‘ವೈರಿಗಳ ನೆಲೆಗೆ ನುಗ್ಗಿ ಹೊಡೆಯುತ್ತೇವೆ’ ಎಂಬ ಮೋದಿ ಹೇಳಿಕೆಗೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-06-09 15:31 GMT

ಮುಂಬೈ, ಜೂ.9: ವೈರಿಗಳ ನೆಲೆಗೆ ನುಗ್ಗಿ ಹೊಡೆಯುತ್ತೇವೆ ಎಂಬ ನರೇಂದ್ರ ಮೋದಿ ಸರಕಾರದ ಹೇಳಿಕೆಯನ್ನು ಅಣಕ ಮಾಡಿರುವ ಎನ್‌ ಸಿಪಿ ಮುಖ್ಯಸ್ಥ ಶರದ್ ಪವಾರ್, ಬಾಲಕೋಟ್ ವಾಯುದಾಳಿ ಪಾಕ್‌ ನಲ್ಲಿ ನಡೆದಿರುವುದಲ್ಲ, ಕಾಶ್ಮೀರದಲ್ಲಿ ಎಂದಿದ್ದಾರೆ.

"ವಾಯುದಾಳಿ ನಡೆಸಿರುವುದು ಪಾಕಿಸ್ತಾನದಲ್ಲಿ ಅಲ್ಲ, ಕಾಶ್ಮೀರದಲ್ಲಿ. ಕಾಶ್ಮೀರ ಭಾರತದ ಭಾಗವಾಗಿದೆ. ಆದ್ದರಿಂದ ಮೋದಿ ಸರಕಾರ ನಡೆಸಿದ ಕಾರ್ಯಾಚರಣೆ ಭಾರತದ ನೆಲದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳ ವಿರುದ್ಧವಾಗಿದೆ. ಇದನ್ನು 'ವೈರಿಗಳ ನೆಲೆಗೇ ನುಗ್ಗಿ ಹೊಡೆಯುತ್ತೇವೆ' ಎಂಬ ಹೇಳಿಕೆಗೆ ಹೋಲಿಸುವುದು ಸರಿಯಲ್ಲ" ಎಂದು ಫೇಸ್‌ಬುಕ್‌ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪವಾರ್ ಹೇಳಿದ್ದಾರೆ. ಜನತೆಗೆ ನಿಯಂತ್ರಣಾ ರೇಖೆ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ ಅವರು ಪಾಕ್ ವಿರುದ್ಧವೇ ದಾಳಿ ನಡೆದಿದೆ ಎಂದು ತಿಳಿದುಕೊಳ್ಳುತ್ತಾರೆ ಎಂದರು.

ದೇಶದಲ್ಲಿ ಸಾಂಸ್ಕೃತಿಕ ಕೋಮುವಾದಕ್ಕೆ ಉತ್ತೇಜನ ದೊರಕಿದ್ದು ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಿದೆ. ಒಂದು ಸಮುದಾಯ ಇನ್ನೊಂದರ ವಿರುದ್ಧ ನಿಂತಿರುವುದು ದೇಶದ ಸಾಮಾಜಿಕ ಸಾಮರಸ್ಯಕ್ಕೆ ಅಪಾಯಕಾರಿಯಾಗಿದೆ. ದೇಶದಲ್ಲಿ ಹಿಂದುಗಳ ಬಳಿಕ ಮುಸ್ಲಿಮರು ಅತೀ ದೊಡ್ಡ ಸಮುದಾಯವಾಗಿದ್ದಾರೆ ಎಂದು ಪವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News