ಪ್ರಜ್ವಲ್ ರೇವಣ್ಣ: ಸಂಸತ್ ಪ್ರವೇಶಿಸಿದ ಗೌಡ ಕುಟುಂಬದ 3ನೆ ಪೀಳಿಗೆ

Update: 2019-07-06 15:41 GMT

ಹಾಸನ ಲೋಕಸಭಾ ಕ್ಷೇತ್ರದ ಯುವ ಸಂಸದ ಪ್ರಜ್ವಲ್ ರೇವಣ್ಣ ಸದನದಲ್ಲಿ ತಮ್ಮ ಚೊಚ್ಚಲ ಭಾಷಣದ ಮೂಲಕ ಭರವಸೆಯ ಯುವ ನಾಯಕ ಎನಿಸಿಕೊಂಡಿದ್ದಾರೆ.

ಸಚಿವ ಎಚ್.ಡಿ. ರೇವಣ್ಣರ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನಾಗಿರುವ ಇವರ ವಯಸ್ಸು 28. ತಾಯಿಯ ಹೆಸರು ಭವಾನಿ ರೇವಣ್ಣ. ಬಿಇ ಪದವಿ ತೇರ್ಗಡೆಯಾಗಿರುವ ಮಾಡಿರುವ ಪ್ರಜ್ವಲ್ ರಾಜಕೀಯ ರಂಗದಲ್ಲಿ ನೆಲೆಯೂರಲು ಕೆಲ ವರ್ಷಗಳಿಂದಲೇ ಪ್ರಯತ್ನಿಸುತ್ತಿದ್ದರು.

ಬ್ರಿಟಿಷ್ ಆಡಳಿತ ಶೈಲಿಯನ್ನು ಅಭ್ಯಾಸ ಮಾಡಲು ಕಾಮನವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್‌ ನಿಂದ 2015ರಲ್ಲಿ ಆಯ್ಕೆಯಾದ ಭಾರತದ 10 ಯುವ ರಾಜಕಾರಣಿಗಳಲ್ಲಿ ಪ್ರಜ್ವಲ್ ರೇವಣ್ಣ ಸ್ಥಾನ ಪಡೆದಿದ್ದರು. ಪ್ರಜ್ವಲ್ 1 ಲಕ್ಷದ 42 ಸಾವಿರದ 123 ಮತಗಳ ಅಂತರದಿಂದ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಮೈತ್ರಿ ಸರಕಾರದ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ 6,75,512 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,33,389 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 2004, 2009 ಹಾಗೂ 2014ಲ್ಲಿ ಸತತ ಮೂರು ಬಾರಿ ಹಾಸನ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ ಅಂದರೆ 1991 ಹಾಗೂ 1995ರಲ್ಲಿ ಎರಡು ಬಾರಿ ಆಯ್ಕೆಯಾಗಿದ್ದರೂ 1999ರಲ್ಲಿ ಸೋಲುಂಡಿದ್ದರು

ಮೊಮ್ಮಗನಿಗಾಗಿ ದೇವೇಗೌಡರು ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸೋತರು. ಈ ಬೆಳವಣಿಗೆಯಿಂದ ನೊಂದ ಪ್ರಜ್ವಲ್ ತಾನು ಗೆದ್ದಾಗ ಸಂಭ್ರಮಿಸಲಿಲ್ಲ. ತಾತನ ನೋವಿನಿಂದ ಸೋಲಾಗಿದೆ. ದೇವೇಡೌಡರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವುದಾಗಿ ಪ್ರಕಟಿಸಿದರು. ಈ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೇಗೌಡ ಒಪ್ಪಿಕೊಳ್ಳಲಿಲ್ಲ.

ಕುಟುಂಬದ ಹಿನ್ನೆಲೆ ಗಟ್ಟಿಯಾಗಿದ್ದರೂ ಪ್ರಜ್ವಲ್ ಗೆಲುವು ಸುಲಭದ ತುತ್ತಾಗಿರಲಿಲ್ಲ. ಚುನಾವಣೆ ವೇಳೆ ಅವರು ಹಲವು ಸವಾಲುಗಳನ್ನು ಎದುರಿಸಿ, ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.

ಭರವಸೆ ಮೂಡಿಸಿದ ಪ್ರಜ್ವಲ್

ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಕರ್ನಾಟಕದಲ್ಲಿ ಅತಿ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ” ಎಂದು ಮೈತ್ರಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸದನದಲ್ಲೇ ತಮ್ಮ ಪ್ರಥಮ ಭಾಷಣದಲ್ಲಿ ಪ್ರಜ್ವಲ್ ರೇವಣ್ಣ ತಿರುಗೇಟು ನೀಡುವ ಮೂಲಕ ರಾಜ್ಯದ ಜನರ ಗಮನ ಸಳೆದರು.

“ಸದನವನ್ನು ದಾರಿ ತಪ್ಪಿಸಬೇಡಿ. ಐಎಂಎಫ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರೋಷನ್ ಬೇಗ್ ರನ್ನು ಅಮಾನತು ಮಾಡಿದೆ. ಸರಕಾರ ತನಿಖೆಗೆ ನಡೆಸುತ್ತಿದೆ. ಬಿಜೆಪಿ ಅವಧಿಯಲ್ಲಿ ಲೋಕಾಯುಕ್ತ ವರದಿಯಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಅವರನ್ನು ಆರೋಪಿಯಾಗಿಸಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದುವರೆಗೂ ಕರ್ನಾಟಕದಲ್ಲಿ ಸಾವಿರದ 600 ರೈತರು ಮೃತಪಟ್ಟಿದ್ದಾರೆ. ತಮಿಳುನಾಡು ಕೂಡ ನೀರು ಕೇಳುತ್ತಿದೆ. ಮಂಡ್ಯ ಭಾಗದ ರೈತರಿಗೆ ಎರಡು ಟಿಎಂಸಿ ನೀರು ಕೊಡಿ. ಮಂಡ್ಯದ ಜನರಿಗೆ ಮಾನವೀಯತೆ ದೃಷ್ಟಿಯಿಂದ ನೀರು ಬಿಡಿ” ಎಂದು ಸದನದಲ್ಲಿ ಸಿಕ್ಕ ಕನಿಷ್ಠ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News