ಭಾರತದಲ್ಲಿ ಒಂದು ಮತಕ್ಕೆ ಬೆಲೆ ಎಷ್ಟು ?

Update: 2019-06-08 14:57 GMT

ಹೊಸದಿಲ್ಲಿ, ಜೂ. 8: ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ 55 ಸಾವಿರ ಹಾಗೂ 60 ಸಾವಿರ ಕೋಟಿ ರೂಪಾಯಿಗಳ ನಡುವೆ ವೆಚ್ಚವಾಗಿದೆ ಎಂದು ‘ದಿ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ ಬಿಡುಗಡೆ ಮಾಡಿದ ವರದಿ ಹೇಳಿದೆ.

ನೀತಿ ಹಾಗೂ ಅಭಿವೃದ್ಧಿ ಸಂಶೋಧನೆಯ ಸ್ವತಂತ್ರ ಚಿಂತಕರ ಚಾವಡಿಯಾಗಿರುವ ‘ದಿ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ ಜೂನ್ 3ರಂದು ಈ ವರದಿ ಬಿಡುಗಡೆ ಮಾಡಿದೆ.

ಈ ಮೊತ್ತವನ್ನು ಸರಾಸರಿ ಮಾಡಿದರೆ ಸರಿಸುಮಾರು ಪ್ರತಿ ಕ್ಷೇತ್ರದಲ್ಲಿ 100 ಕೋಟಿ ರೂಪಾಯಿ ಹಾಗೂ ಪ್ರತಿ ಮತದಾರರಿಗೆ 700 ರೂಪಾಯಿ ವೆಚ್ಚ ಮಾಡಿದಂತಾಗುತ್ತದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಮಾಡಿದ ವೆಚ್ಚ ಹಾಗೂ ಮತದಾರರಿಗೆ ವಿತರಿಸಿದ ನಗದು ಅಲ್ಲದೆ, ಈ ಅಂದಾಜು ಚುನಾವಣಾ ಆಯೋಗ ಮತದಾನಕ್ಕೆ ಹಾಗೂ ಮತ ಎಣಿಕೆಗೆ ವೆಚ್ಚ ಮಾಡಿದ ಹಣವನ್ನು ಕೂಡ ಒಳಗೊಂಡಿದೆ. ಅಲ್ಲದೆ, ಚುನಾವಣಾ ವೇಳಾಪಟ್ಟಿ ಘೋಷಿಸಿದ ಮಾರ್ಚ್ 10ರಿಂದ ಕೊನೆಯ ಮತದಾನ ನಡೆದ ದಿನಾಂಕ ಮೇ 19ರ ವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವರ್ಗಾವಣೆ ಮಾಡಿದ ಹಣವನ್ನು ಕೂಡ ಒಳಗೊಂಡಿದೆ. ಚುನಾವಣಾ ಆಯೋಗ ಮಾಡಿದ ವೆಚ್ಚ ಹಾಗೂ ಸರಕಾರ ಮಾಡಿದ ವೆಚ್ಚಗಳನ್ನು ಕಳೆದರೆ ಪ್ರತಿ ಮತಕ್ಕೆ 583 ರೂಪಾಯಿ ವೆಚ್ಚ ಮಾಡಿದಂತಾಗುತ್ತದೆ ಎಂದು ವರದಿ ಹೇಳಿದೆ.

ಚುನಾವಣಾ ವೆಚ್ಚದ ಬಗ್ಗೆ ಮತದಾರರ ಗ್ರಹಿಕೆಗಿಂತ ಹೊರತಾದ ಉದ್ದೇಶವನ್ನು ಕೂಡ ಸಮೀಕ್ಷೆ ಹೊಂದಿತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಪ್ರಧಾನ ನಿರ್ದೇಶಕ ಪಿ.ಎನ್. ವಾಸಂತಿ ತಿಳಿಸಿದ್ದಾರೆ.

ಸಮೀಕ್ಷೆ ‘ಅನುಭವ’ದ ಮೂಲಕ ಮತದಾರರ ಗ್ರಹಿಕೆಯನ್ನು ದೃಢೀಕರಿಸಲು ಹಾಗೂ ಪ್ರಮಾಣೀಕರಿಸಲು ಪ್ರಯತ್ನಿಸಿತು. ಉದಾಹರಣೆಗೆ ವ್ಯಕ್ತಿ ಅಥವಾ ಅವರಿಗೆ ತಿಳಿದ ಇತರ ಯಾರಾದರೂ ಅಭ್ಯರ್ಥಿಗೆ ಮತ ಹಾಕುವ ಭರವಸೆಗೆ ನಗದು ಸ್ವೀಕರಿಸಿದ್ದಾರೆ ಎಂದು ಅದು ಪರಿಶೀಲಿಸಿತ್ತು.

 ಅನಂತರ ಮತದಾರರ ಈ ಪ್ರತಿಕ್ರಿಯೆ, ಮಾಧ್ಯಮಗಳ ದೃಢೀಕರಣ ಹಾಗೂ ತಳಮಟ್ಟದ ವರದಿಯ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು ಎಂದು ವಾಸಂತಿ ಹೇಳಿದ್ದಾರೆ.

ಅಭ್ಯರ್ಥಿಗಳಿಂದ ಮಿತಿಗಿಂತ ಹೆಚ್ಚು ವೆಚ್ಚ ಭಾರತದಲ್ಲಿ ಚುನಾವಣಾ ವೆಚ್ಚಕ್ಕೆ ಮಿತಿ ಇದೆ. ರಾಜ್ಯಕ್ಕೆ ಅನುಗುಣವಾಗಿ ಲೋಕಸಭಾ ಅಭ್ಯರ್ಥಿ 50ರಿಂದ 70 ಲಕ್ಷ ರೂಪಾಯಿ ಹಾಗೂ ವಿಧಾನ ಸಭಾ ಅಭ್ಯರ್ಥಿ 20ರಿಂದ 28 ಲಕ್ಷ ರೂಪಾಯಿ ವೆಚ್ಚ ಮಾಡಬಹುದು. ಲೋಕಸಭೆ ಹಾಗೂ ವಿಧಾನ ಸಭೆಯ ಎಲ್ಲ ಅಭ್ಯರ್ಥಿಗಳ ಗರಿಷ್ಠ ಒಟ್ಟು ಚುನಾವಣಾ ವೆಚ್ಚ 6,639.22 ಕೋಟಿ ರೂಪಾಯಿ ಆಗುತ್ತದೆ. ಆದರೆ, ಈ ಚುನಾವಣೆಗಳಲ್ಲಿ ಎಲ್ಲ ಅಭ್ಯರ್ಥಿಗಳ ಒಟ್ಟು ಚುನಾವಣಾ ವೆಚ್ಚ 24,000 ಕೋಟಿ ರೂಪಾಯಿ ಆಗಿದೆ.

ಬಿಜೆಪಿ ಎಷ್ಟು ವೆಚ್ಚ ಮಾಡಿತು ? ಈ ಚುನಾವಣೆಗಳಲ್ಲಿ ಬಿಜೆಪಿ ಒಟ್ಟು ಚುನಾವಣಾ ವೆಚ್ಚದ ಶೆ. 45ರಿಂದ ಶೇ. 55ರ ವರೆಗೆ ಮಾಡಿದೆ. ಇದು 24,750 ಕೋಟಿ ರೂಪಾಯಿಯಿಂದ 30,250 ಕೋಟಿ ರೂಪಾಯಿ ಆಗುತ್ತದೆ. ಆದರೆ, ಕಾಂಗ್ರೆಸ್ ಒಟ್ಟು ಚುನಾವಣಾ ವೆಚ್ಚದ ಶೇ. 15ರಿಂದ ಶೇ 20ರ ವರೆಗೆ ವೆಚ್ಚ ಮಾಡಿದೆ.

ಈ ಹಣ ಎಲ್ಲಿಂದ ಬಂತು ? ಚುನಾವಣೆಯಲ್ಲಿ ವೆಚ್ಚ ಮಾಡಲಾದ ಹಣದ ಮೂಲ ಹಲವು ಉದ್ಯಮಗಳು ಎಂದು ಗುರುತಿಸಲಾಗಿದೆ. ಆದರೆ, ಯಾವ ಉದ್ಯಮಗಳು ಎಷ್ಟು ನೀಡಿವೆ ಎಂಬುದು ತಿಳಿದುಬಂದಿಲ್ಲ. ಯಾಕೆಂದರೆ ರಾಜಕೀಯ ಪಕ್ಷಗಳ ವೆಚ್ಚ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News