ಬೆಂಬಲಬೆಲೆ ಯೋಜನೆಯಡಿ 12 ಕೃಷಿ ಉತ್ಪನ್ನಗಳ ಖರೀದಿ: ಬಂಡೆಪ್ಪ ಕಾಶೆಂಪೂರ್

Update: 2019-06-06 17:12 GMT

ಬೆಂಗಳೂರು, ಜೂ.6: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ರಚನೆಯಾದ ಬಳಿಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರುಕಟ್ಟೆ ಪ್ರವೇಶ ಮಾಡಿ ಸರಕಾರ ಈವರೆಗೂ ಸುಮಾರು 12 ಕೃಷಿ ಉತ್ಪನ್ನ ಬೆಳೆಗಳನ್ನು ಖರೀದಿ ಮಾಡಿದ್ದೇವೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲಾದ ಪ್ರಗತಿ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬೇಳೆಯನ್ನು ಸಮರ್ಪಕವಾಗಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗಿದೆ. ಇದಲ್ಲದೆ ಈರುಳ್ಳಿ, ಮಾವು, ತೊಗರಿ ಸೇರಿ ಇತರೆ ಉತ್ಪನ್ನಗಳನ್ನು ಸಹ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಸತತ ಬರಗಾಲದ ಪರಿಣಾಮವಾಗಿ ತೊಗರಿ ಬೇಳೆಯ ಇಳುವರಿ ಕಡಿಮೆಯಾಗಿತ್ತು. ರಾಜ್ಯ ಸರಕಾರ 1.80 ಲಕ್ಷ ಮೆಟ್ರಿಕ್ ಟನ್ ಖರೀದಿ ಗುರಿಯನ್ನು 2018-19ನೆ ಸಾಲಿನಲ್ಲಿ ಹೊಂದಲಾಗಿತ್ತು. ಆದರೆ, 1.26 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಖರೀದಿಸಲಾಗಿದೆ.

ಮಾರುಕಟ್ಟೆ ಪ್ರವೇಶ ಮಾಡಿ ರೈತರಿಂದ ಖರೀದಿಸಿದ ಎಲ್ಲ ಉತ್ಪನ್ನಗಳಿಗೂ ಹಣವನ್ನು ಪಾವತಿಸಲಾಗಿದ್ದು, 2,80,451 ರೈತರಿಂದ ಒಟ್ಟು 1,40,200 ಕೋಟಿ ರೂ.ಗಳ ದಾಸ್ತಾನು ಖರೀದಿಸಲಾಗಿದೆ. ಇದರಲ್ಲಿ ತೊಗರಿ 773.00 ಕೋಟಿ, ಹೆಸರು ಕಾಳು 207.00 ಕೋಟಿ, ಭತ್ತ 451.00 ಕೋಟಿ ಸೇರಿದೆ. 2018-2019ನೆ ಸಾಲಿನಲ್ಲಿ ಸರಕಾರ ಇದಕ್ಕಾಗಿಯೇ 700.00 ಕೋಟಿ ರೂ.ಗಳ ಆವರ್ತ ನಿಧಿಯ ಮೂಲಕ ರಾಜ್ಯ ಸರಕಾರಕ್ಕೆ ಬರಬೇಕಾಗಿದೆ ಎಂದು ಕಾಶೆಂಪೂರ್ ತಿಳಿಸಿದರು.

ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಮತ್ತು ಮಾವು ಸಿಗದಿದ್ದರೂ ಸಹ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ಖರೀದಿಸಲಾಗಿದೆ. 2019-20ನೆ ಸಾಲಿನ ಆಯವ್ಯಯದಲ್ಲಿ ಸಿಎಂ ಕುಮಾರಸ್ವಾಮಿ ಅವರು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 510.00 ಕೋಟಿ ರೂ.ಮೀಸಲಿರಿಸುವ ಕುರಿತು ಘೋಷಣೆ ಮಾಡಿದ್ದಾರೆ. ಹಾಗೆಯೇ ಹಣವನ್ನು ಸಹ ಮೀಸಲಿರಿಸಲಾಗಿದೆ. ಆವರ್ತ ನಿಧಿಯನ್ನು ಕನಿಷ್ಠ 3 ಸಾವಿರ ಕೋಟಿ ರೂ.ಗಳಿಗೆ ನಿಗದಿ ಮಾಡಬೇಕೆನ್ನುವ ಪ್ರಯತ್ನವೂ ಸರಕಾರದಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಎನ್.ಎಚ್.ಶಿವಶಂಕರರೆಡ್ಡಿ, ಎಂ.ಸಿ.ಮನಗೂಳಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾದೇವಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News