ಕಿಸಾನ್ ಸಮ್ಮಾನ್ ಯೋಜನೆ ಧನ ಸಹಾಯ 12 ಸಾವಿರಕ್ಕೆ ಏರಿಸಿ: ಕುರುಬೂರು ಶಾಂತಕುಮಾರ್ ಆಗ್ರಹ

Update: 2019-06-11 18:47 GMT

ಮೈಸೂರು,ಜೂ.11: ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿನ ಧನ ಸಹಾಯವನ್ನು 12 ಸಾವಿರಕ್ಕೆ ಏರಿಕೆ ಮಾಡಿ, ತೆಲಂಗಾಣ ರಾಜ್ಯದ ಮಾದರಿಯಲ್ಲಿ ಅದನ್ನು ಜಾರಿಗೆ ತರಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸಿ ಆರು ಸಾವಿರ ರೂ. ಸಹಾಯಧನ ನೀಡುವ ಹಾಗೂ 60 ವರ್ಷ ತುಂಬಿದ ರೈತರಿಗೆ ಮೂರು ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಸ್ವಾಗತಾರ್ಹವಾದರೂ ಅದನ್ನು ತೆಲಂಗಾಣ ಮಾದರಿ ಅನುರಿಸಬೇಕೆಂದು ಒತ್ತಾಯಿಸಿದರು.

ಅಲ್ಲದೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ತಿದ್ದುಪಡಿ ಮಾಡಿ, ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುವಂತೆ ಜಾರಿಗೊಳಿಸಬೇಕು. ಕಬ್ಬಿನ ಎಫ್‍ಆರ್‍ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿಯನ್ನು 9.5 ಎಂದು ನಿಗದಿಗೊಳಿಸಬೇಕು. ಇದೇ ವೇಳೆ ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಿರುವುದ ರೈತ ದ್ರೋಹಿ ಕ್ರಮವಾಗಿದ್ದು, ಇದರಿಂದಾಗಿ ರೈತರ ಅನುಮತಿ ಇಲ್ಲದೇ ಸ್ವಾಧೀನ ಪಡಿಸಿಕೊಳ್ಳಬಹುದಾಗಿರುವುದು ಸರಿಯಲ್ಲ. ಆದ್ದರಿಂದ ಅದನ್ನು ಕೈಬಿಡಬೇಕೆಂದು ಕೋರಿದರು.

ಇದೇ ವೇಳೆ, ಬಜಟ್ ಪೂರ್ವಭಾವಿಯಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಕರೆದಿರುವ ರೈತ ಮುಖಂಡರ ಸಭೆಯಲ್ಲಿ ಭಾರತೀಯ ರೈತ ಸಂಘಟನೆಗಳ ವತಿಯಿಂದ ತಮ್ಮ ಪ್ರತಿನಿಧಿ ಕೂಡಾ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಅತ್ತಹಳ್ಳಿ ದೇವರಾಜ್, ಎಂ.ಬಿ. ಚೇತನ್, ವೆಂಕಟೇಶ್, ಭೂಜಂಗಪ್ಪ, ಜವರಯ್ಯ, ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News