"ಒಂದು ವರ್ಷ ಸಿಎಂ ಆಗುವುದರಲ್ಲೆ ಕಾಲ ಕಳೆದ ಬಿಎಸ್‌ವೈಗೆ ಈಗ ಜ್ಞಾನೋದಯವಾಗಿದೆ"

Update: 2019-06-09 15:01 GMT

ಬೆಂಗಳೂರು, ಜೂ. 9: ರಾಜ್ಯದಲ್ಲಿ ಮುಂಗಾರು ಹಂಗಾಮು ಬಿತ್ತನೆ ಸಂದರ್ಭದಲ್ಲಿ ಬರ ಅಧ್ಯಯನ ನೆಪದಲ್ಲಿ ಬಿಜೆಪಿ ಮುಖಂಡರು ನಾಟಕವಾಡುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಟೀಕಿಸಿದ್ದಾರೆ.

ರವಿವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೈತ್ರಿ ಸರಕಾರ ಅಸ್ಥಿರಕ್ಕೆ ಆಪರೇಷನ್ ಕಮಲ ನಡೆಸಲು ಮುಂದಾಗಿದ್ದ ಬಿಜೆಪಿಯವರ ಆಟ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಬರ ಅಧ್ಯಯನ ನಾಟಕ ಆರಂಭಿಸಿದ್ದಾರೆಂದು ಲೇವಡಿ ಮಾಡಿದರು.

ಇದೀಗ ಜ್ಞಾನೋದಯ: ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಇದೀಗ ಜ್ಞಾನೋದಯವಾಗಿದೆ. ಹೀಗಾಗಿ ಅವರ ರಾಜ್ಯದ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಒಂದು ವರ್ಷ ಸಿಎಂ ಆಗುವುದರಲ್ಲೆ ಯಡಿಯೂರಪ್ಪ ಕಾಲ ಕಳೆದರು. ಇದೀಗ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವ ಕಡೆ ಬರ ಪ್ರವಾಸ ಮಾಡುತ್ತಿದ್ದಾರೆ. ಬಿಎಸ್‌ವೈ ಅವರಿಗೆ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. 15 ಸಾವಿರ ಕೋಟಿ ರೂ. ಕೇಂದ್ರದಿಂದ ಕೂಲಿ ಬಾಕಿ ಇದ್ದು, ಅದರ ಬಿಡುಗಡೆಗೆ ಯಾವುದೇ ಪ್ರಯತ್ನ ನಡೆಸಿಲ್ಲ. ಕೇಂದ್ರ ಸರಕಾರಕ್ಕೆ ಕಾರ್ಮಿಕರ ಕೂಲಿ ಹಣವನ್ನು ಕೊಡಲು ಸಾಧ್ಯವಿಲ್ಲದೆ ದಿವಾಳಿಯಾಗಿದೆಯೇ ಎಂದು ನಾಡಗೌಡ ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.

ರಾಯಚೂರು ವಿವಿ ಹಾಗೂ ಐಐಐಟಿ ಈ ವರ್ಷ ಆರಂಭವಾಗಲಿದೆ. ಐಐಐಟಿಗೆ 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿ ಅವರ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಐಐಟಿ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಗ್ರಾಮವೊಂದರಲ್ಲಿ ಜೂ.28 ರಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News