ, ನೀಡಲಾಗುತ್ತಿದೆ. ಆದಿವಾಸಿ ಪ್ರದೇಶಗಳಲ್ಲಿ ಅರವತ್ತಾರು ಸಾವಿರು ಏಕಲ ಶಾಲೆಗಳನ್ನು ಸಂಘ ಪರಿವಾರ ನಡೆಸುತ್ತಿದೆ. ಅಕಸ್ಮಾತ್ ಯುದ್ಧ ಎದುರಾದರೆ ಭಾರತೀಯ ಸೇನೆಗಿಂತ ಮುಂಚೆ ತಮ್ಮ ಸಂಘಟನೆ ಸಜ್ಜಾಗಿರುತ್ತದೆ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹಿಂದೊಮ್ಮೆ ಹೇಳಿದ್ದರು,

ಆರೆಸ್ಸೆಸ್ ಇದನ್ನೆಲ್ಲ ಮಾಡಿದ್ದು ದೇಶಕ್ಕಾಗಿ ಅಲ್ಲ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಮಾಡಲು. ಅದು ಈ ಎಲ್ಲ ಜನ, ಧನ ಸಂಪನ್ಮೂಲಗಳನ್ನು ಸಂಗ್ರಹಿಸಿದೆ. ಭಾರತದ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿರುವ, ಮಾಡುತ್ತಿರುವ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳಿಗೆ ಕಮ್ಯುನಿಸ್ಟರು ಅಡ್ಡಿಯಾಗಿದ್ದಾರೆ. ಅವರನ್ನು ಮುಗಿಸಲು ಆರೆಸ್ಸೆಸ್‌ನಂಥ ಫ್ಯಾಶಿಸ್ಟ್ ಸಂಘಟನೆಗಳ ಆವಶ್ಯಕತೆ ಈ ಕಾರ್ಪೊರೇಟ್ ಲೂಟಿಕೋರರಿಗೆ ಇದೆ. ಈ ಕಾರ್ಪೊರೇಟ್ ಮತ್ತು ಕೇಸರಿ ಪರಿವಾರದ ಮೈತ್ರಿ ಕೂಟ ಈ ಚುನಾವಣೆಯಲ್ಲಿ ಗೆದ್ದು ಬಂದಿದೆ.

ಈ ಗಂಡಾಂತರದ ಅಪಾಯ ಜ್ಯೋತಿ ಬಸು, ಹರಕಿಷನ್ ಸಿಂಗ್ ಸುರ್ಜಿತ್, ಇಂದ್ರಜಿತ್ ಗುಪ್ತ, ಭೂಪೇಶ ಗುಪ್ತ ಅವರಂಥ ಕಮ್ಯುನಿಸ್ಟ್ ನಾಯಕರಿಗೆ ಇತ್ತು. ಈಗ ಅವರಿಲ್ಲ. ತೊಂಬತ್ತರ ದಶಕದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಿ ಜ್ಯೋತಿ ಬಸು ಅವರನ್ನು ಪ್ರಧಾನಿಯಾಗಿ ಮಾಡಲು ಒಮ್ಮತದಿಂದ ತೀರ್ಮಾನಿಸಿದ್ದವು. ಆಗ ಜ್ಯೋತಿ ಬಸು ಪ್ರಧಾನಿಯಾಗಿದ್ದರೆ ದೇಶಕ್ಕೆ ಇಂಥ ದುರಂತ ಸ್ಥಿತಿ ಬರುತ್ತಿರಲಿಲ್ಲ. ಆದರೆ ಬಸು ಪ್ರಧಾನಿಯಾಗುವುದನ್ನು ಅವರ ಪಕ್ಷದ ಕೆಲವರು ತಪ್ಪಿಸಿದರು. ಇದನ್ನು ಚಾರಿತ್ರಿಕ ಪ್ರಮಾದ ಎಂದು ಬಸು ಕರೆದರು. ಇದಾದ ನಂತರ 2004ರಲ್ಲಿ ಕಮ್ಯುನಿಸ್ಟರು ಇನ್ನೊಂದು ತಪ್ಪು ಮಾಡಿದರು. ಅಮೆರಿಕದ ಜೊತೆಗಿನ ಅಣು ಒಪ್ಪಂದದ ನೆಪ ಮಾಡಿಕೊಂಡು ಯುಪಿಎ-1 ಸರಕಾರಕ್ಕೆ ಬೆಂಬಲವನ್ನು ವಾಪಸು ಪಡೆದರು. ಇದರ ಬಗೆಗೂ ಬಸು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವರ ಮಾತಿಗೆ ಬೆಲೆ ಸಿಗಲಿಲ್ಲ. ಹೀಗಾಗಿ ದೇಶದ ರಾಜಕೀಯ ಅಧಿಕಾರವನ್ನು ಫ್ಯಾಶಿಸ್ಟರು ಕಬಳಿಸಲು ಸಾಧ್ಯವಾಯಿತು. ಈಗ ಕಮ್ಯುನಿಸ್ಟರ ಪರಿಸ್ಥಿತಿ ಚಿಂತಾಜನಕವಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ವೋಟುಗಳು ಮಾತ್ರವಲ್ಲ ಕಾರ್ಯಕರ್ತರೂ ಬಿಜೆಪಿಗೆ ಹೋಗುತ್ತಿದ್ದಾರೆ.

ಕಮ್ಯುನಿಸ್ಟರು ಏನೇ ತಪ್ಪುಮಾಡಿರಲಿ ಬಡವರ, ದಲಿತರ, ಅಲ್ಪಸಂಖ್ಯಾತರ ಪರವಾಗಿ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ಈಗ ಮುಂಚಿನಂತಿಲ್ಲ. ಅದೀಗ ಬರೀ ಗುತ್ತಿಗೆದಾರರ, ಲಾಭಕೋರರ ಪಾರ್ಟಿ. ಅದು ದಾರಿ ತಪ್ಪದಂತೆ ನಡೆಯಬೇಕಾದರೆ ಕಮ್ಯುನಿಸ್ಟರು ದುರ್ಬಲವಾಗಬಾರದು. ಕಮ್ಯುನಿಸ್ಟರು ಶಕ್ತಿ ಕಳೆದುಕೊಂಡರೆ ಬಡವರ ಪರವಾಗಿ ಕೋಮುವಾದಿಗಳ ವಿರುದ್ಧ ದನಿಯೆತ್ತುವವರೇ ಇಲ್ಲದಂತಾಗುತ್ತದೆ. ಹಾಗಾಗಬಾರದು. 1989ರಲ್ಲಿ ಬಿಜೆಪಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿತ್ತು. ಅದೀಗ ಅಧಿಕಾರಕ್ಕೆ ಬಂದಿದೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಸೋತು ಸುಣ್ಣವಾಗಿದೆ. ಇದು ಶಾಶ್ವತವಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನಲ್ಲಿ ಅವರ ಹಿತರಕ್ಷಣೆ ಮಾಡುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು. ಆದರೆ ಬಡವರ, ನೊಂದವರ ಕಣ್ಣೀರು ಒರೆಸುವ ಕಮ್ಯುನಿಸ್ಟರು ಮತ್ತೆ ಚೇತರಿಸಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದು ಸಾಧ್ಯವೇ?

ಕಮ್ಯುನಿಸ್ಟರು ಬಡವರನ್ನು, ದುಡಿಯುವ ಜನರನ್ನು ಜಾತಿ ಮತದ ಅಡ್ಡಗೋಡೆ ಕೆಡವಿ ಒಂದುಗೂಡಿಸಿದರು. ದುಡಿಯುವ ಜನ ಒಂದುಗೂಡಿದರೆ ಜಗತ್ತನ್ನೆ ಗೆಲ್ಲಬಹುದು. ಇದು ತಿಳಿದೇ ಕಾರ್ಪೊರೇಟ್ ಬಂಡವಾಳಶಾಹಿಗಳು ಆರೆಸ್ಸೆಸ್‌ನಂಥ ಕೋಮುವಾದಿ, ಫ್ಯಾಶಿಸ್ಟ್ ಸಂಘಟನೆಗಳನ್ನು ಬಳಸಿಕೊಂಡು ಬಡವರ ಏಕತೆ ಒಡೆದರು.

ಕಮ್ಯುನಿಸ್ಟರ ಜೊತೆಗೆ ಇರುವ ಸಂಘಟಿತ ಕಾರ್ಮಿಕರು, ಬ್ಯಾಂಕ್, ಜೀವವಿಮಾ ನೌಕರರು ಮೋದಿ, ಮೋದಿ ಎಂದು ಬಿಜೆಪಿಗೆ ಮತ ಹಾಕಿ ಚುನಾಯಿಸಿದರು. ಇನ್ನು ಮುಂದಿದೆ ಮಾರಿ ಅಲ್ಲ ಮೋದಿ ಹಬ್ಬ. ಬಡವರ ದಮನಕಾಂಡ.

ಇದು ಬಡವರು, ದಲಿತರು, ದುಡಿಯುವ ಜನ ತಮ್ಮನ್ನು ತಾವೇ ಸೋಲಿಸಿಕೊಂಡ ಚುನಾವಣೆ. ಕಾಲ ಮಿಂಚಿ ಹೋಗಿದೆ. ಎನ್ ಕೌಂಟರ್ ಆರೋಪಿ ಮಹಾಶಯ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ. ಲೋಕಸಭೆಯಲ್ಲಿ ಗಟ್ಟಿಯಾಗಿ ಮಾತನಾಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲಾಗಿದೆ. ರಾಜ್ಯಸಭೆಯಲ್ಲಿ ಸರಕಾರದ ಭೂತ ಬಿಡಿಸುತ್ತಿದ್ದ ಕಾಮ್ರೇಡ್ ಸೀತಾರಾಮ ಯೆಚೂರಿ ಇಲ್ಲ. ಬೇಗುಸರಾಯಿನಿಂದ ಕನ್ಹಯ್ಯೇ ಕುಮಾರ ಗೆದ್ದಿದ್ದರೆ ಕೊಂಚ ನೆಮ್ಮದಿಯಿಂದ ಉಸಿರಾಡಬಹುದಿತ್ತು. ಅದೂ ಆಗಲಿಲ್ಲ.

ಸಂಸತ್ತಿನ ಉಭಯ ಸದನಗಳಲ್ಲೂ ಅಂಬಾನಿ, ಅದಾನಿ, ಮಿತ್ತಲ್ ಕಾರ್ಪೊರೇಟ್‌ಗಳ ಪರವಾಗಿ ಮಾತಾಡುವವರಿದ್ದಾರೆ. ಸ್ವತಃ ಪ್ರಧಾನ ಮಂತ್ರಿಗಳೇ ಅವರ ಹಿತಾಸಕ್ತಿ ರಕ್ಷಿಸುತ್ತಾರೆ. ಆದರೆ ಬೀದಿಯಲ್ಲಿರುವ ಬಡವರ ಪರವಾಗಿ, ಕಾಡುಗಳಿಂದ ಹೊರದಬ್ಬಲ್ಪಡುವ ಆದಿವಾಸಿಗಳ ಪರವಾಗಿ, ಅಸಂಖ್ಯಾತ ಅಸಂಘಟಿತ ಕಾರ್ಮಿಕರ, ಮಹಿಳೆಯರ, ದಲಿತರ ಪರವಾಗಿ ಧ್ವನಿಯೆತ್ತುವವರಿಲ್ಲ. ಇದು ದೇಶದ ಇಂದಿನ ಸ್ಥಿತಿ. ಆದರೆ ಇದೇ ಕೊನೆಯಲ್ಲ. ಎಡಪಂಥೀಯರು ಮತ್ತೆ ಪುಟಿದೆದ್ದು ಮುಂಚೂಣಿಗೆ ಬರಬಹದು. ಅದಾಗಬೇಕಾದರೆ ಕಮ್ಯುನಿಸ್ಟರು ಹದಿನೈದರಿಂದ ಇಪ್ಪತ್ತೈದರೊಳಗಿನ ಯುವಕರ ಮನಸ್ಸನ್ನು ಗೆಲ್ಲಬೇಕು. ಕ್ರಾಂತಿಯ ಕನಸನ್ನು ಬಿತ್ತಬೇಕು. ಜಾತಿ,ಮತದ ಗೋಡೆಯನ್ನು ಕೆಡವಬೇಕು. ಸೋಲಿನ ಅಂಗಳದಲ್ಲೇ ಗೆಲುವಿನ ಬಾವುಟ ಹಾರಿಸಬೇಕು.

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಎಡಪಂಥೀಯರು ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು. ಅದೇ ಭಾರತದ ಇಂದಿನ ಕಗ್ಗತ್ತಲಲ್ಲಿ ಬೆಳಕಿನ ಆಶಾಕಿರಣ. ಅದಾಗಬೇಕಾದರೆ ಕೆಂಪು, ಕಡುಗೆಂಪು, ಉರಿಗೆಂಪು ಹೀಗೆ ಎಲ್ಲ ಕಮ್ಯುನಿಸ್ಟರು ಒಂದಾಗಬೇಕು. ನಲವತ್ತರ ದಶಕದಲ್ಲಿ ಜರ್ಮನಿಯಲ್ಲಿ ನಾಜಿ ಹಿಟ್ಲರ್‌ನನ್ನು, ಇಟಲಿಯಲ್ಲಿ ಮುಸಲೋನಿಯನ್ನು ಮಣ್ಣು ಮುಕ್ಕಿಸಿದ ಕಮ್ಯುನಿಸ್ಟರು ಇಲ್ಲೂ ಮನುವಾದಿ ಫ್ಯಾಶಿಸ್ಟರನ್ನು ಹಿಮ್ಮೆಟ್ಟಿಸಲಿ. ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಲಿ.

ಬರಹದ ಕೊನೆಗೆ ಒಂದು ಮಾತು. ಬಿಜೆಪಿ ಪಡೆದ ಬಹುಮತದ ಬಗ್ಗೆ ವಿವಾದ ಉಂಟಾಗಿತ್ತಿದೆ. ಫಲಿತಾಂಶದಲ್ಲಿ ಎಲ್ಲವೂ ಜನಾದೇಶವಲ್ಲ. ಅರ್ಧ ಜನಾದೇಶ ಉಳಿದರ್ಧ ಇವಿಎಂ ಆದೇಶ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಈ ವಿಶ್ಲೇಷಣೆಯನ್ನು ಆ ಹಿನ್ನೆಲೆಯಲ್ಲಿ ಓದಿದರೆ ಸೂಕ್ತ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News