ದೇಶದ ಶೇ.44ರಷ್ಟು ಭಾಗ ಬರಗಾಲದ ದವಡೆಯಲ್ಲಿ

Update: 2019-06-06 15:47 GMT

►ಕರ್ನಾಟಕ, ಮಹಾರಾಷ್ಟ್ರದ 82 ಲಕ್ಷ ರೈತರು ಸಂಕಷ್ಟದಲ್ಲಿ

ಹೊಸದಿಲ್ಲಿ,ಜೂ.6: ಕರ್ನಾಟಕದ ಶೇ.80ರಷ್ಟು ಮತ್ತು ಮಹಾರಾಷ್ಟ್ರದ ಶೇ.72ರಷ್ಟು ಜಿಲ್ಲೆಗಳು ಬರ ಮತ್ತು ಬೆಳೆ ವೈಫಲ್ಯದಿಂದ ನಲುಗುತ್ತಿದ್ದು,ಇವೆರಡೂ ರಾಜ್ಯಗಳ 82 ಲಕ್ಷಕ್ಕೂ ಅಧಿಕ ರೈತರು ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಉಭಯ ರಾಜ್ಯಗಳ ನಡುವೆ ಸಾಮಾನ್ಯ ಜಲ ಸಂಪನ್ಮೂಲಗಳ ಕುರಿತು ಸಂಘರ್ಷ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದ್ದು,ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳ 4,920 ಗ್ರಾಮಗಳು ಮತ್ತು 10,506 ಜನವಸತಿ ಹಾಡಿಗಳಿಗೆ ನೀರು ಪೂರೈಸಲು 6,000ಕ್ಕೂ ಅಧಿಕ ಟ್ಯಾಂಕರ್‌ಗಳು ಶ್ರಮಿಸುತ್ತಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಅಲ್ಪಾವಧಿ ಬೇಸಿಗೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು indiaspend.com ವರದಿಯು ಹೇಳಿದೆ.

ಅತ್ತ ಚೆನ್ನೈಗೆ ನೀರು ಪೂರೈಸುವ ನಾಲ್ಕು ಜಲಾಶಯಗಳಲ್ಲಿನ ನೀರಿನ ಸಂಗ್ರಹ ಒಟ್ಟು ಸಾಮರ್ಥ್ಯದ ಶೇ.ಒಂದಕ್ಕೂ ಕಡಿಮೆಯಾಗಿದ್ದು,ತೀವ್ರ ನೀರಿನ ಕೊರತೆಯಾಗಿದೆ ಮತ್ತು ಚೆನ್ನೈ ಮೆಟ್ರೋ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ ತಮಿಳುನಾಡು ಸರಕಾರವು ಹಲವಾರು ಆಪತ್ಕಾಲೀನ ಜಲ ಯೋಜನೆಗಳಿಗಾಗಿ 233 ಕೋ.ರೂ.ಗಳನ್ನು ಮಂಜೂರು ಮಾಡಿದೆ. ನಲ್ಲಿ ನೀರಿನ ಪ್ರಮಾಣವನ್ನು ಶೇ.40ರಷ್ಟು ಕಡಿತಗೊಳಿಸಲಾಗಿದ್ದು,ಜನರು ನೀರಿನ ಟ್ಯಾಂಕರ್‌ಗಳನ್ನು ಕಾಯುತ್ತ ಸರದಿ ಸಾಲುಗಳಲ್ಲಿ ಒಣಗುತ್ತಿದ್ದಾರೆ. ಟ್ಯಾಂಕರ್‌ಗಳ ಮೂಲಕ ಪೂರೈಸಲಾಗುತ್ತಿರುವ ನೀರು ಕೆಟ್ಟ ವಾಸನೆಯನ್ನು ಬೀರುತ್ತಿದ್ದು,ಒಳಚರಂಡಿಯ ತ್ಯಾಜ್ಯ ನೀರು ಸೇರಿಕೊಂಡಂತಿದೆ ಎಂದು ಜನರು ದೂರುತ್ತಿದ್ದಾರೆ.

ಮಳೆಯ ಅಭಾವ

ಬರಗಾಲ ಮುನ್ನೆಚ್ಚರಿಕೆ ವ್ಯವಸ್ಥೆಯ ವರದಿಯಂತೆ ಮೇ 30ಕ್ಕೆ ಇದ್ದಂತೆ ದೇಶದ ಶೇ.43.4ಕ್ಕೂ ಹೆಚ್ಚಿನ ಭಾಗವು ಬರದ ದವಡೆಯಲ್ಲಿ ಸಿಲುಕಿದೆ. ಮುಂಗಾರು ಮಳೆಯ ವೈಫಲ್ಯ ಪ್ರಚಲಿತ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ಭಾರತವು 2017ನ್ನು ಹೊರತುಪಡಿಸಿ 2015ರಿಂದ ಪ್ರತಿ ವರ್ಷವೂ ವ್ಯಾಪಕ ಬರವನ್ನು ಅನುಭವಿಸುತ್ತಿದೆ ಎಂದು ಇಂಡಿಯಾ ಸ್ಪೆಂಡ್ ಈ ಹಿಂದೆಯೇ ವರದಿ ಮಾಡಿತ್ತು.

 ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಮಾಹಿತಿಯಂತೆ ದೇಶದ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಶೇ.10ರಿಂದ ಶೇ.20ರಷ್ಟು ಪಾಲನ್ನು ಹೊಂದಿರುವ ಹಿಂಗಾರು ಮಳೆ(ಅಕ್ಟೋಬರ್-ಡಿಸೆಂಬರ್)ಯ ಪ್ರಮಾಣ 2018ರಲ್ಲಿ ಶೇ.44ರಷ್ಟು ಕಡಿಮೆಯಾಗಿತ್ತು. 2018ರಲ್ಲಿ ಮುಂಗಾರು ಮಳೆ(ಜೂನ್-ಸೆಪ್ಟೆಂಬರ್)ಯಲ್ಲಿ ಶೇ.9.4ರಷ್ಟು ಕೊರತೆಯುಂಟಾಗಿತ್ತು. ಮುಂಗಾರು ಮಳೆಯ ಕೊರತೆ ಶೇ.10ರಷ್ಟು ಮತ್ತು ಅದಕ್ಕಿಂತ ಹೆಚ್ಚಿದ್ದರೆ ಐಎಂಡಿಯು ಬರ ಸ್ಥಿತಿಯನ್ನು ಘೋಷಿಸುತ್ತದೆ.

2019ನೇ ಸಾಲಿನಲ್ಲಿ ಸುರಿದಿರುವ ಮುಂಗಾರು ಪೂರ್ವ ಮಳೆ(ಮಾರ್ಚ್1-ಮೇ 31)ಯ ಪ್ರಮಾಣವು ಕಳೆದ 65 ವರ್ಷಗಳಲ್ಲಿಯೇ ಕನಿಷ್ಠವಾಗಿದೆ.

ಭಾರತದಲ್ಲಿ ಮೇಲ್ಮೈ ನೀರು ಮತ್ತು ಅಂತರ್ಜಲ ಸಂಪನ್ಮೂಲಗಳು ಕುಗ್ಗುತ್ತಿರುವುದರಿಂದ ಮಳೆಯು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

 ಪ್ರತಿ ವರ್ಷ ದೇಶದ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆಯು ನೀರಿನ ಅಭಾವವನ್ನು ಎದುರಿಸುತ್ತಿದೆ. ಈ ಜಲ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರಕಾರವು 2024ರ ವೇಳೆಗೆ ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಒದಗಿಸುವ ಭರವಸೆಯೊಂದಿಗೆ ‘ನಲ್ ಸೆ ಜಲ್’ ಯೋಜನೆಯನ್ನು ಮೇ 31ರಂದು ಪ್ರಕಟಿಸಿದೆ. ನೀರಿನ ಲಭ್ಯತೆ ಈ ಯೋಜನೆಯ ಮೊದಲ ಸವಾಲು ಆಗಲಿದೆ.

 ಮೇಲ್ಮೈ ನೀರು ಮತ್ತು ಅಂತರ್ಜಲ ಸೇರಿದಂತೆ ಭಾರತದ ಒಟ್ಟು ಜಲ ಸಂಪನ್ಮೂಲ ಪ್ರಮಾಣ 2,518 ಶತಕೋಟಿ ಘನ ಮೀಟರ್(ಬಿಸಿಎಂ)ಗಳಷ್ಟಿದೆ. ಮಾಲಿನ್ಯದ ಹಿನ್ನೆಲೆಯಲ್ಲಿ ದೇಶದಲ್ಲಿ 1,869 ಬಿಸಿಎಂ ಮೇಲ್ಮೈ ನೀರಿನ ಪೈಕಿ ವಾಸ್ತವದಲ್ಲಿ ಬಳಕೆಗೆ ಸಿಗುವುದು 690 ಬಿಸಿಎಂ ಮಾತ್ರ. 400 ಬಿಸಿಎಂ ಅಂತರ್ಜಲದ ಪೈಕಿ ಕೇವಲ 230 ಬಿಸಿಎಂ ನೀರನ್ನು ಪಡೆಯಬಹುದಾಗಿದೆ ಎಂದು ನೀತಿ ಆಯೋಗವು ತನ್ನ 2018ರ ವರದಿಯಲ್ಲಿ ಹೇಳಿದೆ.

 ಭಾರತದ ಜಲ ಅಗತ್ಯದ ಶೇ.40ರಷ್ಟು ಮೂಲವಾಗಿರುವ ಅಂತರ್ಜಲ ಮಟ್ಟವು ಕುಸಿಯುತ್ತಲೇ ಇದೆ. ಭಾರತವು ಅಂತರ್ಜಲವನ್ನು ಬಳಸುವ ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ (ಜಾಗತಿಕ ಬಳಕೆಯ ಶೇ.12). ಇದರ ಪರಿಣಾಮವಾಗಿ 2020ರ ವೇಳೆಗೆ ದಿಲ್ಲಿ,ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ದೇಶದ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ ಮತ್ತು 2030ರ ವೇಳೆಗೆ ಶೇ.40ರಷ್ಟು ಜನರಿಗೆ ಕುಡಿಯುವ ನೀರು ಗಗನ ಕುಸುಮವಾಗಲಿದೆ ಎಂದು ನೀತಿ ಆಯೋಗವು ಹೇಳಿದೆ.

ವರದಿಯು ಅಂತರ್ಜಲ,ನೀರಾವರಿ,ಕೃಷಿ ಪದ್ಧತಿಗಳು ಮತ್ತು ಕುಡಿಯುವ ನೀರು ಸೇರಿದಂತೆ ಒಂಭತ್ತು ವರ್ಗಗಳು ಮತ್ತು 28 ಸೂಚಕಗಳ ಆಧಾರದಲ್ಲಿ 24 ರಾಜ್ಯಗಳ ಅಂಕಿಅಂಶಗಳನು ವಿಶ್ಲೇಷಿಸಿ ಅಂಕಗಳನ್ನು ನೀಡಿದೆ. ಅಂತರ್ಜಲವನ್ನು ಹೆಚ್ಚಿಸುವಲ್ಲಿ 10 ರಾಜ್ಯಗಳು ಶೇ.50ಕ್ಕೂ ಕಡಿಮೆ ಅಂಕಗಳನ್ನು ಗಳಿಸಿದ್ದು,ಇದು ದೇಶದಲ್ಲಿಯ ಶೇ.54ರಷ್ಟು ಅಂತರ್ಜಲ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಬೆಟ್ಟು ಮಾಡಿದೆ.

2015-16ರಲ್ಲಿ ಗುಜರಾತ್ ಶೇ.76 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ(ಶೇ.69) ಮತ್ತು ಆಂಧ್ರಪ್ರದೇಶ (ಶೇ.68) ನಂತರದ ಸ್ಥಾನಗಳಲ್ಲಿದ್ದವು. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು ಶೇ.50ರಿಂದ ಶೇ.65ರಷ್ಟು ಅಂಕಗಳನ್ನು ಗಳಿಸಿವೆ.

ದೇಶಾದ್ಯಂತ ಒಂದೇ ರೀತಿಯ ಸ್ಥಿತಿಯಿದೆ. ಇಡೀ ದೇಶವೇ ಗಂಭೀರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಟ್ಟು ಮಳೆಯಲ್ಲಿ ಶೇ.80ರಷ್ಟು ಪಾಲನ್ನು ಹೊಂದಿರುವ ಮುಂಗಾರು ಮಳೆಯ ಆಗಮನ ವಿಳಂಬವಾಗಲಿದೆ ಮತ್ತು ಉತ್ತರ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಸಾಮಾನ್ಯಕ್ಕಿಂತ ಕಡಿಮೆಯಾಗಲಿದೆ ಎಂದು ಹೇಳಲಾಗಿದ್ದು,ಸದ್ಯವೇ ಈ ಬಿಕ್ಕಟ್ಟಗೆ ಪರಿಹಾರ ದೊರಕುವ ಲಕ್ಷಣಗಳಂತೂ ಕಾಣುತ್ತಿಲ್ಲ.

ಮೇ 30ಕ್ಕೆ ಇದ್ದಂತೆ ಭಾರತದ ಭಾರತದ ಪ್ರಮುಖ 91 ಜಲಾಶಯಗಳಲ್ಲಿ ನೀರಿನ ಮಟ್ಟ ಅವುಗಳ ಸಾಮರ್ಥ್ಯದ ಶೇ.20ಕ್ಕೆ ಕುಸಿದಿದೆ. ಇದು ಕಳೆದ ವರ್ಷ ಇದ್ದ ನೀರಿನ ಮಟ್ಟಕ್ಕಿಂತ ಮತ್ತು ಕಳೆದ ದಶಕದಲ್ಲಿ ಸರಾಸರಿ ಮಟ್ಟಕ್ಕಿಂತ ಕಡಿಮೆಯಾಗಿದೆ.

ಭಾರತವು ವಿಶ್ವದ ಶೇ.4ರಷ್ಟು ಸಿಹಿನೀರು ಮತ್ತು ಶೇ.16ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಶೇ.70ರಷ್ಟು ನೀರು ಕಲುಷಿತವಾಗಿದ್ದು, ಭಾರತವು ವಿಶ್ವ ಜಲ ಗುಣಮಟ್ಟ ಸೂಚಿಯಲ್ಲಿನ 122 ರಾಷ್ಟ್ರ್ಟ್ರಗಳ ಪೈಕಿ 120ನೇ ಸ್ಥಾನದಲ್ಲಿದೆ.

ಕೃಪೆ: indiaspend.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News