ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಅಭಿವೃದ್ಧಿ ನಿರ್ಲಕ್ಷ್ಯಿಸಿರುವ ಸ್ಥಳೀಯ ಶಾಸಕರು; ಆರೋಪ

Update: 2019-06-06 14:57 GMT

ಚಿಕ್ಕಮಗಳೂರು, ಜೂ.6: ನಗರದ ಜಿಲ್ಲಾಸ್ಪತ್ರೆ ಸಮಸ್ಯೆಗಳ ಆಗರವಾಗಿದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದ ಹೋರಾಟಗಾರರು, ಸಂಘಸಂಸ್ಥೆಗಳ ಕೂಗಿಗೆ ಸ್ಪಂದಿಸಿರುವ ರಾಜ್ಯ ಸರಕಾರ 50 ಕೋ. ರೂ. ಅನುದಾನ ಮಂಜೂರು ಮಾಡುವ ಮೂಲಕ ಬಡಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಆದರೆ ಸ್ಥಳೀಯ ಶಾಸಕರು ಅನುದಾನ ತಂದಿರುವುದು ತಾವೇ ಎಂದು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲಾಹರಣ ಮಾಡುತ್ತಿದ್ದಾರೆಯೇ ಹೊರತು ಆಸ್ಪತ್ರೆಯ ಅಭಿವೃದ್ಧಿಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ, ರೈತಪರ ಸಂಘಟನೆಗಳು ಗುರುವಾರ ನಗರದಲ್ಲಿ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆ ಹಲವಾರು ಸಮಸ್ಯೆಗಳಿಂದ ನಲುಗುತ್ತಿದ್ದು, ಬಡಜನರಿಗೆ ಸಮರ್ಪಕ ಆರೋಗ್ಯ ಭಾಗ್ಯದ ಸೇವೆ ಧಕ್ಕದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇಲ್ಲಿನ ಜನಸಂಖ್ಯೆಗನುಗುಣವಾಗಿ ಸ್ಥಳಾವಕಾಶವಿಲ್ಲ, ಹೆಚ್ಚುವರಿ ಬೆಡ್‍ಗಳ ಕೊರತೆ, ವೈದ್ಯರು, ನರ್ಸ್‍ಗಳು, ತಾಂತ್ರಿಕ ಸಿಬ್ಬಂದಿ, ಯಂತ್ರೋಪಕರಣಗಳ ಸೌಲಭ್ಯ ಆಸ್ಪತ್ರೆಯಲ್ಲಿ ಬಡಜನರ ಪಾಲಿಗೆ ಮರೀಚಿಕೆಯಾಗಿದೆ. ಸಿಟಿ ಸ್ಕ್ಯಾನ್‍ನಂತಹ ಆಧುನಿಕ ಯಂತ್ರೋಪಕರಣಗಳು ನುರಿತ ಸಿಬ್ಬಂದಿ ಕೊರತೆಯಿಂದಾಗಿ ತುಕ್ಕು ಹಿಡಿಯುತ್ತಿವೆ ಎಂದ ಅವರು, ಸಮರ್ಪಕ ಆರೋಗ್ಯ ಸೇವೆ ಧಕ್ಕದ ಪರಿಣಾಮ ಜಿಲ್ಲೆಯ ಬಡ ಜನರು ಮಂಗಳೂರು, ಹಾಸನದಂತಹ ನಗರಗಳಿಗೆ ಹೆಚ್ಚು ಹಣ ಖರ್ಚು ಮಾಡಿಕೊಂಡು ಆರೋಗ್ಯ ಸೇವೆ ಪಡೆಯುತ್ತಿದ್ದಾರೆಂದರು.

ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯನ್ನು ಮನಗಂಡ ಜಿಲ್ಲೆಯ ವಿವಿಧ ಕನ್ನಡ, ರೈತ, ಪ್ರಗತಿಪರ ಸಂಘಟನೆಗಳು ಕೆಲ ತಿಂಗಳುಗಳ ಹಿಂದೆ ವಿವಿಧ ಹೋರಾಗಳ ಮೂಲಕ ಜನಪ್ರತಿನಿಧಿಗಳು ಹಾಗೂ ಸರಕಾರದ ಗಮನ ಸೆಳೆದಿವೆ. ಇದಕ್ಕೆ ಸ್ಪಂದಿಸಿದ ವಿಧಾನಪರಿಷತ್ ಸದಸ್ಯರಾರದ ಭೋಜೇಗೌಡ, ಧರ್ಮೇಗೌಡ ಸಿಎಂ ಬಳಿ ದಿನಾಂಕ ಗೊತ್ತುಪಡಿಸಿ ಆಸ್ಪತ್ರೆ ಸಮಸ್ಯೆ ಚರ್ಚಿಸಲು ನಿಯೋಗ ಕರೆದೊಯ್ದಿದ್ದರು. ಅದರಂತೆ ಸಿಎಂ ಬಳಿ ನಿಯೋಗದ ಸದಸ್ಯರು ಸಮಸ್ಯೆ ಹೇಳಿಕೊಂಡಿದ್ದು, ಬಜೆಟ್‍ನಲ್ಲಿ ಸೂಕ್ತ ಅನುದಾನ ಒದಗಿಸುವ ಭರವಸೆಯನ್ನು ಸಿಎಂ ನೀಡಿದ್ದರು. ಅದರಂತೆ ಸಿಎಂ ಕುಮಾರಸ್ವಾಮಿ ಕಳೆದ ಬಜೆಟ್‍ನಲ್ಲಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 50 ಕೋ. ರೂ. ಅನುದಾನವನ್ನು ಮಂಜೂರು ಮಾಡಿದ್ದಾರೆಂದ ಅವರು, ಈ ಅನುದಾನ ಮಂಜೂರಾಗಿ 4 ತಿಂಗಳು ಕಳೆದಿದ್ದರೂ ಸ್ಥಳೀಯ ಶಾಸಕರಾಗಲೀ, ಜಿಲ್ಲಾಡಳಿತವಾಗಲೀ ಆಸ್ಪತ್ರೆಯನ್ನು ಮೇಲ್ದಜೆಗೇರಿಸುವ ಕಾಮಗಾರಿ ಸಂಬಂಧ ಯಾವುದೇ ನೀಲನಕ್ಷೆಯನ್ನು ಇದುವರೆಗೂ ತಯಾರಿಸದೇ ಸ್ಥಳೀಯ ಶಾಸಕರು ಅನುದಾನ ತಂದಿರುವುದು ತಾವೇ ಎಂದು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಕಾಲಾಹಣ ಮಾಡುತ್ತಿದ್ದಾರೆಂದು ರಾಧಾಕೃಷ್ಣ  ಟೀಕಿಸಿದರು.

50 ಕೋ. ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿರುವುದರ ಹಿಂದೆ ಸಂಘ ಸಂಸ್ಥೆಗಳ ಹೋರಾಟದ ಶ್ರಮವಿದೆಯೇ ಹೊರತು, ಯಾವ ರಾಜಕಾರಣಿಗಳ ಪಾತ್ರವೂ ಇಲ್ಲ ಎಂದ ಅವರು, ಅನುದಾನ ಬಿಡುಗಡೆಯಾಗಿದ್ದರೂ ಆಸ್ಪತ್ರೆಯ ಅಭಿವೃದ್ದಿಗೆ ಮುಂದಾಗಬೇಕಿದ್ದ ಶಾಸಕರು, ರಾಜಕೀಯ ಲಾಭದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿ ಸಂಬಂಧ ಇದುವರೆಗೂ ಯಾವ ಸಂಘಸಂಸ್ಥೆಗಳ ಮುಖಂಡರೊಂದಿಗೂ ಶಾಸಕರು ಚರ್ಚಿಸುವ ಗೋಜಿಗೆ ಹೋಗಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯನ್ನು ವಿಚಾರಿಸಿದರೇ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಬಡಜನರ ಆರೋಗ್ಯ ಸೇವೆಯ ಹಿತದೃಷ್ಟಿಯಿಂದ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಸಂಬಂಧ ಸಂಘಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿ ಕೂಡಲೇ ಕಾಮಗಾರಿಗಳನ್ನು ಆರಂಭಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸಿಪಿಐ ಮುಖಂಡ ಅಮ್ಝದ್ ಮಾತನಾಡಿ, ಜಿಲ್ಲಾಸ್ಪತ್ರೆ ವಿಚಾರದಲ್ಲಿ ಕ್ಷೇತ್ರದ ಶಾಸಕ ಸಿಟಿ ರವಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಶಾಸಕರು ಆರ್ಥಿಕ ಲಾಭವಿಲ್ಲದ ಕಾಮಗಾರಿಗಳ ಜಾರಿಗೆ ಮೀನಮೇಷ ಎಣಿಸುತ್ತಿರುವುದು ಕಂಡು ಬರುತ್ತಿದೆ. ಅವರು ಬುದ್ಧಿಪೂರ್ವಕವಾಗಿ ಜಿಲ್ಲಾಸ್ಪತ್ರೆ ಅಭಿವೃದ್ಧಿಯನ್ನು ವಿಳಂಬ ಮಾಡುತ್ತಿದ್ದಾರೆಂದು ಅವರು, ಆಸ್ಪತ್ರೆ ಅಭಿವೃದ್ಧಿ ನಿರ್ಲಕ್ಷ್ಯದಂತೆ ನಗರದ ಹೆಸರಾಂತ ಲಾಲ್ ಬಹದ್ದೂರ್ ಕಾಲೇಜು ಕಟ್ಟಡ 50 ವರ್ಷಗಳಷ್ಟು ಹಳೆಯದಾಗಿದ್ದು, ಭಾರೀ ಶಿಥಿಲಾವಸ್ಥೆಯ ಹಂತದಲ್ಲಿದ್ದು, ಈ ಕಾಲೇಜು ಕಟ್ಟದ ಬಗ್ಗೆಗೂ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಸಂಘಸಂಸ್ಥೆಗಳ ಹೋರಾಟಕ್ಕೆ ಮಣಿದ ಅಧಿಕಾರಿಗಳು ಈ ಹಿಂದೆ 75 ಲಕ್ಷ ರೂ. ವೆಚ್ಚದಲ್ಲಿ ಕಾಲೇಜು ಕಟ್ಟಡದ ದುರಸ್ತಿಗೆ ಮುಂದಾಗಿದ್ದರು. ಆದರೆ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಜಿಲ್ಲಾಡಳಿತ ಶೀಘ್ರ ಕ್ರಮಕೈಗೊಳ್ಳಬೇಕೆಂದರು.
ಕರವೇ ಸಂಘದ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮತ್ತಿತರರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜನದನಿ ಸಂಘಟನೆಯ ಗುರುಶಾಂತಪ್ಪ, ಕನ್ನಡ ಸೇನೆಯ ರಾಜೇಗೌಡ, ನವಕರ್ನಾಟಕ ಸಂಘದ ಸಿ.ಆರ್.ರಘು, ದಸಂಸ ಮರ್ಲೆ ಅಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣದಿಂದಾಗಿ ಸರಕಾರಿ ಕಾಲೇಜಿಗೆ ಈ ಬಾರಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಅಧಿಕಾರಿಗಳು ಕಾಲೇಜು ಕಟ್ಟಡದ ದುರಸ್ತಿಗೆ ಮುಂದಾಗಿದ್ದಾರೆ. ಆದರೆ ದುರಸ್ಥಿಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮವಹಿಸಬೇಕು. ಕಾಲೇಜು ಆವರಣದ ಮುಂಭಾಗದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವ ಹುನ್ನಾರ ನಡೆಯುತ್ತಿದ್ದು, ಶೈಕ್ಷಣಿಕ ಉದ್ದೇಶ ಹೊರತು ಪಡಿಸಿ ಕಾಲೇಜು ಜಾಗವನ್ನು ಇತರ ಉದ್ದೇಶಗಳಿಗೆ ಯಾವುದೇ ಕಾರಣಕ್ಕೂ ಬಳಸಬಾರದು.
- ಬಿ.ಅಮ್ಜದ್, ಸಿಪಿಐ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News