ರಾಜ್ಯ ಸರ್ಕಾರ ಕನ್ನಡ ಭಾಷೆಯನ್ನು ಹೊಸಕಿ ಹಾಕುತ್ತಿದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-06-09 18:21 GMT

ಮೈಸೂರು,ಜೂ.9: ಕನ್ನಡ ನೆಲ, ಜಲ, ಭಾಷೆ ಬಗ್ಗೆ ಗೌರವ ತೋರಿಸಬೇಕಾದ ರಾಜ್ಯ ಸರ್ಕಾರವೇ ಇಂಗ್ಲೀಷ್ ಶಾಲೆಗಳನ್ನು ಪ್ರಾರಂಭ ಮಾಡುವ ಮೂಲಕ ಕನ್ನಡ ಭಾಷೆಯನ್ನು ಹೊಸಕಿ ಹಾಕುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ರವಿವಾರ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ವಿಭಾಗದ ವತಿಯಿಂದ 2018-19 ರ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಬಗ್ಗೆ ಗೌರ ತೋರಿಸಿ ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾದ ಸರ್ಕಾರವೇ ಇಂಗ್ಲೀಷ್ ಶಾಲೆ ಪ್ರಾರಂಭ ಮಾಡುತ್ತಿದೆ. ಪ್ರಾಥಮಿಕ ಶಾಲೆಯಿಂದಲೆ ರಾಜ್ಯ ಸರ್ಕಾರ ಒಂದು ಸಾವಿರ ಇಂಗ್ಲೀಷ್ ಶಾಲೆ ತೆರೆಯುವುದರಿಂದ ಪರೋಕ್ಷವಾಗಿ ಕನ್ನಡ ಭಾಷೆ ಹಿಂದಕೆಕ ತಳ್ಳಲ್ಪಡುತ್ತಿದೆ. ಈ ಬೆಳವಣಿಗೆಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕನ್ನಡ ಶಾಲೆಗಳೇ ಮುಚ್ಚಿಹೋಗಲಿದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದಂತೆ ಹಿಂದಿ ಹೇರಿಕೆಗೆ ಮುಂದಾಗಿದೆ. ಆದರೆ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತ್ರಿಭಾಷಾ ಸೂತ್ರ ವಿರುದ್ಧ ತಿರುಗಿ ಬಿದ್ದ ಪರಿಣಾಮ ಕೇಂದ್ರ ಸರ್ಕಾರ ಹೇರಿಕೆ ಶಬ್ದವನ್ನು ಮಾತ್ರ ತೆಗೆಯಲು ಮುಂದಾಗಿದೆ ಅಷ್ಟೆ. ಆದರೆ ಮುಂದೊಂದು ದಿನ ಹಿಂದಿ ಹೇರಿಕೆ ಮಾಡಿಯೇ ತೀರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ತಾ.ಪಂ.ಅಧ್ಯಕ್ಷೆ ಕಾಳಮ್ಮ ಕೆಂಪೀರಯ್ಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News