ಕಾರ್ನಾಡರ ಬದುಕು ಲೇಖಕರಿಗೆ, ಕಲಾವಿದರಿಗೆ ಮಾದರಿ

Update: 2019-06-10 17:42 GMT

ಬೆಂಗಳೂರು, ಜೂ.10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಲ್ಲಿ ಪ್ರತಿಭಟನಾಕಾರ, ತನ್ನ ದಿನನಿತ್ಯದ ಆಗುಹೋಗುಗಳನ್ನು ಮಾನವೀಯ ನೆಲೆಯಲ್ಲಿ ಚಿಂತಿಸುವ ಚಿಕಿತ್ಸಕನನ್ನು ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೆ ಜೋಪಾನವಾಗಿ ಕಾಯ್ದಿಟ್ಟುಕೊಂಡು ಕಲಾವಿದ, ಲೇಖಕನೋರ್ವ ಹೇಗಿರಬೇಕೆಂಬುದನ್ನು ಬದುಕಿ ತೋರಿಸಿ ಹೋಗಿದ್ದಾರೆ.

ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹಿಂದೂ ಕೋಮುವಾದಿಗಳ ಕೈಯಲ್ಲಿ ಹತ್ಯೆಯಾದ ಒಂದು ವರ್ಷದ ಸ್ಮರಣೆಗಾಗಿ ಸೆ.5, 2018ರಲ್ಲಿ ಗೌರಿ ಲಂಕೇಶ್ ಬಳಗ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಅಭಿವ್ಯಕ್ತಿ ಸ್ವಾತಂತ್ರದ ಹತ್ಯೆ ವಿರೋಧಿ ಸಮಾವೇಶದಲ್ಲಿ ಗಿರೀಶ್ ಕಾರ್ನಾಡ್ ತನ್ನ ಕುತ್ತಿಗೆಗೆ ನಾನು ಅರ್ಬನ್ ನಕ್ಸಲ್ ಎಂಬ ನಾಪಫಲಕ ಹಾಕಿಕೊಂಡು ವೇದಿಕೆ ಮೊದಲ ಸಾಲಿನಲ್ಲಿ ಕುಳಿತು, ಮೂಲಭೂತ ವ್ಯವಸ್ಥೆಗೆ ಸಡ್ಡು ಹೊಡೆದಿದ್ದರು.

ಆ ದಿನಗಳಲ್ಲಿಯೆ ಗಿರೀಶ್ ಕಾರ್ನಾಡ್‌ರಿಗೆ ಸಲೀಸಾಗಿ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಮೂಗಿಗೆ ಕೃತಕ ಉಸಿರಾಟದ ಪೈಪನ್ನು ಅಳವಡಿಸಿಕೊಂಡು ಅಭಿವ್ಯಕ್ತಿ ಸಮಾವೇಶದಲ್ಲಿ ಭಾಗವಹಿಸಿ, ತಮ್ಮ ನಿಲುವನ್ನು, ಚಿಂತನೆಯನ್ನು ಧೈರ್ಯವಾಗಿ ಸಾರಿದ್ದರು. ಇದನ್ನು ಕನ್ನಡ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳು ವಿವಾದಕ್ಕೆ ಈಡು ಮಾಡಿದರೂ ಯಾರಿಗೂ ಅಂಜದೆ ತನ್ನ ನಿಲುವಿಗೆ ಕಟ್ಟಿಬದ್ಧರಾಗಿದ್ದರು.

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ದಲಿತ, ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳು ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಗಿರೀಶ್ ಕಾರ್ನಾಡ್ ಭಾಗವಹಿಸಿ, ನನ್ನ ಆಹಾರ, ನನ್ನ ಹಕ್ಕು ಎಂಬುದನ್ನು ಘೋಷಣೆ ಮಾಡುವ ಮೂಲಕ ಸರಕಾರಗಳ ನಿಲುವನ್ನು ಪ್ರಬಲವಾಗಿ ಖಂಡಿಸಿದ್ದರು. ಹೀಗೆ ದೇಶದ ಯಾವುದೆ ಮೂಲೆಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ಕೂಡಲೆ ಸ್ಪಂದಿಸುತ್ತಿದ್ದವರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು.

ಪ್ರಭುತ್ವಗಳ ನೀತಿ ನಿಯಮಗಳಲ್ಲಿರುವ ಲೋಪಗಳು, ಧರ್ಮದ, ಸಂಸ್ಕೃತಿಯ, ಆಚಾರ, ವಿಚಾರಗಳ ಹೆಸರಿನಲ್ಲಿ ನಡೆಯುವ ವೌಢ್ಯಗಳು, ಜನಾಂಗೀಯ ದ್ವೇಷಕ್ಕೆ ಪರ್ಯಾಯವಾಗಿ ತಮ್ಮ ನಾಟಕಗಳ ಮೂಲಕ ಹೊಸ ಚಿಂತನೆಗಳನ್ನು ಕಲಾವಿದರ ಮೂಲಕ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾದವರು.

ಭಾರತದ ಮೊದಲ ಸ್ವಾತಂತ್ರ ಹೋರಾಟಗಾರ, ಜನಸ್ನೇಹಿ ರಾಜನೆಂದು ಜನಪದರ ಹಾಡುಗಳಲ್ಲಿ ಜನಜನಿತನಾಗಿರುವ ಟಿಪ್ಪು ಸುಲ್ತಾನ್ ಕುರಿತು ಸಂಘಪರಿವಾರ ಹಿಂದೂಗಳಲ್ಲಿ ದ್ವೇಷ ಭಾವನೆ ಹುಟ್ಟುಹಾಕುವ ಪ್ರಯತ್ನದಲ್ಲಿರುವಾಗ ಗಿರೀಶ್ ಕಾರ್ನಾಡ್ ‘ಟಿಪ್ಪು ಸುಲ್ತಾನ್ ಕಂಡ ಕನಸು’ ಎಂಬ ನಾಟಕವನ್ನು ರಚಿಸುವ ಮೂಲಕ ಟಿಪ್ಪು ಸುಲ್ತಾನ್‌ನ ನಿಜವಾದ ಬದುಕನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರ ಮತ್ತೊಂದು ಮಹತ್ವದ ‘ತಲೆದಂಡ’ ನಾಟಕದಲ್ಲಿ ಶರಣ ಚಳವಳಿ, ಹನ್ನೆರಡನೆಯ ಶತಮಾನ ಅತ್ಯಂತ ಪ್ರಗತಿಪರವಾದ ಮಾನವೀಯ ಆಂದೋಲನದ ನಾಯಕನಾದ ಬಸವಣ್ಣನ ಸೋಲು, ಗೆಲುವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಟಕ ರೂಪಕ್ಕೆ ಇಳಿಸಿದ್ದಾರೆ. ಹೀಗೆ ಅವರ ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಅಗ್ನಿ ಮತ್ತು ಮಳೆ ಸೇರಿದಂತೆ ಹತ್ತಾರು ನಾಟಕಗಳು ಜನರ ಆಲೋಚನೆಯ ಮಟ್ಟವನ್ನು ಮನವೀಯ ನೆಲೆಯಲ್ಲಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗಿರೀಶ್ ಕಾರ್ನಾಡರು ಪ್ರಾಚೀನ ಕಾಲದ ವಸ್ತುವಿಷಯಗಳನ್ನೆ ತೆಗೆದುಕೊಂಡು ನಾಟಕದಲ್ಲಿ ಆಧುನಿಕ ಸ್ಪರ್ಶ ನೀಡುವ ಮೂಲಕ ಭೂತ, ವರ್ತಮಾನ ಹಾಗೂ ಭವಿಷ್ಯಗಳ ನಡುವೆ ಸಂಪರ್ಕ ಕಲ್ಪಿಸಿ, ನಾಟಕವನ್ನು ಓದುವವರಲ್ಲಿ ಹಾಗೂ ನೋಡುವವರಲ್ಲಿ ವೈಚಾರಿಕೆ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - -ಮಂಜುನಾಥ ದಾಸನಪುರ

contributor

Editor - -ಮಂಜುನಾಥ ದಾಸನಪುರ

contributor

Similar News