ದೇಶಕ್ಕೆ ಹೊಂದುವಂತಹ ಆರ್ಥಿಕ ನೀತಿ ರೂಪಗೊಳ್ಳಲಿ: ವಜೂಭಾಯಿ ವಾಲಾ

Update: 2019-06-06 16:19 GMT

ಬೆಳಗಾವಿ, ಜೂ.6: ದೇಶಕ್ಕೆ ಸ್ವಾತಂತ್ರಬಂದು ಹಲವು ದಶಕಗಳೆ ಕಳೆದರೂ ಇಂದಿಗೂ ಭಾರತೀಯ ಸಮಾಜಕ್ಕೆ ಹೊಂದಿಕೊಳ್ಳುವಂತಹ ರಾಜನೀತಿ, ಆರ್ಥಿಕ ನೀತಿಗಳನ್ನು ರೂಪಿಸಲು ಸಾಧ್ಯವಾಗಿಲ್ಲವೆಂದು ರಾಜ್ಯಪಾಲ ವಜೂಭಾು ವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಂಸ್ಕೃತಿ ಸಚಿವಾಲಯದ 5.78ಕೋಟಿ ರೂ.ಅನುದಾನದಲ್ಲಿ ನಗರದ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅರ್ಥ ವ್ಯವಸ್ಥೆ, ಕೃಷಿ ಪದ್ಧತಿ, ಸಾಮಾಜಿಕ ಪದ್ಧತಿಯನ್ನು ಸುವ್ಯವಸ್ಥೆಗೊಳಿಸಲು ದೀನದಯಾಳ್ ನೀಡಿದ ವಿಚಾರಧಾರೆಗಳನ್ನು ಕಾರ್ಯಾನುಷ್ಠಾನಕ್ಕೆ ತರುವುದು ಅಧ್ಯಯನ ಪೀಠದ ಉದ್ದೇಶವಾಗಬೇಕು ಎಂದರು.

ದೇಶದಲ್ಲಿ ನದಿಗಳ ಜೋಡಣೆಯಿಂದ ಕೃಷಿಕ್ರಾಂತಿ ಮಾಡಬಹುದು. ಕೃಷಿಗಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ಬೇಡ. ನದಿ ಉದ್ದಕ್ಕೂ ಅಲ್ಲಲ್ಲಿ ಸಣ್ಣ ಸಣ್ಣ ಅಣೆಕಟ್ಟುಗಳನ್ನು ಕಟ್ಟಬೇಕೆಂದು ದೀನದಯಾಳ್ ಉಪಾಧ್ಯಾಯ ಹೇಳುತ್ತಿದ್ದರು. ರೈತರಿಗೆ ಸಾಲ ಕೊಡಬೇಕಿಲ್ಲ. ಅವರಿಗೆ ಬೇಕಿರುವುದು ನೀರು. ನದಿಗಳ ಜೋಡಣೆಯಿಂದ ಇದು ಸಾಧ್ಯವಾಗುತ್ತದೆ. ಇದರೊಂದಿಗೆ ವಾಟರ್ ಗ್ರೀಡ್ ಯೋಜನೆ ಜಾರಿಗೊಳಿಸಬೇಕು. ರೈತರ ಅನುಕೂಲಕ್ಕಾಗಿ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.

ದುಡಿಯುವ ಕೈಗಳಿಗೆ ಕೆಲಸಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯ ಅಭಿವೃದ್ಧಿ ಒತ್ತು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸದಾಗಿ ಎರಡು ಸಂಪುಟ ಸಮಿತಿಗಳನ್ನು ರಚಿಸಿರುವುದು ಒಳ್ಳೆಯ ಬೆಳವಣಿಗೆಯೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News