ಮಡಿಕೇರಿ: ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಲು ಡಿಸಿ ಸೂಚನೆ

Update: 2019-06-06 17:28 GMT

ಮಡಿಕೇರಿ, ಜೂ.6: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜೂನ್ ಎರಡನೇ ವಾರ ಬೆಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಸರಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸಾಲಮನ್ನಾವನ್ನು ಎಷ್ಟು ಜನರಿಗೆ ನೀಡಲಾಗಿದೆ. ಎಷ್ಟು ಕೋಟಿ ಬಿಡುಗಡೆಯಾಗಿದೆ. ಮನಸ್ವಿನಿ, ಮೈತ್ರಿ, ವೃದ್ಧಾಪ್ಯ ವೇತನ ಹೀಗೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳು, ಹಾಸ್ಟೆಲ್‌ಗಳಿಗೆ ನಿವೇಶನ ಒದಗಿಸುವುದು, 94 ಸಿ ಮತ್ತು 94ಸಿಸಿ ರಡಿ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳು ಮತ್ತಿತರ ಬಗ್ಗೆ ನಮೂನೆ ಮಾದರಿಯಲ್ಲಿ ಮಾಹಿತಿಒದಗಿಸುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆ, ಕೃಷಿ ಚಟುವಟಿಕೆ ಸಂಬಂಧಿಸಿದಂತೆ ಭಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು, ಕೌಶಲ್ಯ ಯೋಜನೆಯಡಿ ತರಬೇತಿ, ಗಂಗಾ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ, ವಸತಿ ಯೋಜನೆಗಳ ಪ್ರಗತಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಆಯುಷ್ಮಾನ್ ಭಾರತ್-ಕರ್ನಾಟಕ ಆರೋಗ್ಯ ಯೋಜನೆ, ವಾತೃ ಪೂರ್ಣ ಯೋಜನೆ ಪ್ರಗತಿ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕೆಂದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವುದು, ಸಮವಸ್ತ್ರ, ಬೈಸಿಕಲ್ ವಿತರಣೆ, ಕ್ಷೀರಭಾಗ್ಯ, ಶೂ, ಸಾಕ್ಸ್ ವಿತರಣೆ, ಶಾಲಾ ಕಟ್ಟಡಗಳ ಸುಸ್ಥಿತಿ, ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ, ವಿದ್ಯುತ್ ಪ್ರಸರಣ ಮಾರ್ಗ ರಹದಾರಿ, ರಸ್ತೆ ಸುರಕ್ಷತೆ ಬಗ್ಗೆ ಗಮನ ಹರಿಸುವುದು, ವನಮಹೋತ್ಸವ, ಪ್ರವಾಸಿ ಟ್ಯಾಕ್ಸಿ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಪ್ರಗತಿಯ ವದಿಯನ್ನು ಒದಗಿಸುವಂತೆ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಕುಡಿಯುವ ನೀರು, ಗ್ರಾಮೀಣ ರಸ್ತೆ ಕಾಮಗಾರಿಗಳು, ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಡುವಂತೆ ಸಲಹೆ ನೀಡಿದರು.

ಉಪ ವಿಬಾಗಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ, ಸೆಸ್ಕ್ ಇಇ ಸೋಮಶೇಖರ್, ಜಿಪಂ ಇಇ ಶ್ರೀಕಂಠಯ್ಯ, ರೇವಣ್ಣವರ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾಜಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ, ಬಿಸಿಎಂ ಇಲಾಖೆ ಅಧಿಕಾರಿ ಅವಿನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News