ಭದ್ರಾವತಿ: ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

Update: 2019-06-07 12:37 GMT

ಶಿವಮೊಗ್ಗ, ಜೂ.7: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಭದ್ರಾವತಿ ತಾಲೂಕಿನ ಅಗರದಹಳ್ಳಿ ಕ್ಯಾಂಪಿನ ಬ್ಯಾಲೇಶ್ (47) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತನ ಕಡೆಯವರು ಪೊಲೀಸರ ಹಿಂಸೆಯಿಂದಲೇ ಬ್ಯಾಲೇಶ್ ಮೃತಪಟ್ಟಿದ್ದಾರೆ. ಇದೊಂದು ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ಪೊಲೀಸರು, ಬ್ಯಾಲೇಶ್ ಸಾವಿಗೆ ಹೃದಯಾಘಾತ ಕಾರಣವೆಂದು ಹೇಳುತ್ತಿದ್ದಾರೆ. ತನಿಖೆಯ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ. 

ಆರೋಪವೇನು?: ಓ.ಸಿ. ಬಿಡ್ಡರ್ ಆಗಿದ್ದ ಬ್ಯಾಲೇಶ್ ಹಾಗೂ ಇತರರನ್ನು ಹೊಳೆಹೊನ್ನೂರು ಪೊಲೀಸರು ವಿಚಾರಣೆಗೆಂದು ಕರೆದೊಯ್ದಿದ್ದರು. ತದನಂತರ ಅವರನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದರು. ತಕ್ಷಣವೇ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಘಟನೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಬ್ಯಾಲೇಶ್‍ರನ್ನು ಬಂಧಿಸಿದ್ದು ಯಾವಾಗ? ಕಾರಣವೇನು? ಎಲ್ಲಿ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು? ಕುಸಿದು ಬಿದ್ದಿದ್ದು ಎಲ್ಲಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಈ ನಡುವೆ ಮೃತನ ಬಂಧುಗಳು ಬ್ಯಾಲೇಶ್‍ರವರ ಸಾವಿಗೆ ಪೊಲೀಸರ ಕಿರುಕುಳ ಕಾರಣವಾಗಿದೆ. ಇದರಿಂದಲೇ ಅವರು ಮೃತಪಟ್ಟಿದ್ದಾರೆ. ಇದೀಗ ಪೊಲೀಸರು ಪ್ರಕರಣ ಮುಚ್ಚಿ ಹಾಕಲೆತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ದೂರಿದ್ದಾರೆ. 

ಇನ್ನೊಂದೆಡೆ ಪೊಲೀಸ್ ಇಲಾಖೆಯು ಈ ಆರೋಪವನ್ನು ಅಲ್ಲಗಳೆದಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಹೃದಯಾಘಾತದಿಂದ ಬ್ಯಾಲೇಶ್ ಅಸುನೀಗಿದ್ದಾರೆ ಎಂದು ಹೇಳುತ್ತಿದೆ. ಉನ್ನತ ಮಟ್ಟದ ತನಿಖೆಯ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News