ಎಲ್‍ಬಿಎಸ್ ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ: ಡಿಡಿಪಿಯು ದೇವರಾಜ್

Update: 2019-06-11 18:32 GMT

ಚಿಕ್ಕಮಗಳೂರು, ಜೂ.11: ನಗರದ ಬೇಲೂರು ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡಗಳ ನಿರ್ಮಾಣಕ್ಕೆ 93 ಲಕ್ಷ ರೂ. ಅನುದಾನ ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆಯಾಗಿದ್ದು, ಕಟ್ಟಡ ದುರಸ್ತಿ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ದೇವರಾಜ್ ತಿಳಿಸಿದ್ದಾರೆ.

ಮಂಗಳವಾರ ಡಿಡಿಪಿಯು ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪೈಕಿ ಲಾಲಾ ಬಹದ್ದೂರ್ ಶಾಸ್ತ್ರಿ ಪದವಿ ಪೂರ್ವ ಕಾಲೇಜು ಕಟ್ಟಡ ಅತ್ಯಂತ ಶಿಥಿಲಾವಸ್ಥೆಯ ಹಂತದಲ್ಲಿದ್ದು, ಕಾಲೇಜಿನ ಪ್ರಯೋಗಾಲಯ, ಕಾಲೇಜು ಕಟ್ಟಡ, ಶೌಚಾಲಯ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಕಟ್ಟಡ ಮೇಲ್ಛಾವಣಿ ಗಾರೆ ಉದುರುತ್ತಿದ್ದು, ವಿದ್ಯಾರ್ಥಿಗಳಿಗೆ ಕೊಠಡಿಯಲ್ಲಿ ಕುಳಿತು ಪಾಠ ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಕಾಲೇಜು ಆವರಣದಲ್ಲಿ 6 ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಸೇರಿದಂತೆ 1 ಪ್ರಯೋಗಾಲಯ ಹಾಗೂ 2 ಶೌಚಾಲಯ ನಿರ್ಮಾಣಕ್ಕೆ ಪದವಿ ಪೂರ್ಣ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಕಟ್ಟಡದ ಅವ್ಯವಸ್ಥೆಯಿಂದಾಗಿ ಈ ಬಾರಿ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸುಸಜ್ಜಿತ ಕಟ್ಟಡಗಳ ಶೀಘ್ರ ನಿರ್ಮಾಣ ಹಾಗೂ ಕಾಲೇಜಿನ ಉಳಿವಿಗಾಗಿ ಶೀಘ್ರ ಅನುದಾನ ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ ಎಂದರು.

ನಗರದ ಬೇಲೂರು ರಸ್ತೆಯಲ್ಲಿರುವ ಜೂನಿಯರ್ ಕಾಲೇಜು ಆವರಣದಲ್ಲಿ ಹೊಸ ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಈ ಹಿಂದೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇಲಾಖೆ ವತಿಯಿಂದ 93 ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದ್ದು, ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲದೇ ಹಳೇ ಕಟ್ಟಡದ ದುರಸ್ತಿಗಾಗಿ 10 ಲಕ್ಷ ರೂ. ಪ್ರತ್ಯೇಕ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿಗಳು ನಡೆಯುತ್ತಿವೆ ಎಂದ ಅವರು, ಜೂನಿಯರ್ ಕಾಲೇಜಿನಲ್ಲಿ ಈ ಬಾರಿ ಪ್ರಥಮ ಪಿಯುಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಒಟ್ಟಾರೆ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಲಾ ವಿಭಾಗಕ್ಕಿಂತ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಾಖಲಾತಿ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದರು.

ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಜಿಲ್ಲಾದ್ಯಂತ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಫಲಿತಾಂಶ ಹೆಚ್ಚಳಕ್ಕೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪರಿಣಾಮ ಎಂಬಂತೆ ಈ ಬಾರಿ ಜಿಲ್ಲೆ ಉತ್ತಮ ಫಲಿತಾಂಶ ಗಳಿಸುವಲ್ಲಿ ಸಾಧ್ಯವಾಗಿದೆ ಎಂದ ಅವರು, ಗ್ರಾಮೀಣ ಭಾಗಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಸರಕಾರಿ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಫಲಿತಾಂಶವೂ ಹೆಚ್ಚಲಿದೆ. ಈ ಬಾರಿಯೂ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿಡಿಪಿಯು ದೇವರಾಜ್ ತಿಳಿಸಿದರು.

ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆರ್‍ಐಡಿಎಫ್-25ರ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಮತ್ತು ಶೌಚಾಲಯಗಳು ಆವಶ್ಯಕವಾಗಿರುವ ಕಾಲೇಜುಗಳ ಪಟ್ಟಿ ಸಲ್ಲಿಸುವಂತೆ ವರದಿ ಕೇಳಿದ್ದು, ಇದರಂತೆ ಜಿಲ್ಲೆಯಲ್ಲಿ ಹೊಸದಾಗಿ ಮಂಜೂರಾಗಿರುವ ತರೀಕೆರೆ ತಾಲೂಕಿನ ಕುಂಟಿನಮಡು ಗ್ರಾಮದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ 6 ಕೊಠಡಿಗಳು ಹಾಗೂ 2 ಶಾಚಾಲಯಗಳ ನಿರ್ಮಾಣ ಹಾಗೂ ತರೀಕೆರೆ ತಾಲೂಕಿನ ರಂಗೇನಹಳ್ಳಿಗೆ ಮಂಜೂರಾಗಿರುವ ಹೊಸ ಸರಕಾರಿ ಪದವಿ ಪೂವ್ ಕಾಲೇಜಿಗೆ 6 ಕೊಠಡಿ ಹಾಗೂ 2 ಶೌಚಾಲಯಗಳ ನಿರ್ಮಾಣ ಕಾಮಗಾರಿ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದ ಅವರು, ಉಳಿದಂತೆ ಚಿಕ್ಕಮಗಳೂರು ನಗರದ ಎಲ್‍ಬಿಎಸ್ ಕಾಲೇಜಿಗೆ 6 ಕೊಠಡಿ, 2 ಪ್ರಯೋಗಾಲಯ, 2 ಶೌಚಾಲಯ, ಮೂಗ್ತಿಹಳ್ಳಿ ಕಾಲೇಜಿಗೆ 2 ಕೊಠಡಿ, 2 ಶೌಚಾಲಯ, ಕಡೂರು ತಾಲೂಕಿನ ಸಖರಾಯಪಟ್ಟಣ ಕಾಲೇಜಿಗೆ 3 ಕೊಠಡಿ, 1 ಶೌಚಾಲಯ, ಆಲ್ದೂರು ಕಾಲೇಜಿಗೆ 4 ಕೊಠಡಿ, 2 ಶೌಚಾಲಯ, ಮಲ್ಲೇನಹಳ್ಳಿ ಕಾಲೇಜಿಗೆ 2 ಕೊಠಡಿ, 1 ಶೌಚಾಲಯ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಕಾಲೇಜಿಗೆ 2 ಕೊಠಡಿ, 2 ಪ್ರಯೋಗಾಲಯ, 2 ಶೌಚಾಲಯ, ಅಜ್ಜಂಪುರ ಕಾಜೇಜಿಗೆ 2 ಕೊಠಡಿ, 2 ಶೌಚಾಲಯಗಳ ಆವಶ್ಯಕತೆ ಇದ್ದು, ಇವುಗಳ ಪಟ್ಟಿಯನ್ನು ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ದೇವರಾಜ್ ತಿಳಿಸಿದರು.

ಲಾಲ್‍ಬಹುದ್ದೂರ್ ಶಾಸ್ತ್ರಿ ಕಾಲೇಜು ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಕಾಲೇಜು ಅವ್ಯವಸ್ಥೆ ಬಗ್ಗೆ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇಲಾಖೆ ವತಿಯಿಂದಲೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಮಂಗಳವಾರ ಕಾಲೇಜು ಕಟ್ಟಡಗಳ ಅವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಜನಪ್ರತಿನಿಧಿಗಳು ಸೂಕ್ತ ಅನುದಾನ ಬಿಡುಗಡೆಗೆ ಸರಕಾರಕ್ಕೆ ಒತ್ತಡ ಹಾಕಿರುವ ಮಾಹಿತಿ ಇದ್ದು, ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
- ದೇವರಾಜ್, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಚಿಕ್ಕಮಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News