ಬರಿದಾಗುತ್ತಿರುವ ತುಂಗಾ ಡ್ಯಾಂ: ಶಿವಮೊಗ್ಗ ನಗರದಲ್ಲಿ ಜೀವಜಲಕ್ಕೆ ತೀವ್ರ ಹಾಹಾಕಾರ

Update: 2019-06-07 17:23 GMT

ಶಿವಮೊಗ್ಗ. ಜೂ. 7: 'ಮಲೆನಾಡ ನಗರಿ' ಖ್ಯಾತಿಯ, ಪಶ್ಚಿಮಘಟ್ಟದ ಜೀವನದಿಗಳಲ್ಲೊಂದಾದ ತುಂಗಾ ನದಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ಎದುರಾಗಿದೆ. ಮುಂದಿನ ಕೆಲ ದಿನಗಳಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ, ತುಂಗಾ ಜಲಾಶಯಕ್ಕೆ ನೀರು ಹರಿದು ಬರದಿದ್ದರೆ ಶಿವಮೊಗ್ಗದ ನಾಗರಿಕರು ಜೀವಜಲಕ್ಕೆ ಪರಿತಪಿಸುವುದು ಖಚಿತವಾಗಿದೆ.

ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ, ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ತುಂಗಾ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಸಂಗ್ರಹ ಇಳಿಕೆಯಾಗುತ್ತಿದೆ. ಇದರಿಂದ ಡ್ಯಾಂನಿಂದ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಸಹಜವಾಗಿಯೇ ಇದರ ನೇರ ಪರಿಣಾಮ, ಸರಬರಾಜಿನ ಮೇಲೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಬಹುತೇಕ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. 

ನೀರಿಗಾಗಿ ನಾಗರಿಕರು ಅಕ್ಷರಶಃ ಪರದಾಡುವಂತಾಗಿದೆ. ಸ್ಥಳೀಯಾಡಳಿತದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ. ಸ್ವತಃ ಕೆಲ ಕಾರ್ಪೋರೇಟರ್ ಗಳು ಕೂಡ, ಪಾಲಿಕೆ ಕಚೇರಿ ಮುಂಭಾಗ ನಾಗರಿಕರ ಜೊತೆ ಹೋರಾಟಕ್ಕಿಳಿರುವುದು ಜೀವಜಲದ ತತ್ವಾರದ ಬಿಸಿ ಯಾವ ಮಟ್ಟದಲ್ಲಿ ಎಂಬುವುದಕ್ಕೆ ಸಾಕ್ಷಿಯಾಗಿದೆ. 

ಇನ್ನೊಂದೆಡೆ ನೀರು ಸರಬರಾಜು ಉಸ್ತುವಾರಿ ಹೊತ್ತಿರುವ ಜಲ ಮಂಡಳಿ ಹಾಗೂ ನಾಗರಿಕರಿಗೆ ಉತ್ತರದಾಯಿಯಾಗಿರುವ ಮಹಾನಗರ ಪಾಲಿಕೆ ಆಡಳಿತಕ್ಕೆ ನೀರಿನ ಸಮಸ್ಯೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏನೂ ಮಾಡಲಾಗದ ಸ್ಥಿತಿ ಆಡಳಿತದ್ದಾಗಿದೆ. 'ತುಂಗಾ ಡ್ಯಾಂ ಬರಿದಾಗುವ ಹಂತಕ್ಕೆ ಬಂದಿರುವುದರಿಂದ, ಅಭಾವ ತಲೆದೋರಿದೆ. ನೀರನ್ನು ಮಿತವಾಗಿ ಬಳಸಿ' ಎಂದು ಮನವಿ ಮಾಡಿಕೊಳ್ಳಲಾರಂಭಿಸಿದೆ. 

ಸಂಕಷ್ಟ: 'ಮಳೆ ಅಭಾವದಿಂದಾಗಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಗಾಜನೂರು ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಸದ್ಯದ ಮಾಹಿತಿ ಅನುಸಾರ ಡ್ಯಾಂನಲ್ಲಿ 1.25 ಟಿಎಂಸಿಯಷ್ಟು ನೀರಿದೆ. ನಗರದ ಪ್ರತಿನಿತ್ಯದ ನೀರಿನ ಬೇಡಿಕೆ 0.2 ಟಿಎಂಸಿಯಾಗಿದೆ. ಮಳೆಗಾಲ ಆರಂಭವಾಗುವವರೆಗೂ ಅತ್ಯಂತ ಎಚ್ಚರಿಕೆಯಿಂದ ಈ ನೀರು ಬಳಕೆ ಮಾಡಬೇಕಾಗಿದೆ' ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಎಸ್.ಎನ್.ಚೆನ್ನಬಸಪ್ಪ ತಿಳಿಸಿದ್ದಾರೆ. 

'ಈ ಕಾರಣದಿಂದ ಮಳೆಗಾಲ ಆರಂಭವಾಗುವರೆಗೂ ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವ ಪರಿಸ್ಥಿತಿಯಿದೆ. ನಗರ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಷ್ಟೆ ಮಿತವಾಗಿ ಬಳಸಬೇಕು. ಸರಬರಾಜಾಗುವ ನೀರಿನ ನಳಕ್ಕೆ ಹಿಂತಿರುಗಿಸುವ ಕವಾಟ (ನಾನ್ ರಿಟರ್ನ್ ವಾಲ್ವ್) ಕಡ್ಡಾಯವಾಗಿ ಅಳವಡಿಸಬೇಕು. ಕುಡಿಯುವ ನೀರನ್ನು ಗಿಡ ಮರಗಳಿಗೆ ಬಳಸಬಾರದು. 

ಪಾತ್ರೆ, ಬಟ್ಟೆ, ನೆಲ ಸ್ವಚ್ಚಗೊಳಿಸಿದ ನೀರನ್ನು ಶೇಖರಿಸಿ ಗಿಡಮರಗಳಿಗೆ ಬಳಕೆ ಮಾಡಿದರೆ ಅನುಕೂಲವಾಗಲಿದೆ. ಸಂಪ್‍ನಿಂದ ಓವರ್ ಟ್ಯಾಂಕ್‍ಗೆ ಅಗತ್ಯವಿದ್ದಷ್ಟು ಮಾತ್ರ ನೀರು ಏರಿಸಬೇಕು. ಸಿಂಟೆಕ್ಸ್ ತುಂಬಿ ಹರಿಯದಂತೆ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿರುವ ಅವರು, 'ಸಂಪ್‍ಗಳಿಲ್ಲದ ಮನೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ದಿನನಿತ್ಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್ ಗಳ ಮೂಲಕ ಅಥವಾ ನಲ್ಲಿಗಳ ಮೂಲಕ ಮಾಡಲಾಗುವುದು' ಎಂದು ತಿಳಿಸಿದ್ದಾರೆ. 

ನೀರಿನ ಮಿತವ್ಯಯ ಬಳಕೆಗೆ ಮನವಿ
ದಿನನಿತ್ಯದ ನೀರಿನ ಬೇಡಿಕೆಗಳಿಗೆ ಸಮೀಪದಲ್ಲಿರುವ ನೀರಿನ ಮೂಲಗಳಾದ ಬೋರ್ ವೆಲ್, ತೆರೆದ ಬಾವಿ, ಚಾನಲ್ ಇತ್ಯಾದಿಗಳನ್ನು ಬಳಕೆ ಮಾಡಿ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ವಾಹನ, ರಸ್ತೆ ಹಾಗೂ ಮನೆಯ ಮುಂದಿನ ಅಂಗಳಗಳನ್ನು ಕುಡಿಯುವ ನೀರಿನಿಂದ ತೊಳೆಯದೇ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸುವುದು. ವಿತರಣಾ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಕಂಡುಬಂದಲ್ಲಿ ಜಲಮಂಡಳಿ ನಿರ್ವಹಣಾ ಉಪವಿಭಾಗದ ದೂರವಾಣಿ ಸಂಖ್ಯೆ : 08182-273096 ಕರೆ ಮಾಡಿ ಗಮನಕ್ಕೆ ತರುವಂತೆ' ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರ?!
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಸದ್ಯ ಶಿವಮೊಗ್ಗ ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವ ಹಿಂದೆಂದೂ ಕಂಡು ಬಂದಿಲ್ಲ. ಜಲಾನಯನ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆಯಿಂದ ತುಂಗಾ ಜಲಾಶಯದಲ್ಲಿ ನಿರಂತರವಾಗಿ ನೀರು ಸಂಗ್ರಹವಾಗುತ್ತಿದ್ದರಿಂದ, ನಗರದ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಕಳೆದ ಬೇಸಿಗೆ ವೇಳೆ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಕೈಕೊಟ್ಟಿತು. ಬಿಸಿಲ ತಾಪವೂ ಕೂಡ ಏರುಗತಿಯಲ್ಲಿತ್ತು. ಮತ್ತೊಂದೆಡೆ ಜೂನ್ ಆರಂಭವಾದರೂ ಮುಂಗಾರು ಮಳೆ ಕಾಲಿಟ್ಟಿಲ್ಲ. ಇದರಿಂದ ಡ್ಯಾಂನಲ್ಲಿ ನೀರಿನ ಸಂಗ್ರಹ ಸಂಪೂರ್ಣ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಶಿವಮೊಗ್ಗ ನಗರದ ಕುಡಿಯುವ ನೀರಿನ ಸ್ಥಿತಿ ಮತ್ತಷ್ಟು ವಿಷಮ ಸ್ಥಿತಿಗೆ ತಲುಪುವುದು ನಿಶ್ಚಿತವಾಗಿದೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News