ಕೊಡಗು: ಎರಡು ದಿನಗಳಲ್ಲಿ ಮುಂಗಾರು ಪ್ರವೇಶ; 30-40 ಕಿ.ಮೀ. ವೇಗದ ಗಾಳಿ ಮಳೆಯ ಮುನ್ಸೂಚನೆ

Update: 2019-06-08 17:20 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಜೂ.8 : ಹವಾಮಾನ ಇಲಾಖೆಯ ಪೂರ್ವಸೂಚನೆಗೆ ಎರಡು ದಿನ ತಡವಾಗಿ ಇಂದು ನೆರೆಯ ಕೇರಳ ರಾಜ್ಯವನ್ನು ಮುಂಗಾರು ಪ್ರವೇಶಿಸಿದ್ದು, ಮುಂದಿನ ಎರಡರಿಂದ ಮೂರು ದಿನಗಳ ಅವಧಿಯಲ್ಲಿ ಕೊಡಗನ್ನು ಒಳಗೊಂಡಂತೆ ರಾಜ್ಯದ ಕರಾವಳಿ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ  ವಿಕೋಪ ಉಸ್ತುವಾರಿ ಕೇಂದ್ರ ಮುಂಗಾರಿನ ಬಗ್ಗೆ ಈಗಾಗಲೆ ಮುನ್ಸೂಚನೆಯನ್ನು ನೀಡಿದ್ದು, ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಜೂ.9ರ ಒಳಗಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಿಗೆ ವ್ಯಾಪಿಸುವ ಸಾಧ್ಯತೆಗಳಿರುವುದಾಗಿ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದಿಂದ ಗಾಳಿ ಬೀಸಲಿದ್ದು, ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆಯೆಂದು ಕರ್ನಾಟಕ ರಾಜ್ಯ ನೈಸರ್ಗಿಕ  ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ವಹಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಆತಂಕ- ಕಳೆದ ಸಾಲಿನ ಮುಂಗಾರಿನ ಅವಧಿಯಲ್ಲಿನ ಭಾರೀ ಮಳೆಯಿಂದ ಉದ್ಭವಿಸಿದ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ, ಈ ಬಾರಿಯ ಮುಂಗಾರಿನ ಬಗ್ಗೆ ಜಿಲ್ಲೆಯ ಜನತೆ ಒಂದಷ್ಟು ಆತಂಕಕ್ಕೆ ಸಿಲುಕಿದ್ದಾರೆ. ಇಂತಹ ಗೊಂದಲ ಆತಂಕಗಳಿಗೆ ಜನತೆ ಒಳಗಾಗದಂತೆ ಜಿಲ್ಲಾಡಳಿತವು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳೊಂದಿಗೆ, ಮುಂಜಾಗ್ರತಾ ಕ್ರಮಗಳಿಗೂ ಒತ್ತು ನೀಡಿದೆ.

ಮುಂಗಾರಿನ ಅವಧಿಯಲ್ಲಿನ ಭಾರೀ ಮಳೆಯ ಸಂದರ್ಭ ಸಂಭಾವ್ಯ ಅಪಾಯಗಳನ್ನು ಎದುರಿಸಲು ಎನ್‍ಡಿಆರ್‍ಎಫ್ ತಂಡ ಅದಾಗಲೆ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದರೆ, ಗೃಹ ರಕ್ಷಕ ದಳ, ಜಿಲ್ಲಾ ಪೊಲೀಸರು ಅಗತ್ಯ ತರಬೇತಿಯೊಂದಿಗೆ ಸಜ್ಜಾಗಿದ್ದಾರೆ.

ಪ್ರಾಕೃತಿಕ ವಿಕೋಪ ಘಟಿಸಿ ಒಂದು ವರ್ಷ ಸರಿದು, ಮತ್ತೊಂದು ಮಳೆಗಾಲದ ಹೊಸ್ತಿಲಲ್ಲಿ ನಾವು ನಿಂತಿದ್ದು, ಈ ಹಂತದಲ್ಲೂ ಕಳೆದ ಮಳೆಯಲ್ಲಿ ಮನೆಗಳನ್ನು ಕಳೆದುಕೊಂಡ ಎಲ್ಲರಿಗೂ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ, ಮತ್ತು ಜಿಲ್ಲಾಡಳಿತದ ನಿರಂತರ ಪ್ರಯತ್ನಗಳಿಂದ ಮದೆನಾಡು, ಕರ್ಣಂಗೇರಿ ವಿಭಾಗಗಳಲ್ಲಿ ಒಂದಷ್ಟು ಮನೆಗಳನ್ನು ನಿರಾಶ್ರಿತರಿಗೆ ನೀಡಲಾಗಿದೆಯಾದರು, ಉಳಿದ ಸಂತ್ರಸ್ತರು ಮನೆಗಾಗಿ ಕಾಯುವುದು ಅನಿವಾರ್ಯವಾಗಿದೆ.

ಪ್ರಾಕೃತಿಕ ವಿಕೋಪದಿಂದ 6 ಗ್ರಾಪಂ ವ್ಯಾಪ್ತಿಯಲ್ಲಿ ಕಂಡು ಕೇಳರಿಯದ ವಿಕೋಪಗಳು ಸಂಭವಿಸಿದ್ದು, ಆ ಸಂದರ್ಭ ಗುಡ್ಡಗಳ ಕುಸಿತದಿಂದ ಕಾಫಿ ತೋಟಗಳನ್ನು ಕಳೆದುಕೊಂಡವರು, ಗದ್ದೆಗಳ ಮೇಲೆ ಮಣ್ಣು ಮತ್ತು ಕೆಸರು ನಿಂತು ಕೃಷಿ ಚಟುವಟಿಕೆಗಳನ್ನು ನಡೆಸಲಾಗದೆ ನೆರವಿಗಾಗಿ ಸರ್ಕಾರದತ್ತ ಮುಖಮಾಡಿರುವ ಬೆಳೆಗಾರರಿಗೆ ಇಲ್ಲಿಯವರೆಗೂ ಸೂಕ್ತ ಪರಿಹಾರವಾಗಲಿ, ಅವರ ಬದುಕಿಗೆ ಪರ್ಯಾಯ ವ್ಯವಸ್ಥೆಯಾಗಲಿ ಆಗಿಲ್ಲ. ಈ ಹಂತದಲ್ಲಿ ಎದುರಾಗುತ್ತಿರುವ ಮತ್ತೊಂದು ಮಳೆಗಾಲ ಸಂಕಷ್ಟವನ್ನು ತಂದೊಡ್ಡದಿರಲಿ ಎನ್ನುವ ಪ್ರತಿಯೊಬ್ಬರು ಹಾರೈಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News