ದೇವಸ್ಥಾನ ಪ್ರವೇಶಿಸಿದ ದಲಿತ ವ್ಯಕ್ತಿಗೆ ಊರಿನಿಂದ ಬಹಿಷ್ಕಾರ! : ಡಿಸಿಎಂ ಕ್ಷೇತ್ರದಲ್ಲಿ ನಡೆದ ಘಟನೆ

Update: 2019-06-06 12:45 GMT

ತುಮಕೂರು: ಕೊರಟಗೆರೆ ತಾಲ್ಲೂಕು ಮಲ್ಲೇಕಾವು ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತನನ್ನು ಗ್ರಾಮಸ್ಥರು ಪಂಚಾಯತಿ ಸೇರಿ ಊರಿನಿಂದ ಬಹಿಷ್ಕಾರ ಹಾಕಿರುವುದಲ್ಲದೆ, ದೇವಾಸ್ಥಾನದ ಮೈಲಿಗೆಯನ್ನು ಹೋಗಲಾಡಿಸಲು ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಲ್ಲೇಕಾವು ಗ್ರಾಮದ ದೊಡ್ಡಮ್ಮ ದೇವಿಯ ದೇವಾಲಯದಲ್ಲಿ ಮೇ.13-14 ರಂದು ಜಾತ್ರೆ ನಡೆದಿದೆ. ಜಾತ್ರೆಯ ಒಂದು ವಾರದ ಬಳಿಕ ಅಂದರೆ ಮೇ 19 ಹಾಗೂ 20 ರಂದು ದೇವಾಲಯದಲ್ಲಿ ಮರುಪೂಜೆ ಏರ್ಪಡಿಸಿದ್ದು, ಅಂದು ದಲಿತ ಸಮುದಾಯಕ್ಕೆ ಸೇರಿದ ಜಗದೀಶ್ ಎನ್ನುವ ವ್ಯಕ್ತಿ ಕುಟುಂಬ ಸಮೇತ ದೇವಾಲಯಕ್ಕೆ ಪ್ರವೇಶಿದ್ದರಿಂದ, ಗ್ರಾಮಸ್ಥರು ಪಂಚಾಯ್ತಿ ಸೇರಿ ಜಗದೀಶ್ ಎಂಬುವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ.

ಜಗದೀಶ್ ದೇಗುಲ ಪ್ರವೇಶ ಮಾಡಿರುವುದರಿಂದ ದೇವಾಲಯ ಅಪವಿತ್ರವಾಗಿದೆ, ದೇವಾಲಯ ಶುದ್ಧಿ ಹಾಗೂ ದೇವಾಲಯಕ್ಕೆ ಹೊಸದಾಗಿ ಬಣ್ಣ ಬಳಿಸಲು ಆಗುವ ವೆಚ್ಚವನ್ನು ಭರಿಸುವಂತೆ ಪಂಚಾಯತಿ ಆದೇಶ ನೀಡಿದೆ. ದೇವಾಲಯ ಪ್ರವೇಶ ಮಾಡಿರುವುದರಿಂದ ಊರು ಅಪವಿತ್ರವಾಗಿದ್ದು, ಊರೊಳಗೆ ಕಾಲಿಡಂತೆ ಅನ್ಯ ಜಾತಿಯವರು ಎಚ್ಚರಿಕೆ ನೀಡಿದ್ದು, ಪೊಲೀಸರ ಸಹಾಯದಿಂದ ಗ್ರಾಮಕ್ಕೆ ಪ್ರವೇಶ ಮಾಡಿದ ಜಗದೀಶ್‍ಗೆ ಊರಿನಲ್ಲಿ ಆತಂಕದಿಂದಲೇ ಬದುಕುವಂತಾಗಿದೆ.

ಊರಿನಿಂದ ಬಹಿಷ್ಕಾರ ಹಾಕಿದ ಪಂಚಾಯಿತಿ ಮುಖಂಡರಾದ ಸೋಮಣ್ಣ, ದಾಸಪ್ಪ, ಶಂಕರ್, ಕುಮಾರ್ ಸೇರಿದಂತೆ 9 ಮಂದಿಯ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳೆಲ್ಲ ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಡಿವೈಎಸ್‍ಪಿ ಶ್ರೀನಿವಾಸ್ ಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News