ಕೇರಳದಲ್ಲಿ ನಿಪಾಹ್ ವೈರಸ್ ಪತ್ತೆ: ಕೊಡಗು ಗಡಿಯಲ್ಲಿ ಹೈಅಲರ್ಟ್

Update: 2019-06-06 17:46 GMT

ಮಡಿಕೇರಿ, ಜೂ.6: ನಿಪಾಹ್ ವೈರಸ್ ಹರಡದಂತೆ ಕೊಡಗು ಜಿಲ್ಲೆಯಲ್ಲೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್ ತಿಳಿಸಿದ್ದಾರೆ. ಯಾವುದೇ ಜ್ವರ ಕಂಡು ಬಂದರೂ ನಿರ್ಲಕ್ಷ್ಯ ತೋರದೆ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮೋಹನ್, ಪಕ್ಕದ ಕೇರಳ ರಾಜ್ಯದಲ್ಲಿ ನಿಪಾಹ್ ವೈರಸ್ ಕಂಡು ಬಂದ ಹಿನ್ನೆಲೆ ಗಡಿ ಜಿಲ್ಲೆ ಕೊಡಗಿನಲ್ಲೂ ಎಚ್ಚರ ವಹಿಸಲಾಗಿದೆ. ಸಾರ್ವಜನಿಕರಿಗೆ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ರೋಗಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತರ ಮೂಲಕ ಪ್ರತಿ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಪ್ರತಿದಿನ ವೈದ್ಯಕೀಯ ವರದಿ ನೀಡುವಂತೆ ಸರಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಡಾ.ಕೆ. ಮೋಹನ್ ತಿಳಿಸಿದರು.
ನಿಪಾಹ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭವಿಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿವಹರ್ಣೆಯಿಂದ ಸೋಂಕನ್ನು ಗುಣಪಡಿಸಬಹುದಾಗಿದೆ. ಆದ್ದರಿಂದ ಜ್ವರ, ತಲೆ ನೋವು, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ ನೇರವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಡಾ.ಮೋಹನ್ ಸಲಹೆ ನೀಡಿದರು. ಡಾ.ಕೆ.ಮೋಹನ್ ಸುದ್ದಿಗೋಷ್ಠಿಯ ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಪರಿಶೀಲಿಸಿದರು.

ಈ ಸಂದರ್ಭ ಆಸ್ಪತ್ರೆಯ ಡೀನ್ ಕಾವೇರಪ್ಪ, ಸರ್ವೇಕ್ಷಣಾಧಿಕಾರಿ ಶಿವಕುಮಾರ್, ಡಾ.ಶ್ಯಾಮಲಾ ಹಾಗೂ ಮತ್ತಿತರ ಆರೋಗ್ಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News