ಕೋಲಾರ: ನಗರಸಭೆ, ಜಿಲ್ಲಾಡಳಿತದಿಂದ ನೀರಿನ ಸಮಸ್ಯೆಯ ನಿರ್ಲಕ್ಷ್ಯ ಆರೋಪ; ಜೂ.12ಕ್ಕೆ ರಸ್ತೆ ತಡೆ

Update: 2019-06-09 18:09 GMT

ಕೋಲಾರ, ಜೂ.9: ನೀರಿನ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಜಯನಗರದ 14ನೇ ವಾರ್ಡಿನ ನಾಗರಿಕರು ಜೂ.12ರ ಬುಧವಾರ ಬೆಳಗ್ಗೆ 10 ಗಂಟೆಗೆ ಟೇಕಲ್ ರಸ್ತೆಯ ಸಫಲಮ್ಮ ದೇವಾಲಯದ ಮುಂದೆ ರಸ್ತೆ ತಡೆ ನಡೆಸಲು ತೀರ್ಮಾನಿಸಿದ್ದಾರೆ.

ರವಿವಾರ ಬೆಳಗ್ಗೆ ಸಫಲಮ್ಮ ದೇವಾಲಯದ ಆವರಣದಲ್ಲಿ ಕರೆಯಲಾಗಿದ್ದ ಈ ಭಾಗದ ನಾಗರಿಕರ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ತೀವ್ರ ಹೋರಾಟ ನಡೆಸಲು ಒಮ್ಮತದ ನಿರ್ಣಯ ಅಂಗೀಕರಿಸಿದರು. ನಾಗರಿರೀಕ ಸಮಿತಿ ಅಧ್ಯಕ್ಷ ಎನ್.ಗೋವಿಂದಪ್ಪ, ಕಾರ್ಯದರ್ಶಿ ಪ್ರಮೋದ್ ಕುಮಾರ್ ಮಾತನಾಡಿ, ಈ ಭಾಗದ ಜನತೆ ಸತತ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ, ನಲ್ಲಿಗಳ ಮೂಲಕ ನೀರು ಬರುವುದಿಲ್ಲ, ಟ್ಯಾಂಕರ್ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿದರು. ಈಗಾಗಲೇ ನಾಲ್ಕಾರು ಬಾರಿ ನಗರಸಭೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಪಂಪ್‍ ಮೋಟಾರ್ ನೀಡದೇ ನಿರ್ಲಕ್ಷ್ಯ
ನಿಕಟಪೂರ್ವ ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ, ನಮ್ಮ ವಾರ್ಡಿಗೆ ನೀರು ಸರಬರಾಜು ಮಾಡುವ ಕೊಳವೆ ಬಾವಿಗಳ ಪಂಪ್ ಮೋಟಾರ್ ಕೆಟ್ಟಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ತೋರಲಾಗಿದೆ, ನಮ್ಮ ಅಧಿಕಾರ ಹೋಗಿ ಆಡಳಿತಾಧಿಕಾರಿ ನೇಮಕವಾದ ನಂತರ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದರು.

ಕೊಳವೆ ಬಾವಿಗಳಲ್ಲಿ ನೀರಿದ್ದರೂ, ನೀರು ಸರಬರಾಜು ಆಗುತ್ತಿಲ್ಲ, ಪಂಪ್‍ಹೌಸ್ ನಿರ್ವಹಣೆಗೆ ಓರ್ವ ನಿರ್ವಾಹಕನ ನೇಮಕಕ್ಕೆ ಡಿಸಿಯವರಲ್ಲಿ ಆಗ್ರಹಿಸಿದ್ದು, ಈಗ ಕೇವಲ ಬೆಳಗ್ಗಿನ ಹೊತ್ತು ಮಾತ್ರ ಸಿಬ್ಬಂದಿ ನೇಮಕ ಮಾಡಿದ್ದಾರೆ. ರಾತ್ರಿ ಹೊತ್ತು ನೀರೇತ್ತಲು ಸಾಧ್ಯವಾಗುತ್ತಿಲ್ಲ ಎಂದರು.

ಜನತೆಯೂ ನೀರಿನ ಮಿತ ಬಳಕೆ ಮತ್ತು ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಲು ಕ್ರಮವಹಿಸಬೇಕು, ನೀರಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.

ಈ ಭಾಗದ ಮುಖಂಡರಾದ ಗಿರೀಶ್, ಶ್ರೀನಿವಾಸ್, ಮಾರ್ಕೋಂಡಪ್ಪ, ಶಿವಣ್ಣ, ಶ್ರೀರಾಮಪ್ಪ ಮತ್ತಿತರರು, ಈ ಭಾಗದ ಜನತೆ ಸಮರ್ಪಕವಾಗಿ ನಗರಸಭೆಗೆ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ಪಾವತಿಸುವ ನಮಗೆ ಇಂತಹ ಅನ್ಯಾಯ ಸರಿಯೇ ಎಂದು ಪ್ರಶ್ನಿಸಿದರು.

ನಗರಸಭೆ ಅಧಿಕಾರಿಗಳ ಈ ಧೋರಣೆಯಿಂದಾಗಿ ಖಾಸಗಿ ಟ್ಯಾಂಕರ್ ಗಳನ್ನೇ ಅವಲಂಬಿಸಬೇಕಾಗಿದ್ದು, ಸಮಸ್ಯೆ ನಿವಾರಣೆಯಾಗುವವರೆಗೂ ಉಗ್ರ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಿ ಎಂದು ಆಗ್ರಹಿಸಿದರು. ಸೇರಿದ್ದ ನೂರಾರು ಮಂದಿ ನಾಗರಿಕರು, ಮಹಿಳೆಯರು ಜೂ.12 ರ ಬುಧವಾರ ಸಫಲಮ್ಮ ದೇವಾಲಯದ ಮುಂದೆ ಟೇಕಲ್ ರಸ್ತೆ ಬಂದ್ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡೋಣ, ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳಿಸೋಣ ಎಂದು ಒಮ್ಮತದ ತೀರ್ಮಾನ ಕೈಗೊಂಡರು.

ಸಭೆಯಲ್ಲಿ ಮುಖಂಡರಾದ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀರಾಮಪ್ಪ, ಎಸ್.ಮನೋರವಿಕುಮಾರ್, ಮಂಜುನಾಥರೆಡ್ಡಿ, ನಾಗರಾಜ್, ವೆಂಕಟಕೃಷ್ಣ, ಕೃಷ್ಣೇಗೌಡ, ಪರಮೇಶ್, ರಾಜಗೋಪಾಲ್, ಶ್ರೀನಿವಾಸ್, ಗಿರೀಶ್, ವೆಂಕಟೇಶಪ್ಪ, ಶಿವಣ್ಣ,ಮಂಜುನಾಥ್ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News