ಸಿಂಗಾಪುರದಿಂದ ವೈದ್ಯಕೀಯ ಸಲಕರಣೆ ಹೊತ್ತು ತಂದ ವಿಮಾನದ ಪೈಲಟ್ ಮಂಗಳೂರಿನ ಸರ್ಫರಾಝ್

Update: 2020-05-08 16:33 GMT

#ಕೊರೋನ ವಿರುದ್ಧದ ಹೋರಾಟ

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಸಾವಿರಾರು ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಕೈಜೋಡಿಸಿದ್ದು, ಈ ಸಾಲಿಗೆ ಇದೀಗ ದೇಶಾದ್ಯಂತವಿರುವ ಪೈಲಟ್ ಗಳೂ ಸೇರಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ವಿಮಾನಗಳ ಪೈಲಟ್ ಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇದೇ ರೀತಿ ಕೋವಿಡ್ 19 ವಿರುದ್ಧ ಭಾರತದ ಹೋರಾಟಕ್ಕೆ ಕೈಜೋಡಿಸಲು ಸಿಂಗಾಪುರದಿಂದ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ತಂದ ವಿಮಾನದ ಪೈಲಟ್ ಮಂಗಳೂರಿನವರು ಎನ್ನುವ ವಿಚಾರ ದ.ಕ. ಜಿಲ್ಲೆಗೆ ಹೆಮ್ಮೆ ತಂದಿದೆ.

ಮೇ 7ರಂದು ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಪೈಲಟ್ ಆಗಿದ್ದವರು ಮಂಗಳೂರಿನ ಯುವಕ ಸರ್ಫರಾಝ್ ಝಾಕಿರ್. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಹಿರಿಯ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯ  ಬಿ. ಇಬ್ರಾಹೀಂ – ಮೈಮೂನಾ ಇಬ್ರಾಹೀಂ ದಂಪತಿಯ ಪುತ್ರನಾಗಿರುವ ಸರ್ಫರಾಝ್ ಮಂಗಳೂರಿನ ವಾಸ್ ಲೇನ್ ನಿವಾಸಿ. ಇವರು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಜನೆ ಮಾಡಿದರು. ಆನಂತರ ಬೆಂಗಳೂರಿನಲ್ಲಿರುವ ಜಕ್ಕೂರು ಟ್ರೈನಿಂಗ್ ಸ್ಕೂಲ್ ನಲ್ಲಿ ಪೈಲಟ್ ಕೋರ್ಸ್ ಮಾಡಿದರು. ನಂತರ ಚೆನ್ನೈ , ಹೈದರಾಬಾದ್ ಗಳಲ್ಲಿ ತರಬೇತಿ ಪಡೆದು ಆಸ್ಟ್ರೇಲಿಯಾಕ್ಕೆ ತೆರಳಿ ಹೆಚ್ಚಿನ ತರಬೇತಿ ಪಡೆದುಕೊಂಡರು. ಎಳೆಯ ವಯಸ್ಸಿನಿಂದಲೇ ತಾನು ಪೈಲಟ್ ಆಗಬೇಕೆಂದು ಕನಸು ಕಂಡಿದ್ದರಂತೆ ಸರ್ಫರಾಝ್.

ಆಸ್ಟ್ರೇಲಿಯಾದಲ್ಲಿ ಕಿರು ಅವಧಿಯ ಕೋರ್ಸ್ ಮುಗಿಸಿದ ನಂತರ 2008ರಲ್ಲಿ ಡೆಕ್ಕನ್ ಏರ್ ಲೈನ್ಸ್ ನಲ್ಲಿ ಕ್ಯಾಪ್ಟನ್ ಆಗಿ ಉದ್ಯೋಗಕ್ಕೆ ಸೇರ್ಪಡೆಯಾದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು. ನಂತರ ಕಿಂಗ್ ಫಿಶರ್ ಮತ್ತು ಡೆಕ್ಕನ್ ಏರ್ ಲೈನ್ಸ್ ವಿಲೀನಗೊಂಡಿತು. ಕಿಂಗ್ ಫಿಶರ್ ನಲ್ಲಿ ಕರ್ತವ್ಯ ಮುಂದುವರಿಸಿದ ಸರ್ಫರಾಝ್ ಜೆಟ್ ಏರ್ ವೇಸ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಇಂಡಿಗೋದಲ್ಲಿ ಸೀನಿಯರ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ ಸರ್ಫರಾಝ್ ಮೇ 7ರಂದು ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಹೊತ್ತು ತಂದ ವಿಮಾನದ ಪೈಲಟ್ ಆಗಿದ್ದರು. ವಿಮಾನದ ಪೈಲಟ್ ಮಂಗಳೂರಿನವರು ಎಂದು ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಝ್  ರ ಪೋಟೊ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತನ್ನ ಪುತ್ರನ ಸೇವೆಯ ಬಗ್ಗೆ ಮಾತನಾಡುವ ಬಿ. ಇಬ್ರಾಹೀಂ, “ನನ್ನ ಮಗನ ಸಾಧನೆಯ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ. ದೇಶ ಎದುರಿಸುತ್ತಿರುವ ಈ ಮಹಾ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಜನರಿಗಾಗಿ, ಕೊರೋನ ವಿರುದ್ಧ ಹೋರಾಟದಲ್ಲಿ ಆತ ತನ್ನ ಕೊಡುಗೆಯನ್ನು ಸಲ್ಲಿಸಿದ್ದು ನಮ್ಮೆಲ್ಲರಿಗೂ ಸಂತಸದ ವಿಚಾರ. ಪೈಲಟ್ ಆಗಬೇಕೆನ್ನುವುದು ಆತನ ಸಣ್ಣ ವಯಸ್ಸಿನ ಕನಸಾಗಿತ್ತು. ನಾನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂದಿದ್ದೆ. ಆದರೆ ಆತನ ಗುರಿ ಪೈಲಟ್ ಆಗಬೇಕು ಎನ್ನುವುದು ಮಾತ್ರವಾಗಿತ್ತು. 25ನೆ ವಯಸ್ಸಿನಲ್ಲಿ ಆತ ಕಮಾಂಡರ್ ಎಕ್ಸಾಮ್ ನಲ್ಲಿ ಉತ್ತೀರ್ಣನಾಗಿದ್ದು, ಕರ್ನಾಟಕದಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾನೆ. ಕೋವಿಡ್ 19ಗಾಗಿ ವೈದ್ಯಕೀಯ ವಿಮಾನದಲ್ಲಿ ನನ್ನ ಮಗ ಪೈಲಟ್ ಆಗಿದ್ದ ಎನ್ನುವ ವಿಚಾರ ತಿಳಿದ ನಂತರ ನನಗೆ ನೂರಾರು ಕರೆಗಳು ಬರುತ್ತಿವೆ. ಹಲವರು ಕರೆ ಮಾಡಿ ಶುಭ ಹಾರೈಸಿದ್ದಾರೆ. ನಮ್ಮ ಮನೆಯವರೆಲ್ಲರೂ ಖುಷಿಯಾಗಿದ್ದೇವೆ. ನನ್ನ ಪುತ್ರನ ಬಗ್ಗೆ ಹೆಮ್ಮೆ ಎನಿಸುತ್ತಿದೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News