ತುಮಕೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಒತ್ತಾಯಿಸಿ ರಸ್ತೆ ತಡೆ

Update: 2019-06-10 18:46 GMT

ತುಮಕೂರು,ಜೂ.10: ರೈತ ವಿರೋಧಿ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರಕಾರ ಕೂಡಲೇ ಹಿಂಬಪಡೆಯಬೇಕು, ಸರಕಾರಿ ಉಪಯೋಗಕ್ಕೆ ರೈತರ ಭೂಮಿ ಪಡೆಯುವಾಗ ಬಾಡಿಗೆ ರೂಪದಲ್ಲಿ ಪಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಹೆದ್ದಾರಿ ತಡೆ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ರಾಜ್ಯ ಸರಕಾರ 2013 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು, ಸರಕಾರದ ಯೋಜನೆಗಳಿಗೆ ಭೂಮಿ ಪಡೆಯುವಾಗ ರೈತರ ಅನುಮತಿ ಪಡೆಯುವುದು ಕಡ್ಡಾಯವಲ್ಲ ಎಂದು ಕಾನೂನು ರೂಪಿಸಿದೆ. ಇದು ರೈತರಿಗೆ ಮರಣ ಶಾಸನವಾಗಿದ್ದು, ಕೂಡಲೇ ಈ ತಿದ್ದುಪಡಿ ಅಂಶವನ್ನು ಕೈಬಿಟ್ಟು ಈ ಹಿಂದಿನಂತೆ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಹೆದ್ದಾರಿ ತಡೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದ ಜಾಸ್‍ಟೋಲ್ ಬಳಿ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆ ತಡೆದ ರೈತರು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

ನಗರದ ಜಾಸ್‍ಟೋಲ್ ಬಳಿ ಸಮಾವೇಶಗೊಂಡ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಹೆದ್ದಾರಿ ತಡೆದು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕೂಡಲೇ ರಾಜ್ಯ ಸರಕಾರ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್, ರಾಜ್ಯ ಸರಕಾರ 2013ರಲ್ಲಿ ಕೇಂದ್ರ ಸರಕಾರ ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ, ಮಣ್ಣಿನ ಮಕ್ಕಳೆಂದು ಹೇಳುವ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಯಮಿಗಳ ಪರವಾದ ನಿಲುವುಗಳನ್ನು ತಾಳಿ, ಹಲವು ಮಾರ್ಪಾಡುಗಳನ್ನು ಮಾಡಿದ್ದಾರೆ. ಇದರಿಂದ ಸಣ್ಣ ಸಣ್ಣ ಹಿಡುವಳಿದಾರರು ಇರುವ ಭೂಮಿ ಕಳೆದುಕೊಂಡು ಬೀದಿಪಾಲಾಗುವ ಸ್ಥಿತಿ ಬಂದಿದೆ. ರೈತವಿರೋಧಿ ಧೋರಣೆಗಳನ್ನು ತಾಳಿ ಸಿದ್ದರಾಮಯ್ಯ ಸರಕಾರ ಅನುಭವಿಸಿದ ಹಿನ್ನೆಡೆಯನ್ನೇ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರಕಾರವೂ ಇದೇ ಸ್ಥಿತಿ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ರೈತರ ಹೋರಾಟವನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ದೇಶಕ್ಕೆ ಅನ್ನ, ಹಾಲು ನೀಡುವ ರೈತರ ವಿರುದ್ದ ಸರಕಾರಗಳು, ಅಭಿವೃದ್ದಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಬೀದಿಗೆ ತಳ್ಳುತ್ತಿದೆ. ವೈಜ್ಞಾನಿಕ ಪರಿಹಾರ ನೀಡದೆ ಇಡಿಗಂಟಿನ ರೂಪದಲ್ಲಿ ಬಿಡಿಗಾಸು ನೀಡಿ ಅಪಮಾನ ಮಾಡುತ್ತಿದೆ. ಈ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲದು ಎಂದು ಆನಂದ್ ಪಟೇಲ್ ತಿಳಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ರಾಜ್ಯ ಸರಕಾರ ಭೂ ಮಾಲಕರು ಮತ್ತು ಉದ್ದಿಮೆದಾರರ ನಡುವಿನ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ರಿಯಲ್‍ ಎಸ್ಟೇಟ್ ಉದ್ಯಮಿಗಳಿಗೆ ನೀಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದು ಖಂಡನೀಯ. ಇದರ ವಿರುದ್ಧ ಇಂದು ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಧನಂಜಯ ಆರಾಧ್ಯ, ಕೊರಟಗೆರೆ ತಾಲ್ಲಕು ಅಧ್ಯಕ್ಷರಾದ ಕೋಡಿಹಳ್ಳಿ ಸಿದ್ದರಾಜು, ತುರುವೇಕೆರೆ ತಾಲೂಕು ಅಧ್ಯಕ್ಷ ಹಳೆಸಂಪಿಗೆ ಕೀರ್ತಿ, ಪ್ರಸನ್ನ, ಲಕ್ಕಣ್ಣ, ಬೆಟ್ಟೇ ಗೌಡ, ವೆಂಕಟೇಶ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. 45 ನಿಮಿಷಗಳಿಗೂ ಹೆಚ್ಚು ಕಾಲ ಹೆದ್ದಾರಿ ತಡೆದ ರೈತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News