ದೇವರಾಜ ಅರಸು ಧ್ವನಿಯಿಲ್ಲದವರ ಬಂಧುವಾಗಿ ಕೆಲಸ ಮಾಡಿದರು: ಮಾಜಿ ಸಚಿವ ಸಿ.ಎಚ್.ವಿಜಯಶಂಕರ್

Update: 2019-06-06 18:34 GMT

ಮೈಸೂರು,ಜೂ.6: ದಿಕ್ಕಿಲ್ಲದವರ ಧ್ವನಿಯಾಗಿ, ಧ್ವನಿಯಿಲ್ಲದವರ ಬಂಧುವಾಗಿ ಕೆಲಸ ಮಾಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಬಣ್ಣಿಸಿದರು.

ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಶುಕ್ರವಾರ ಅರಸು ಜಾಗೃತಿ ಅಕಾಡೆಮಿ ಮತ್ತು ಅರಸು ಪತ್ರಿಕೆ ಸಂಯುಕ್ತವಾಗಿ ಏರ್ಪಡಿಸಿದ ’ಧ್ವನಿ ಇಲ್ಲದವರಿಗೆ ಧ್ವನಿಕೊಟ್ಟ ಧಣಿ’ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು 37ನೇ ಪುಣ್ಯಸ್ಮರಣೆ ಸಮಾರಂಭ ಪ್ರಶಸ್ತಿ ಪ್ರದಾನವನ್ನು ಉದ್ಘಾಟಿಸಿ ಮಾತನಾಡಿದರು. 

ಹುಟ್ಟಿನಿಂದ ಯಾವುದೇ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ಅವರು ಬೆಳೆದಂತ ರೀತಿ, ಬದುಕನ್ನು ನಿರೂಪಿಸಿದ ರೀತಿ, ಬದುಕಿನ ಸಾಧನೆಯ ರೀತಿ ನೋಡಿದಾಗ ಸಮಾಜದ ಎಲ್ಲ ವರ್ಗಗಳೂ ಇವರು ನಮ್ಮವರು ಎಂದು ಗೌರವಿಸುವ, ಪ್ರೀತಿಸುವ ವ್ಯಕ್ತಿತ್ವ ದೇವರಾಜ ಅರಸು ಅವರದ್ದು ಎಂದರು. ಅವರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಮೈಸೂರಿನಲ್ಲಿ ದೇವರಾಜ ಅರಸು ಅವರ ಪ್ರತಿಮೆ ಇಲ್ಲ. ಮೈಸೂರಿನಲ್ಲಿ ಪ್ರತಿಮೆ ಆಗಬೇಕೆಂಬ ಒತ್ತಾಯವಿದೆ. ಅದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ದೇವರಾಜ ಅರಸು ಅವರು ಎಲ್ಲ ವರ್ಗದವರಿಗೂ ನ್ಯಾಯ ಕೊಟ್ಟರು. ಆದರೆ ಇಂದು ಅರಸು ಸಮಾಜ ಕಷ್ಟದ ಪರಿಸ್ಥಿತಿಯಲ್ಲಿದೆ. ನಿಗಮ ಆಗಬೇಕೆಂಬ ಭಾವನೆ ವ್ಯಕ್ತಪಡಿಸಿದ್ದೀರಿ. ನಿಗಮ ಸ್ಥಾಪಿಸಲೂ ಒತ್ತಾಯಿಸಲಾಗುವುದು ಎಂದರು. ದೇವರಾಜ ಅರಸು ಅವರು ಸ್ಪರ್ಶಿಸದ ವಿಚಾರಗಳೇ ಇಲ್ಲ. ಅವರ ಬದುಕಿನ ಮಜಲುಗಳನ್ನು ನೋಡಿದಾಗ ಯಾವ ವೃತ್ತಿಯನ್ನು ಅವರು ಮಾಡಿಲ್ಲ ಎಂಬುದನ್ನು ಜೀವನದಲ್ಲಿ ನೋಡಬೇಕಾಗುತ್ತದೆ. ಶಾಸಕರಾಗುವುದಕ್ಕೂ ಮೊದಲು ದುಡಿಮೆ ಮಾಡಿದವರು. ಕೃಷಿ ಪದ್ಧತಿ, ಕೃಷಿ ಸಮಸ್ಯೆ ಅರಿತವರು. ಅವರ ವ್ಯಕ್ತಿತ್ವ ನೋಡಿದಾಗ ನಾಗರಹೊಳೆಯಿಂದ ಒಂಟಿ ಸಲಗ ಬಂದ ಹಾಗೆ ತೋರುತ್ತಿದ್ದರೆಂದು ಬಣ್ಣಿಸಿದರು. ಎದುರಾಳಿಯಾಗಿ ಮಾತನಾಡುತಿದ್ದವರ ಶಕ್ತಿ ತಡೆಹಿಡಿಯುವ ಅಪರೂಪದ ರಾಜಕಾರಣಿ. ಹಿಡಿದ ಕಾರ್ಯ ಮುಗಿಸುವ ವಿಚಾರದಲ್ಲಿ ಅವರಿಗೆ ತಿಳಿದ ಬದ್ಧತೆ ಯಾರೂ ಪ್ರಶ್ನಿಸುವ ಹಾಗಿಲ್ಲ.  ಎದುರಾಳಿಗಳು ಯಾರೇ ಇರಲಿ  ಕಾರ್ಯವನ್ನು ಮಾಡಿಮುಗಿಸಬೇಕು. ಕೈಗೆತ್ತಿಕೊಂಡ ಮೇಲೆ ಕೈಬಿಡದಂತಹ ಒಂದು ಅಪರೂಪದ ವ್ಯಕ್ತಿತ್ವ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ನಾ.ನಾಗಚಂದ್ರ, ಎಂ.ಚಂದ್ರಶೇಖರ್, ಕೊ.ಸು.ನರಸಿಂಹಮೂರ್ತಿ, ಕಿರಣ್ ಜಿ.ಅರಸ್, ಭಾನು ಮೋಹನ್ ಅವರನ್ನು ಧ್ವನಿ ಕೊಟ್ಟ ದಣಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಅರಸು ಜಾಗೃತಿ ಅಕಾಡೆಮಿಯ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ ಜೋಯೀಸ್, ಮೈಸೂರು ವಾಣಿಜ್ಯ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಅನ್ವೇಷಣಾ ಟ್ರಸ್ಟ್ ನ ಅಮರನಾಥ ರಾಜೇ ಅರಸ್, ಡಾ.ಪಿ.ಶಾಂತರಾಜ ಅರಸ್, ಡಾ.ಎಂ.ಜಿ.ಆರ್ ಅರಸ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News