ಇಂದು ಆಸ್ಟ್ರೇಲಿಯ - ಪಾಕಿಸ್ತಾನ ಮುಖಾಮುಖಿ

Update: 2019-06-12 05:17 GMT

ಟೌಂಟನ್, ಜೂ.11:ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಬುಧವಾರ ನಡೆಯಲಿರುವ ವಿಶ್ವಕಪ್‌ನ ಹದಿನೇಳನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಉಭಯ ತಂಡಗಳು ಮೂರು ಪಂದ್ಯಗಳನ್ನು ಆಡಿವೆ. ಆಸ್ಟ್ರೇಲಿಯ ಆಡಿರುವ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಜಯ ಗಳಿಸಿದೆ, ಆದರೆ ಭಾರತ ವಿರುದ್ಧ ಕಳೆದ ಪಂದ್ಯದಲ್ಲಿ 36 ರನ್‌ಗಳ ಸೋಲು ಅನುಭವಿಸಿದೆ.

ಪಾಕಿಸ್ತಾನ ಆಡಿರುವ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ 14 ರನ್‌ಗಳ ಜಯ ಗಳಿಸಿದೆ. ವಿಂಡೀಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದು, ಶ್ರೀಲಂಕಾ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

 ಆಸ್ಟ್ರೇಲಿಯ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದೆ. 1999ರ ಬಳಿಕ ಮೊದಲ ಬಾರಿ ಗೆಲುವಿನ ಸವಾಲನ್ನು ಬೆನ್ನಟ್ಟಲಾಗದೆ ಸೋಲು ಅನುಭವಿಸಿರುವ ಆಸೀಸ್ ಮತ್ತೆ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.

    ಭಾರತದ ವಿರುದ್ಧ ಆಸ್ಟ್ರೇಲಿಯದ ಬೌಲಿಂಗ್ ಸೊರಗಿತ್ತು. ಭಾರತದ ದಾಂಡಿಗರು ಲೀಲಾಜಾಲವಾಗಿ ಬ್ಯಾಟ್ ಬೀಸಿ ದ್ದರು. ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 352 ರನ್‌ಗಳನ್ನು ಕಲೆ ಹಾಕಿತ್ತು. ಆಸೀಸ್ 353 ರನ್‌ಗಳ ಗೆಲುವಿನ ಸವಾಲನ್ನು ಬೆನ್ನಟ್ಟುವಲ್ಲಿ ಪ್ರಯತ್ನ ನಡೆಸಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ತಂಡದ ಪ್ರಮುಖ ದಾಂಡಿಗರು ಔಟಾಗಿ ಬ್ಯಾಟಿಂಗ್ ಸೊರಗಿರುವುದು ಸೋಲಿಗೆ ಕಾರಣವಾಗಿತ್ತು. ಮಾಜಿ ನಾಯಕ ಸ್ಟೀವನ್ ಸ್ಮಿತ್ (70 ಎಸೆತಗಳಲ್ಲಿ 69 ರನ್) ಮತ್ತು ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ (84 ಎಸೆತಗಳಲ್ಲಿ 56 ರನ್) ಅರ್ಧಶತಕಗಳ ಕೊಡುಗೆ ನೀಡಿದ್ದರೂ ಇದಕ್ಕಾಗಿ ಹೆಚ್ಚು ಎಸೆತಗಳನ್ನು ಎದುರಿಸಿದ್ದರು. ಅಲೆಕ್ಸ್ ಕ್ಯಾರಿ (35 ಎಸೆತಗಳಲ್ಲಿ 55 ರನ್) ಮಾತ್ರ ಭಾರತದ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ಉಪಯುಕ್ತ ಕೊಡುಗೆ ನೀಡಿದ್ದರು.

  ಯುಎಇಯಲ್ಲಿ ಎರಡು ತಿಂಗಳ ಹಿಂದೆ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ 5-0 ಕ್ಲೀನ್ ಸ್ವೀಪ್ ಸಾಧಿಸಿತ್ತು. ಪಾಕಿಸ್ತಾನ ಈ ಕಾರಣದಿಂದಾಗಿ ಆಸ್ಟ್ರೇಲಿಯವನ್ನು ಎದುರಿಸಲು ತಯಾರಿ ನಡೆಸಿದೆ. ಪಾಕಿಸ್ತಾನದ ಸಾಮರ್ಥ್ಯ ನಿಗೂಢವಾಗಿದೆ. ಅದು ಸೋತರೂ ಗೆಲುವಿನ ಹಳಿಗೆ ಮರಳಿದೆ. ಲಂಕಾ ವಿರುದ್ಧ ಗೆಲುವಿನ ಅವಕಾಶವಿದ್ದರೂ ಪಂದ್ಯ ಮಳೆಗೆ ಕೊಚ್ಚಿ ಹೋಗಿದೆ. ಸೆಮಿಫೆೈನಲ್ ಅವಕಾಶವನ್ನು ಜೀವಂತವಾಗಿರಿಸಲು ಉಳಿದ ಪಂದ್ಯಗಳಲ್ಲಿ ಚೆನ್ನಾಗಿ ಆಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News