ಕಟ್ಟಡದ ನಕ್ಷೆ-ಭೂ ಪರಿವರ್ತನೆಗಾಗಿ ಆನ್‌ಲೈನ್ ಮೂಲಕ ಅರ್ಜಿ: ಯು.ಟಿ.ಖಾದರ್

Update: 2019-06-03 14:55 GMT

ಬೆಂಗಳೂರು, ಜೂ.3: ಕಟ್ಟಡ ನಿರ್ಮಾಣದ ನಕ್ಷೆ, ಭೂ ಪರಿವರ್ತನೆ ಹಾಗೂ ಬಡಾವಣೆ ನಿರ್ಮಾಣಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಾಫ್ಟ್‌ವೇರ್ ಅನ್ನು ಐಡಿಎಸ್‌ಐ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರಿಗೆ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೂ.11ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಸಾಫ್ಟ್‌ವೇರ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಎಲ್‌ಬಿಪಿಎಎಸ್ ವೆಬ್ ಪೋರ್ಟಲ್‌ನಲ್ಲಿ ಬಳಕೆದಾರರು ನೋಂದಣಿ ಮಾಡಿಸಿಕೊಂಡು, ಅರ್ಜಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಬಳಿಕ, ಸಂಬಂಧಪಟ್ಟ ಎಲ್ಲ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ ಎಂದು ಅವರು ಹೇಳಿದರು.

ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಅನುಮತಿ ಸಿಗುತ್ತದೆ. ಆನಂತರ, ನಿಗದಿತ ಶುಲ್ಕವನ್ನು ಪಾವತಿಸಿದರೆ ಆನ್‌ಲೈನ್ ಮೂಲಕವೇ ಡಿಜಿಟಲ್ ಸಹಿಯುಳ್ಳ ಅನುಮತಿ ಪತ್ರ ಸಿಗುತ್ತದೆ. ಕಟ್ಟಡ ನಿರ್ಮಾಣದ ನಕ್ಷೆ, ಭೂ ಪರಿವರ್ತನೆ ಹಾಗೂ ಬಡಾವಣೆ ನಿರ್ಮಾಣ ಈ ಮೂರು ಅಂಶಗಳಿರುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ, ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸುತ್ತಿರುವ ಮೊದಲ ರಾಜ್ಯ ನಮ್ಮದು ಎಂದು ಅವರು ಹೇಳಿದರು.

ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಿರುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ. ಕಟ್ಟಡ ನಿರ್ಮಾಣ, ಭೂ ಪರಿವರ್ತನೆ, ಬಡಾವಣೆ ನಿರ್ಮಾಣಕ್ಕಾಗಿ ಎನ್‌ಓಸಿ ಪಡೆಯಲು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಖಾದರ್ ತಿಳಿಸಿದರು.

30x40 ವಿಸ್ತೀರ್ಣದ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಈ ಸಾಫ್ಟ್‌ವೇರ್‌ನಿಂದ ಹೆಚ್ಚಿನ ಅನುಕೂಲವಾಗಲಿದ್ದು, ಈ ವಿಸ್ತೀರ್ಣವನ್ನು 30x50ಗೆ ಹೆಚ್ಚಿಸುವಂತೆಯೂ ಸಾರ್ವಜನಿಕರಿಂದ ಮನವಿಗಳು ಬಂದಿವೆ. ಇಲಾಖೆಯು ಈ ಸಂಬಂಧ ಪರಿಶೀಲನೆ ನಡೆಸುತ್ತಿದೆ ಎಂದು ಖಾದರ್ ತಿಳಿಸಿದರು.

ಇ-ಆಸ್ತಿ: ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಹಾಗೂ ಖಾತೆಗಳ ಬದಲಾವಣೆಗೆ ಅನುಕೂಲಕವಾಗುವಂತೆ ‘ಇ-ಆಸ್ತಿ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದು ಖಾದರ್ ಹೇಳಿದರು.

ಮೊಬೈಲ್ ಟವರ್: ರಾಜ್ಯದಲ್ಲಿ ಮೊಬೈಲ್ ಟವರ್‌ಗಳ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ಸೂಕ್ತವಾದ ಮಾರ್ಗಸೂಚಿಗಳು ಇರಲಿಲ್ಲ. ಈಗ ನಮ್ಮ ಸರಕಾರ ಮೊಬೈಲ್ ಟವರ್ ಅಳವಡಿಕೆಗೆ ಸಂಬಂಧಿಸಿದಂತೆ ನೂತನ ನೀತಿ ಜಾರಿಗೆ ತರುತ್ತಿದೆ ಎಂದು ಖಾದರ್ ತಿಳಿಸಿದರು.

ಮೊಬೈಲ್ ಟವರ್‌ಗಳ ಅಳವಡಿಕೆಗೆ ಸಂಬಂಧಿಸಿದಂತೆ ಈ ಮೊದಲು ಯಾವುದೇ ನೀತಿ ನಿಯಮಗಳು ಇರಲಿಲ್ಲ. ಅತೀ ಹೆಚ್ಚು ಟವರ್‌ಗಳ ಅಳವಡಿಕೆಯಿಂದ ಜನಸಾಮಾನ್ಯರು, ಪಕ್ಷಿಗಳ ಸೇರಿದಂತೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾವು ಹೊಸ ಮಾರ್ಗ ಸೂಚಿಗಳನ್ನು ಅಳವಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಮೊಬೈಲ್ ಟವರ್ ಅಳವಡಿಸಲು ಒಂದು ಲಕ್ಷ ರೂ., ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರ ರೂ., ನಗರ ಸಭೆಗಳ ವ್ಯಾಪ್ತಿಯಲ್ಲಿ 35 ಸಾವಿರ ರೂ., ಪುರಸಭೆಗಳ ವ್ಯಾಪ್ತಿಯಲ್ಲಿ 25 ಸಾವಿರ ರೂ., ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 20 ಸಾವಿರ ರೂ., ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಸಾವಿರ ರೂ. ತೆರಿಗೆಯನ್ನು ಆಸ್ತಿ ಮಾಲಕರು ಪಾವತಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News