ಕುಶಾಲನಗರ: ಕಾವೇರಿ ನದಿಗಿಳಿದ ಮೂವರು ವಿದ್ಯಾರ್ಥಿಗಳು ಮೃತ್ಯು

Update: 2019-06-06 12:28 GMT

ಮಡಿಕೇರಿ: ಸ್ನೇಹಿತನ ಮನೆಯಲ್ಲಿ ಈದ್ ಆಚರಿಸಿ ನಂತರ ಕುಶಾಲನಗರದ ಮಾದಾಪಟ್ಟಣ ಬಳಿಯ ಕಾವೇರಿ ನದಿಗಿಳಿದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ.

ಘಟನೆಯಲ್ಲಿ ಮಡಿಕೇರಿಯ ಉಕ್ಕುಡ ಬಡಾವಣೆಯ ರಮೇಶ್ ಎಂಬವರ ಪುತ್ರ ಆರ್. ಆಕಾಶ್(17), ಜಿಲ್ಲಾ ಕ್ರೀಡಾಂಗಣ ಮ್ಯಾನ್ಸ್ ಕಾಂಪೌಂಡ್ ಬಳಿಯ ನಿವಾಸಿ ಚೆಲುವರಾಜು ಎಂಬವರ ಮಗ ಗಗನ್(17) ಮತ್ತು ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಉಮೇಶ್ ಎಂಬವರ ಪುತ್ರ ಶಶಾಂಕ್(17) ಎಂಬವರು ಸಾವನ್ನಪ್ಪಿದ ವಿದ್ಯಾರ್ಥಿಗಳು. ಈ ಮೂವರು ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.

ಈದ್ ಹಬ್ಬದ ಹಿನ್ನೆಲೆಯಲ್ಲಿ ಆಕಾಶ್, ಗಗನ್, ಶಶಾಂಕ್ ಸೇರಿದಂತೆ ಒಟ್ಟು ಹತ್ತು ಮಂದಿ ಸಹಪಾಠಿಗಳು ಸುಂಟಿಕೊಪ್ಪ ಸಮೀಪದ ಸ್ಯಾಂಡಲ್‍ ಕಾಡ್‍ ನಲ್ಲಿರುವ ಸ್ನೇಹಿತ ಮನ್ಸೂರ್ ಮನೆಗೆ ತೆರಳಿ, ಮಧ್ಯಾಹ್ನ ಹಬ್ಬದೂಟವನ್ನು ಮಾಡಿದ್ದರು. ಬಳಿಕ ಸ್ನೇಹಿತರು ಕುಶಾಲನಗರದ ಮಾದಾಪಟ್ಟಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯ ಕಾವೇರಿ ನದಿ ಬಳಿಗೆ ತೆರಳಲು ನಿರ್ಧರಿಸಿದ್ದರು.

ರಮೇಶ್, ಗಗನ್ ಮತ್ತು ಶಶಾಂಕ್ ಅವರು ಬೈಕ್‍ನಲ್ಲಿ ಮಾದಾಪಟ್ಟಣ ಕಾವೇರಿ ನದಿ ಬಳಿಗೆ ಮಧ್ಯಾಹ್ನ 2.30 ರ ಸುಮಾರಿಗೆ ತೆರಳಿದರಾದರೆ, ಉಳಿದ ಸ್ನೇಹಿತರು ಬಸ್‍ನಲ್ಲಿ ಅಲ್ಲಿಗೆ ಹೋದರು ಎನ್ನಲಾಗಿದೆ. ಬಸ್‍ನಲ್ಲಿ ಸ್ನೇಹಿತರು ಬರುವುದಕ್ಕೆ ಮುಂಚಿತವಾಗಿಯೇ ರಮೇಶ್, ಗಗನ್ ಮತ್ತು ಶಶಾಂಕ್ ಅವರು ಕಾವೇರಿ ನದಿಗೆ  ಇಳಿದವರು ನೀರು ಪಾಲಾಗಿದ್ದು, ಈ ಹಂತದಲ್ಲಿ ಇದನ್ನು ಗಮನಿಸಿದ ಸ್ಥಳೀಯರು ಯುವಕರ ರಕ್ಷಣೆಗೆ ಪ್ರಯತ್ನಿಸಿದರಾದರು ಅದು ಫಲಕಾರಿಯಾಗಲಿಲ್ಲ. 

ವಿಷಯವರಿತ ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News