ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ, ರಾಜ್ಯಪಾಲರಿಗೆ ದೂರು: ಬಡಗಲಪುರ ನಾಗೇಂದ್ರ

Update: 2019-06-11 18:50 GMT

ಮೈಸೂರು,ಜೂ.11: ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದು ಹಾಗೂ ವಿರೋಧ ಪಕ್ಷಗಳೂ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯದಿರುವುದರ ಬಗ್ಗೆ ರಾಜ್ಯಪಾಲರಿಗೆ ಪರಿಸ್ಥಿತಿ ವಿವರಿಸಲು ಶೀಘ್ರದಲ್ಲೇ ರಾಜ್ಯ ರೈತ ಸಂಘದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಬಹುತೇಕ ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿದ್ದರೂ, ಮಿತ್ರ ಪಕ್ಷಗಳ ಮೂಲಕ ಗೆದ್ದವರು ಕೇವಲ ಸಚಿವ ಸ್ಥಾನಕ್ಕೆ ಒತ್ತಡ, ಸಚಿವ ಸಂಪುಟ ವಿಸ್ತರಣೆಗೆ ಸರ್ಕಾರ ಕಸರತ್ತು ನಡೆಸುವುದು, ಸರ್ಕಾರ ಯಾವಾಗ ಬೀಳುತ್ತದೋ ಎಂಬುದರತ್ತ ವಿರೋಧ ಪಕ್ಷಗಳ ಗಮನಗಳ ನಡುವೆ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ವಿರೋಧ ಪಕ್ಷಗಳು ಬರ ಪರಿಸ್ಥಿತಿ ಅಧ್ಯಯನ ಮಾಡಲೆಂದು ಹೊರಟರೂ ಅದರಿಂದ ಏನೂ ಪ್ರಯೋಜನವಾಗುತ್ತಿಲ್ಲ. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲತೆ ಕುರಿತಂತೆ ಸರ್ಕಾರದ ಮೇಲೆ ಛಾಟಿ ಏಟು ಬೀಸುವಲ್ಲಿ ಅವು ಸಹಾ ನಿರ್ಲಕ್ಷ್ಯ ತಾಳಿರುವ ಹಿನ್ನೆಲೆಯಲ್ಲಿ ಈ ಎಲ್ಲವುಗಳ ಬಗೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲೆಂದು ರೈತ ಸಂಘದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ ಎಂದರು.

ಇನ್ನು, ಇದೇ ಜೂ. 13 ರಿಂದ 19 ರವರೆಗೆ ರೈತ ಸಂಘದ ಪ್ರಮುಖರ ತಂಡವೊಂದು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಅಧ್ಯಯನ ಮಾಡಿ, ಅದರತ್ತ ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ಸರ್ಕಾರ ಈ ಭಾಗದ ಸಕ್ಕರೆ ಕಾರ್ಖಾನೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಚುಂಚನಕಟ್ಟೆ, ಪಾಂಡವಪುರ ಮೊದಲಾದ ಭಾಗಗಳ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆಯೂ ಹೋರಾಟ ರೂಪಿಸಲೆಂದು ಶೀಘ್ರದಲ್ಲೇ ರೈತ ಸಂಘದ ಸಭೆ ಆಯೋಜಿಸಿ, ಪ್ರಮುಖ ನಿರ್ಧಾರ ಕೈಗೊಳ್ಳಲಾಗುವುದೆಂದರು.

ಅಲ್ಲದೆ, ಮದ್ಯದಂಗಡಿಗಳಿಂದ ತಮ್ಮ ಕುಟುಂಬ ಹಾಳಾಗುತ್ತಿದ್ದು, ಕೂಡಲೇ ಅವುಗಳನ್ನು ಮುಚ್ಚಿಸಿ ಎಂದು ರೈತ ಮಹಿಳೆಯರು ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಹುಲ್ಲಹಳ್ಳಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಪೊಲೀಸ್ ಠಾಣೆ ಮೊದಲಾದವುಗಳ ಪಕ್ಕದಲ್ಲಿಯೇ ಮದ್ಯದಂಗಡಿ ತಲೆಯೆತ್ತಿದ್ದರೂ, ಅದನ್ನು ಮುಚ್ಚಿಸಲು ಆಗ್ರಹಿಸಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News