ಬಿಹಾರದ ಹೊರಗೆ ಜೆಡಿಯು ಎನ್‌ಡಿಎಯ ಭಾಗವಲ್ಲ:ನಿತೀಶ್ ಕುಮಾರ್

Update: 2019-06-09 15:54 GMT

ಪಾಟ್ನಾ,ಜೂ.9: ಬಿಹಾರದ ಹೊರಗೆ ಬಿಜೆಪಿ ನೇತೃತ್ವದ ಎನ್‌ಡಿಎದ ಭಾಗವಾಗದಿರಲು ಜೆಡಿಯು ರವಿವಾರ ನಿರ್ಧರಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ನಡೆದ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವು ಮುಂಬರುವ ಜಮ್ಮು-ಕಾಶ್ಮೀರ,ಜಾರ್ಖಂಡ್,ಹರ್ಯಾಣಾ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲೂ ನಿರ್ಧರಿಸಿದೆ.

ಜೆಡಿಯು ಬಿಹಾರದ ಹೊರಗೆ ಎನ್‌ಡಿಎಯ ಭಾಗವಾಗಿರುವುದಿಲ್ಲ,ಆದರೆ 2020ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿಯ ಮೈತ್ರಿಯೊಂದಿಗೆ ಎದುರಿಸಲಿದೆ ಎಂದು ನಿತೀಶ್ ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಸಚಿವ ಸ್ಥಾನಗಳನ್ನು ನಾವು ನಿರಾಕರಿಸಿದ್ದೇವೆ ಮತ್ತು ಅವುಗಳಿಗಾಗಿ ಯಾವುದೇ ಹೆಸರುಗಳನ್ನು ಮುಂದಿಟ್ಟಿಲ್ಲ. ಈ ಸಂಬಂಧ ಅಮಿತ್ ಶಾ ಅವರು ನಿತೀಶ್ ಅವರಿಗೆ ಹಲವಾರು ಬಾರಿ ಕರೆಗಳನ್ನು ಮಾಡಿದ್ದರು ಮತ್ತು ಪ್ರತಿ ಬಾರಿಯೂ ಮುಖ್ಯಮಂತ್ರಿಗಳು ನಕಾರ ಸೂಚಿಸಿದ್ದಾರೆ ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

 ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನೂತನ ಎನ್‌ಡಿಎ ಸಂಪುಟದಲ್ಲಿ ಏಕೈಕ ಸಚಿವ ಸ್ಥಾನದ ಕೊಡುಗೆಯನ್ನು ಮುಂದಿಟ್ಟಾಗಿನಿಂದ ಬಿಜೆಪಿ ಮತ್ತು ಜೆಡಿಯು ನಡುವೆ ತಲೆದೋರಿರುವ ಉದ್ವಿಗ್ನತೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇತ್ತೀಚಿಗೆ ಅಂತ್ಯಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು 16 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News