ತೆಲುಗು ರಾಜ್ಯದ ಈ ಪಕ್ಷಕ್ಕೆ ಲೋಕಸಭೆ ಉಪಸ್ಪೀಕರ್ ಹುದ್ದೆ?

Update: 2019-06-12 03:53 GMT

ವಿಜಯವಾಡ, ಜೂ.12: ಲೋಕಸಭೆಯ ಉಪಸ್ಪೀಕರ್ ಹುದ್ದೆಯನ್ನು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ. ಬಿಜೆಪಿ ಸಂಸದ ಹಾಗೂ ವಕ್ತಾರ ಜಿವಿಎಲ್ ನರಸಿಂಹ ರಾವ್ ಮಂಗಳವಾರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್.ಜಗನ್ಮೋಹನ ರೆಡ್ಡಿಯವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಿದರು. ಪಕ್ಷದ 22 ಸಂಸದರ ಪೈಕಿ ಒಬ್ಬರಿಗೆ ಈ ಹುದ್ದೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿದೆ ಎಂದು ಭೇಟಿ ವೇಳೆ ಸ್ಪಷ್ಟಪಡಿಸಿದರು ಎಂದು ತಿಳಿದುಬಂದಿದೆ.

ಆದರೆ ಈ ಆಫರ್ ಬಗ್ಗೆ ವೈಎಸ್‌ಆರ್ ಕಾಂಗ್ರೆಸ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಜಗನ್ ಸಮಯಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಹಾಗೂ ಕ್ರೈಸ್ತ ಮತದಾರರು ದೊಡ್ಡ ಸಂಖ್ಯೆಯಲ್ಲಿ ಪಕ್ಷವನ್ನು ಬೆಂಬಲಿಸಿದ್ದು, ವೈಎಸ್‌ಆರ್ ಕಾಂಗ್ರೆಸ್ ಕೈಗೊಳ್ಳುವ ನಿರ್ಧಾರ ಸಂಕೀರ್ಣ ರಾಜಕೀಯ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ಪಕ್ಷ ಸಾಧಕ- ಬಾಧಕಗಳ ಬಗ್ಗೆ ಚಿಂತನೆ ನಡೆಸಿದೆ.

ಜಗನ್ ಹಾಗೂ ನರಸಿಂಹ ರಾವ್ ನಡುವಿನ ಭಟಿ ಸುಮಾರು ಅರ್ಧ ಗಂಟೆ ನಡೆಯಿತು. ಇದು ಸೌಜನ್ಯದ ಭೇಟಿ ಎಂದು ಬಿಂಬಿಸಲಾಗಿದ್ದರೂ, ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆಫರ್ ಬಗ್ಗೆ ನರಸಿಂಹರಾವ್ ಅವರು ಜಗನ್ ಜತೆ ಚರ್ಚಿಸಿದರು ಎಂಬ ಅಂಶ ದೃಢಪಟ್ಟಿದೆ.

ಲೋಕಸಭೆ ಅಧಿವೇಶನ ಜೂನ್ 17ಕ್ಕೆ ನಿಗದಿಯಾಗಿದ್ದು, ಸದಸ್ಯರ ಪ್ರಮಾಣವಚನದ ಬಳಿಕ ಸ್ಪೀಕರ್ ಆಯ್ಕೆನಡೆಯುತ್ತದೆ. ಜಗನ್ ಜೂನ್ 15ರಂದು ರಾಜಧಾನಿಗೆ ಭೇಟಿ ನೀಡಿ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವರು. ಆಗ ಮೋದಿಯವರನ್ನು ಭೇಟಿ ಮಾಡುವ ಜಗನ್, ಅದಕ್ಕೂ ಮೊದಲು ಬಿಜೆಪಿ ಆಫರ್ ಸ್ವೀಕರಿಸುವ ಬಗ್ಗೆ ಪಕ್ಷದ ಹಿರಿಯ ಮುಖಂಡರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News