ಜಿಂದಾಲ್‌ಗೆ ಜಮೀನು ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ: ಶೋಭಾ ಕರಂದ್ಲಾಜೆ

Update: 2019-06-07 13:10 GMT

ಬೆಂಗಳೂರು, ಜೂ.7: ಜಿಂದಾಲ್ ಕಂಪೆನಿಗೆ 3,667 ಎಕರೆ ಜಮೀನನ್ನು ಅತ್ಯಂತ ಕಡಿಮೆ ದರದಲ್ಲಿ ಹಸ್ತಾಂತರಿಸುವ ರಾಜ್ಯ ಸಚಿವ ಸಂಪುಟದ ತೀರ್ಮಾನದ ಹಿಂದೆ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸ್ಪಷ್ಟ ಸೂಚನೆಗಳಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಕೇವಲ ಗುತ್ತಿಗೆ ಆಧಾರದ ಮೇಲೆ ಜಿಂದಾಲ್ ಸ್ಪೀಲ್ ಕಂಪೆನಿಗೆ ಜಮೀನು ನೀಡಲಾಗಿತ್ತು. ಆದರೆ, ಗುತ್ತಿಗೆ ಮುಗಿಯುತ್ತಲೆ ಬೇರಾವುದೆ ಮಾನದಂಡ ಅನುಸರಿಸದೇ ಶುದ್ಧ ಕ್ರಯಪತ್ರದ ಮೂಲಕ ಬೆಲೆಬಾಳುವ 3,667ಎಕರೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ತೋರಣಗಲ್ಲು ಮತ್ತು ಕರೆಕುಪ್ಪ ಗ್ರಾಮಗಳಲ್ಲಿ 2000.58 ಎಕರೆ ಹಾಗೂ ಸಂಡೂರು ತಾಲೂಕಿನ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿ 1666 ಎಕರೆ ಸೇರಿ ಒಟ್ಟು 3667 ಎಕರೆ ಭೂಮಿಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲು ಕಾರಣವೇನು. ಪುನಃ ಗುತ್ತಿಗೆಯನ್ನು ನವೀಕರಿಸಲು ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ಜಿಂದಾಲ್ ಕಂಪೆನಿಯ ಪರವಾಗಿ ರಾಜ್ಯ ಸರಕಾರ ವಕಾಲತ್ತು ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವುದರ ಹಿಂದಿನ ತಂತ್ರಗಾರಿಕೆ ಏನೆಂಬುದು ಜಿಂದಾಲ್ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಮೈತ್ರಿ ಸರಕಾರದ ನಾಯಕರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಿಂದಾಲ್ ಕಂಪೆನಿಗೆ ಜಮೀನು ನೀಡುವ ಬಗ್ಗೆ ವೌನವಹಿಸಿರುವುದು ಅನುಮಾನ ಮೂಡಿಸಿದೆ ಎಂದು ಅವರು ಹೇಳಿದರು.

ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇಲ್‌ಡೀಡ್ ಮಾಡಿಕೊಡುವುದರಿಂದ ಕರ್ನಾಟಕಕ್ಕೆ ಆಗುವ ಲಾಭ ಏನು. ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲೂಕಿನ ಭೂಮಿ ವಶಪಡಿಸಿಕೊಳ್ಳಲು ಖಾಸಗಿಯವರಿಗೆ ಎಕರೆಗೆ 30ಲಕ್ಷರೂ.ನಿಂದ ಒಂದು ಕೋಟಿ ರೂ. ಪರಿಹಾರ ನೀಡಿರುವಾಗ ಜಿಂದಾಲ್ ಕಂಪೆನಿಗೆ ಎಕರೆಗೆ ಕೇವಲ 1.22ಲಕ್ಷ ರೂ.ನೀಡಿರುವ ಉದ್ದೇಶವೇನು?

-ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News