ಜಿಂದಾಲ್ ಸಂಸ್ಥೆಗೆ ಕಿಕ್ ಬ್ಯಾಕ್ ಹೋಗಿರುವುದಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯ: ಯಡಿಯೂರಪ್ಪ

Update: 2019-06-09 15:34 GMT

ಯಾದಗಿರಿ, ಜೂ.9: ಜಿಂದಾಲ್ ಸಂಸ್ಥೆಗೆ 3666 ಎಕರೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಒಂದು ಎಕರೆಗೆ ಕೇವಲ 1.25 ಲಕ್ಷ ರೂ., ನಿಗದಿ ಮಾಡಲಾಗಿದ್ದು, ಈ ಸಂಸ್ಥೆಗೆ ಕಿಕ್ ಬ್ಯಾಕ್ ಹೋಗಿರುವುದಕ್ಕೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಿದೆ ಎಂದು ಹೇಳಿದರು.

ಜಿಂದಾಲ್ ಸಂಸ್ಥೆಗೆ 3666 ಎಕರೆ ಭೂಮಿ ಪರಭಾರೆ ಮಾಡಲು ಒಪ್ಪಿಗೆ ನೀಡಿರುವ ಸರಕಾರದ ನಿರ್ಧಾರದಲ್ಲಿ ಹಲವಾರು ಅನುಮಾನಗಳು ಕಾಡುತ್ತಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವರು ಸಚಿವರಿಗೆ ಕಿಕ್ ಬ್ಯಾಕ್ ಹೋಗಿರುವ ಸಾಧ್ಯತೆಗಳಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ಕ್ರಮವನ್ನು ಸರಕಾರದಲ್ಲಿರುವ ಸಚಿವರು, ಹಿರಿಯ ನಾಯಕರು, ಮಾಜಿ ಸಚಿವರು ವಿರೋಧ ಮಾಡಿದ್ದಾರೆ. ಆದರೂ, ಮುಖ್ಯಮಂತ್ರಿ ಇದ್ಯಾವುದನ್ನು ಪರಿಗಣಿಸದೆ ಭೂಮಿ ಪರಭಾರೆಗೆ ಮುಂದಾಗಿದ್ದಾರೆ ಎಂದು ಅವರು ದೂರಿದರು.

ರಾಜ್ಯದ ಜನತೆಯ ಪಾಲಿಗೆ ಈ ಸರಕಾರವು ಇದ್ದರೂ ಸತ್ತಂತೆ ಆಗಿದೆ. ಯಾವ ಈ ಸರಕಾರ ತೊಲಗುತ್ತದೆ ಎಂದು ಜನ ಎದುರು ನೋಡುತ್ತಿದ್ದಾರೆ. ಅಂಗವಿಕಲರು, ವೃದ್ಧರು, ವಿಧವೆಯರಿಗೆ ಕಳೆದ ಆರು ತಿಂಗಳಿನಿಂದ ಸರಿಯಾಗಿ ಪಿಂಚಣಿ ಹಣ ಬಿಡುಗಡೆ ಮಾಡಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿಯಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಜನರು ಕಟ್ಟಿರುವ ತೆರಿಗೆ ಹಣವನ್ನು ಸರಕಾರ ಈ ರೀತಿ ಪೋಲು ಮಾಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕಾರ್ಮಿಕರಿಗೆ ಕೂಲಿ ಹಣವನ್ನು ನಿಯಮಿತವಾಗಿ ಪಾವತಿಸುತ್ತಿಲ್ಲ ಎಂದು ಯಡಿಯೂರಪ್ಪ ದೂರಿದರು.

ಬರ ಪರಿಸ್ಥಿತಿಯನ್ನು ಎದುರಿಸುವಲ್ಲಿ ವಿಫಲವಾಗಿರುವ ಹಾಗೂ ರಾಜ್ಯದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಸರಕಾರದ ವಿರುದ್ಧ ಇನ್ನೆರಡು ಮೂರು ದಿನಗಳಲ್ಲಿ ವಿಧಾನಸೌಧದ ಎದುರು ಬಿಜೆಪಿ ಶಾಸಕರು, ಸಂಸದರೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಲು ಮುಂದಾಗಿರುವ ಗ್ರಾಮ ವಾಸ್ತವ್ಯ ಒಂದು ಗಿಮಿಕ್. ಗ್ರಾಮ ವಾಸ್ತವ್ಯದ ಬದಲು ಅಧಿಕಾರಿಗಳ ಕಿವಿ ಹಿಂಡಿ ಗ್ರಾಮೀಣ ಪ್ರದೇಶದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಿ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News