ಮಕ್ಕಳ ಪಾಲನೆ- ಆರೋಗ್ಯದ ಕುರಿತಂತೆ....

Update: 2019-06-02 18:36 GMT

ಕಾಲ ಬದಲಾಗಿದೆ. ಗಂಡ, ಮನೆ, ಮಕ್ಕಳು, ಸಂಸಾರ, ನೋಡಿಕೊಳ್ಳುತ್ತಿದ್ದ ಹೆಣ್ಣು ಮಗಳು ಮನೆಯ ಹೊರಗೆ ಕಾಲಿಟ್ಟು ದುಡಿದು ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದಾಳೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳನ್ನು ಆರೈಕೆ ಮಾಡಲು ಹಿರಿಯರಿಲ್ಲದೆ ಹೆತ್ತವರು ಕಂಗಾಲಾಗಿದ್ದಾರೆ. ಆಧುನಿಕ ದಿನಗಳಲ್ಲಿ ಮಕ್ಕಳ ಪಾಲನೆ ಒಂದು ದೊಡ್ಡ ಸವಾಲೇ ಆಗಿದೆ. ಈ ಸವಾಲನ್ನು ಎದುರಿಸುವಲ್ಲಿ ಕುಟುಂಬ ವಿಫಲವಾಗುತ್ತಿದೆ. ಮಕ್ಕಳ ಪಾಲನೆ ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾದುದು. ತಾಯಿಯ ಮಡಿಲ ವಾತ್ಸಲ್ಯದ ಕೊರತೆಯಿಂದ ಬೆಳೆಯುವ ಮಗು ಎದುರಿಸುವ ಮಾನಸಿಕ ಸವಾಲುಗಳು ಹಲವು. ಅದು ಭವಿಷ್ಯದಲ್ಲೂ ತನ್ನ ಪರಿಣಾಮಗಳನ್ನು ಬೀರಬಹುದು. ಈ ನಿಟ್ಟಿನಲ್ಲಿ ಡಾ. ಎಂ. ಡಿ. ಸೂರ್ಯಕಾಂತ ಅವರ ‘ಮಕ್ಕಳ ಪಾಲನೆ-ಆರೋಗ್ಯ’ ಆಸಕ್ತಿಕರವಾದ ಕೃತಿಯಾಗಿದೆ. ಹಿರಿಯ ತಲೆಮಾರಿನ ಕೊಂಡಿಯನ್ನು ಕಳಚಿಕೊಂಡಿರುವ ಹೊಸ ತಲೆಮಾರಿನ ತಾಯಂದಿರಿಗೆ ಈ ಕೃತಿ ಅತ್ಯಂತ ಮಹತ್ವಪೂರ್ಣವಾದ ಮಾರ್ಗದರ್ಶನಗಳನ್ನು ನೀಡುತ್ತದೆ.
ಮೊದಲ ಅಧ್ಯಾಯವೇ, ಮಗುವಿನ ಜೊತೆಗಿನ ಸಂವಹನ. ಮಗುವಿಗೆ ನಮ್ಮ ಭಾಷೆಯೇ ತಿಳಿದಿಲ್ಲ. ಹೀಗಿರುವಾಗ ಅದರೊಂದಿಗೆ ಸಂವಹ ಮಾಡುವ ಬಗೆ ಹೇಗೆ? ಈ ಕುರಿತ ವಿವರಗಳನ್ನು ಹೊಂದಿರುವ ಅಧ್ಯಾಯ ‘ಮಗು ಜೊತೆ ಯಾವ ಭಾಷೆ ಮಾತನಾಡಲಿ?’. ಬಳಿಕ ಹೆರಿಗೆಗೆ ಮೊದಲು ಮತ್ತು ನಂತರ ಮಹಿಳೆಯ ದಿನಚರಿ, ಸ್ತನ್ಯ ಪಾನಕ್ಕೆ ಬೇಕಾದ ಸಿದ್ಧತೆ, ಎದೆ ಹಾಲು ಉಣಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ, ಸ್ನಾನ ಮಾಡಿಸುವ ಸಂದರ್ಭದಲ್ಲಿ ಉಂಟಾಗುವ ಆತಂಕ,   ಮಕ್ಕಳೊಂದಿಗೆ ಆಟದ ರೀತಿ, ಬಣ್ಣದ ಆಟಿಕೆಗಳು ಮಗುವಿಗೆ ಹೇಗೆ ಸಮಸ್ಯೆಯನ್ನು ಉಂಟು ಮಾಡಬಹುದು ಎಂಬಿತ್ಯಾದಿ ಪ್ರಾಥಮಿಕ ವಿವಗಳನ್ನು ಲೇಖಕರು ದಾಖಲಿಸಿದ್ದಾರೆ.
ಹಾಗೆಯೇ ಡಯಾಪರ್ ಆಯ್ಕೆ, ಮಗು ಎದುರಿಸಬಹುದಾದ ರೋಗಗಳು, ಅದರ ತಡೆ, ಕೆಲಸದಾಕೆಯ ಜೊತೆಗೆ ಮಗುವನ್ನು ಒಪ್ಪಿಸುವಾಗ ಇರಬೇಕಾದ ಎಚ್ಚರಿಕೆ, ಮಕ್ಕಳನ್ನು ಕಾಡುವ ವಿವಿಧ ಕಾಯಿಲೆಗಳು, ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದರೆ ಪಾಲಕರು ಅದರ ಜೊತೆಗೆ ವ್ಯವಹರಿಸುವ ರೀತಿ ಇತ್ಯಾದಿ ಇತ್ಯಾದಿ ಸಮಗ್ರ ಮಾಹಿತಿಗಳನ್ನು ಈ ಕೃತಿ ಹೊಂದಿದೆ. ಮಗುವಿನ ಬೌದ್ಧಿಕ ಬೆಳವಣಿಗೆಗಳಿಗೆ ಪೂರಕವಾಗುವ ಚಟುವಟಿಕೆಗಳ ಬಗ್ಗೆಯೂ ಲೇಖಕರು ವಿವರಗಳನ್ನು ನೀಡುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 120. ಮುಖಬೆಲ 125 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News