ಕಾಶ್ಮೀರ: ಪೆಲೆಟ್ ಗುಂಡಿಗೆ ಬಲಿಯಾಗುತ್ತಿರುವ ಬಿಹಾರಿ ವಲಸೆ ಕಾರ್ಮಿಕರು

Update: 2019-06-09 15:48 GMT
ಚಿತ್ರಕೃಪೆ: thewire

ಶ್ರೀನಗರ, ಜೂ. 9: ಕಾಶ್ಮೀರದಲ್ಲಿ ಪೊಲೀಸರು ಪ್ರತಿಭಟನಕಾರ ಮೇಲೆ ಪೆಲೆಟ್ ಗುಂಡು ಪ್ರಯೋಗಿಸಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಕಣ್ಣು ಕಳೆದುಕೊಂಡಿದ್ದಾರೆ. ಈಗ ಸೇನಾ ಪಡೆಯ ಪೆಲೆಟ್ ಗುಂಡು ಬಿಹಾರದ ಯುವ ವಲಸೆ ಕಾರ್ಮಿಕರ ಭರವಸೆಗಳನ್ನು ಭಗ್ನಗೊಳಿಸುತ್ತಿದೆ.

    ಬಿಹಾರದಿಂದ ಇಲ್ಲಿಗೆ ಕಾರ್ಮಿಕನಾಗಿ ಆಗಮಿಸಿದ ಮುಹಮ್ಮದ್ ಷಹನ್‌ಬಾಝ್ ಕೂಡ ಸೇನೆಯ ಪೆಲೆಟ್ ಗುಂಡಿಗೆ ಕಣ್ಣು ಕಳೆದುಕೊಂಡಿದ್ದಾನೆ. 17 ವರ್ಷದ ಷಹನ್‌ಬಾಝ್ ಕಳೆದ ವಾರ ದಕ್ಷಿಣ ಕಾಶ್ಮೀರದಲ್ಲಿ ಸರಕಾರಿ ವಿರೋಧಿ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆ ನಡುವೆ ನಡೆದ ಘರ್ಷಣೆಯ ವೇಳೆ ಸಿಲುಕಿಕೊಂಡಿದ್ದ. ಈ ಸಂದರ್ಭ ಪೆಲೆಟ್ ಗುಂಡು ತಗಲಿ ಆತನ ಕಣ್ಣು ಘಾಸಿಗೊಂಡಿದೆ.

  ಎರಡೂ ಕಣ್ಣುಗಳ ಒಳಗೆ ಲೋಹದ ಗುಂಡುಗಳು ತೂರಿಕೊಂಡ ಪರಿಣಾಮ ಕಣ್ಣಿಗೆ ಹಾನಿ ಉಂಟಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಷಹನ್‌ಬಾಝ್ ತನ್ನ ಗ್ರಾಮದಿಂದ ಈ ತಿಂಗಳ ಆರಂಭದಲ್ಲಿ ಇತರ ಮೂವರೊಂದಿಗೆ ಇಲ್ಲಿಗೆ ಆಗಮಿಸಿದ್ದ. ನಾಲ್ವರು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬೆಲ್ಲೋವ್ ಗ್ರಾಮದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸಿಸುತ್ತಿದ್ದರು.

 ಇನ್ನೋರ್ವ ಬಿಹಾರಿ ಆಲಮ್ ಮೇ 24ರಂದು ಶುಕ್ರವಾರದ ಪ್ರಾರ್ಥನೆ ಮುಗಿಸಿ ಪಡಿತರ ಖರೀದಿಸಿ ಕೊಠಡಿಗೆ ಹಿಂದಿರುಗುತ್ತಿದ್ದ. ಈ ಸಂದರ್ಭ ಅನ್ಸಾರ್ ಘಝ್ವತುಲ್ ಹಿಂದ್ ಉಗ್ರ ಸಂಘಟನೆಯ ಕಮಾಂಡರ್ ಝಾಕಿರ್ ಮೂಸಾನನ್ನು ಹತ್ಯೆಗೈದಿರುವುದಕ್ಕೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಸೇನೆ ಪ್ರಯೋಗಿಸಿದ ಪೆಲೆಟ್ ಗುಂಡು ಆಲಂನ ಮುಖದೊಳಗೆ ತೂರಿತ್ತು. ‘‘ನನಗೆ ಭಯವಾಯಿತು. ಬಾಡಿಗೆ ಕೊಠಡಿಗೆ ಹಿಂದಿರುಗಲು ನಾನು ಬಯಸಿದ್ದೆ. ಪರಿಸ್ಥಿತಿ ತಿಳಿಗೊಂಡಾಗ ಮುಖ್ಯ ರಸ್ತೆಗೆ ಇಳಿದೆ. ಈ ಸಂದರ್ಭ ಪೊಲೀಸರು ಹಾರಿಸಿದ ಪೆಲೆಟ್ ಗುಂಡು ನನ್ನ ಮುಖದೊಳಗೆ ತೂರಿದ್ದವು’’ ಎಂದು ಆಲಮ್ ಹೇಳಿದ್ದಾನೆ.

ಹಿಜ್ಬುಲ್ ಮುಜಾಹಿದ್ದೀನ್ ನ ಬುರ್ಹಾನ್ ವಾನಿ ಹತನಾದ ಬಳಿಕ ಆಕ್ರೋಶಿತರಾದ ಕಾಶ್ಮೀರ ಜನರು 2016ರಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಿದ್ದರು. ಅನಂತರ ಪ್ರತಿಭಟನಕಾರರನ್ನು ನಿಯಂತ್ರಿಸಲು ಸೇನೆ ಪೆಲೆಟ್ ಗುಂಡುಗಳನ್ನು ವ್ಯಾಪಕವಾಗಿ ಬಳಸಲು ಆರಂಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News