ಮಾಧ್ಯಮದವರ ವಿರುದ್ಧ ಸಚಿವ ಸಾ.ರಾ.ಮಹೇಶ್ ಅಸಹನೆ: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಖಂಡನೆ

Update: 2019-06-07 18:41 GMT

ಮಡಿಕೇರಿ, ಜೂ.7: ಮಡಿಕೇರಿಯಲ್ಲಿ ನಡೆದ ಅತಿವೃಷ್ಟಿ ಹಾನಿ ಸಂತ್ರಸ್ತರ ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾಧ್ಯಮ ಪ್ರತಿನಿಧಿಗಳನ್ನು ಹೊರಕಳುಹಿಸುವ ಮೂಲಕ ಅಸಹನೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಕೋಟೆ ಹಳೇ ವಿಧಾನಸಭಾಂಗಣದಲ್ಲಿ ಶುಕ್ರವಾರ ಸಂಜೆ ಪ್ರಕೃತಿ ವಿಕೋಪ ಸಂತ್ರಸ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಆಯೋಜಿಸಿದ್ದರು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ವಿವಿಧ ಗ್ರಾಮಗಳ ಸಂತ್ರಸ್ತರು, ಪರಿಹಾರ ಸಮರ್ಪಕವಾಗಿ ನೀಡದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸ ತೊಡಗಿದರು. 
ಈ ಸಂದರ್ಭ ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನಿಲ್ ಸುಬ್ರಮಣಿ ಕೂಡ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು.

ಈ ವಿದ್ಯಮಾನಗಳನ್ನು ವಿದ್ಯುನ್ಮಾನ ಮಾಧ್ಯಮದವರು ಚಿತ್ರೀಕರಿಸುತ್ತಿದ್ದರು. ಸಂತ್ರಸ್ತರ ಟೀಕೆಗಳನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮಗಳ ವಿರುದ್ಧ ಏಕಾಏಕಿ ಆಕ್ರೋಶ ಹೊರಹಾಕಿದ ಸಚಿವ ಸಾ.ರಾ.ಮಹೇಶ್, ಟಿವಿ ಮಾಧ್ಯಮದವರು ಸಭೆಯಿಂದ ಹೊರಹೋಗಿ ಎಂದು ಸೂಚಿಸಿದರು. ನಾನು ಕರೆದಾಗಷ್ಟೇ ಸಭೆಗೆ ಬರಬೇಕು. ಚಿತ್ರೀಕರಣ ನಿಲ್ಲಿಸಿ ಹೊರಹೋಗಿ ಎಂದು ಸಚಿವರು ಆದೇಶಿಸಿದಾಗ ಟಿವಿ ಮಾಧ್ಯಮದವರು ತಬ್ಬಿಬ್ಬಾದರು. ಅಲ್ಲದೆ ಸಚಿವರ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಚಿವರ ಕೋಪ ಇಷ್ಟಕ್ಕೆ ನಿಲ್ಲಲಿಲ್ಲ. ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ ಈ ಟಿವಿಯವರು ಮರ ಕಡಿದ ಪ್ರಕರಣವನ್ನು ದಿನವಿಡೀ ಸುದ್ದಿ ಮಾಡಿ ಹೇಳಿದ್ದನ್ನೇ ಹೇಳುತ್ತಾರೆ. ಇದೇನು ದಿನವಿಡೀ ತೋರಿಸುವಂಥ ದೊಡ್ಡ ವಿಷಯಾನಾ ಎಂದು ಟಿವಿ ಮಾಧ್ಯಮಗಳ ವಿರುದ್ಧ ಅಸಹನೆ ಹೊರಹಾಕಿದರು. 

ಸಭೆ ಮುಗಿಸುವ ಮುನ್ನವೂ ಟಿವಿ ಮಾದ್ಯಮದವರನ್ನು ಹೊರಹಾಕಿದ್ದನ್ನು ಸಮರ್ಥನೆ ಮಾಡಿಕೊಂಡ ಸಚಿವ ಸಾ.ರಾ.ಮಹೇಶ್ ಟಿವಿ ಯವರು ಸಭೆಯಲ್ಲಿದ್ದಿದ್ದರೆ ಏನೇನೋ ಸುದ್ದಿ ಮಾಡುತ್ತಿದ್ದರು. ಅದಕ್ಕೆ ಅವರನ್ನು ಸಭೆಯಿಂದ ಹೊರಕಳುಹಿಸಿದೆ ಎಂದು ಹೇಳಿದರು.

ಸಚಿವ ಸಾ.ರಾ.ಮಹೇಶ್ ಟಿವಿ ಮಾಧ್ಯಮದವರನ್ನು ಸಭೆಯಿಂದ ಹೊರಕಳುಹಿಸಿದ ಪ್ರಕರಣವನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News