ರಾಜಕೀಯವಾಗಿ ಉತ್ತರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ: ಸುಮಲತಾಗೆ ಜೆಡಿಎಸ್ ವಕ್ತಾರ ರಮೇಶ್‌ ಬಾಬು ತಿರುಗೇಟು

Update: 2019-06-09 15:27 GMT

ಬೆಂಗಳೂರು, ಜೂ. 9: ಬಿಜೆಪಿ ಮತ್ತು ರಾಜಕೀಯ ನೆಲೆಗಾಗಿ ಪರಿತಪಿಸುತ್ತಿರುವ ಕೆಲ ನಾಯಕರನ್ನು ಮೆಚ್ಚಿಸಲು ಜೆಡಿಎಸ್ ಮತ್ತು ನಮ್ಮ ಪಕ್ಷದ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದರೆ ಅದಕ್ಕೆ ರಾಜಕೀಯವಾಗಿ ಉತ್ತರಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು, ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ 7ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ, 1 ಕ್ಷೇತ್ರದಲ್ಲಿ ಜಯಗಳಿಸಿದೆ. 6 ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದು ಪರಾಮರ್ಶೆ ಮೂಲಕ ಮತ್ತೆ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ. ಗೆಲುವಿಗೆ ಒಂದು ಕಾರಣವಾದರೆ ಸೋಲಿಗೆ ನೂರಾರು ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ಸೋಲು-ಗೆಲುವುವನ್ನು ಸಮಾನವಾಗಿ ಸ್ವೀಕರಿಸುತ್ತದೆ. ಹೋರಾಟವನ್ನೆ ಬದುಕನ್ನಾಗಿ ಸ್ವೀಕರಿಸಿರುವ ದೇವೇಗೌಡ ಮತ್ತು ಕುಮಾರಸ್ವಾಮಿ ನಾಯಕತ್ವದಲ್ಲಿ ಪುಟಿದೇಳುವ ಆತ್ಮವಿಶ್ವಾಸ ಪ್ರತಿ ಕಾರ್ಯಕರ್ತರಲ್ಲಿ ತುಂಬಿದೆ. ಒಂದು ಕ್ಷೇತ್ರದ ಹಿನ್ನೆಡೆಗೆ ಪರಿತಪಿಸುವ ಅಥವಾ ಹೋರಾಟದಿಂದ ಹಿಂದೆ ಹೋಗುವ ಜಾಯಮಾನ ನಮ್ಮ ಪಕ್ಷದಲ್ಲ. ದಾರಿಯಲ್ಲಿ ಎಡವಿದ ಮಾತ್ರಕ್ಕೆ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಎಚ್ಚರಿಸಿದ್ದಾರೆ.

ಸಂಸದೆ ಸುಮಲತಾ ಇತ್ತೀಚೆಗೆ ನೀಡಿರುವ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಪುಕ್ಕಟೆ ಸಲಹೆಗಳನ್ನು ನೀಡುವುದರ ಜೊತೆಗೆ ಜೆಡಿಸ್ ಪಕ್ಷವನ್ನು ಟೀಕಿಸಿದ್ದಾರೆ. ಹಿಂದೆ ಅಂಬರೀಶ್ ಅವರು ಸೋಲು ಕಂಡಿದ್ದಾರೆ. ಇವರ ಸಲಹೆ ಪಡೆದುಕೊಂಡಿದ್ದರೆ ಪಾಪ ಅವರು ಸೋಲುತ್ತಲೇ ಇರಲಿಲ್ಲ. ಸಲಹೆ ಕೊಡಲು ಇವರಿಗೆ ಸಮಯ ಇರಲ್ಲಿಲ್ಲವೋ ಅಥವಾ ಅಂಬರೀಶ್‌ಗೆ ಇವರ ಮೇಲೆ ವಿಶ್ವಾಸ ಇರಲಿಲ್ಲವೋ ಎಂಬುದನ್ನ ಅವರೇ ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಜನತಂತ್ರದಲ್ಲಿ ಒಬ್ಬ ಚುನಾಯಿತ ಪ್ರತಿನಿಧಿ ತನ್ನ ಮತದಾರರೊಂದಿಗೆ ಅನೇಕ ರೀತಿಯ ಸಂವಾದ ಮಾಡುತ್ತಾನೆ. ಸಚಿವ ಡಿ.ಸಿ.ತಮ್ಮಣ್ಣ ತಮ್ಮ ಕ್ಷೇತ್ರದ ಜನರೊಂದಿಗೆ ಹಂಚಿಕೊಂಡ ಭಾವನೆಗಳಿಗೆ ಸಂಸದೆ ಸುಮಲತಾ ದರ್ಪದ ಟೀಕೆ ಮಾಡುವದರ ಜೊತೆಗೆ ರಾಜಿನಾಮೆ ಕೇಳಿದ್ದಾರೆ. ಮಂಡ್ಯದ ಸಂಸದರಾಗಿ ಆಯ್ಕೆ ಆದ ಎರಡೆ ವಾರದಲ್ಲಿ ತಮ್ಮ ಆದ್ಯತೆಗಳನ್ನು ಬದಲಾಯಿಸಿ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ಮುಂದಾಗಿದ್ದಾರೆಂದು ಟೀಕಿಸಿದ್ದಾರೆ.

ಮಂಡ್ಯ ಕ್ಷೇತ್ರದ ಸೋಲನ್ನು ನಾವು ಗೌರವದಿಂದ ಒಪ್ಪಿಕೊಂಡಿದ್ದೇವೆ. ಅದೇ ಸಮಯದಲ್ಲಿ ನಮ್ಮ ಪಕ್ಷದ ಶಾಸಕರ ಜವಾಬ್ದಾರಿಯೂ ಗೊತ್ತಿದೆ. ರಾಜಕಾರಣ ನಮಗೆ ಫ್ಯಾಷನ್ ಅಲ್ಲ. ಸಂವಾದದ ಮೂಲಕ ಜನರ ನಾಡಿ ಮಿಡಿತ ಅರಿಯುವುದು ಶಾಸಕರ ಕೆಲಸ. ಅದಕ್ಕೆ ಯಾರ ಅಪ್ಪಣೆಯೂ ಅನುಮೋದನೆಯೂ ಬೇಕಿಲ್ಲ ಎಂದು ರಮೇಶ್ ಬಾಬು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸುಮಲತಾ ಅವರು ಒಬ್ಬ ಸಂಸದೆಯಾಗಿ ಸರಕಾರಗಳ ಸಹಕಾರ ಪಡೆದು ಮಂಡ್ಯ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಪೂರಕವಾಗಿ ಅಭಿವೃದ್ಧಿಯ ಕೆಲಸ ಮಾಡಲಿ. ಒಂದು ರಾಜಕೀಯ ಪಕ್ಷವಾಗಿ ನಮ್ಮ ಸಹಕಾರವಿರುತ್ತದೆ’

-ರಮೇಶ್ ಬಾಬು, ಜೆಡಿಎಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News