ರಾಜಕಾರಣ ಮಲಿನವಾಗಿದೆ: ಹೆಚ್.ವಿಶ್ವನಾಥ್ ವಿಷಾದ

Update: 2019-06-12 12:17 GMT

ಮಡಿಕೇರಿ, ಜೂ.12: ರಾಜ್ಯ ರಾಜಕಾರಣ ಮಲಿನವಾಗಿದ್ದು, ಇದರ ಶುದ್ಧೀಕರಣವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ನಾನೀಗ ಜೆಡಿಎಸ್‍ನ ಸಾಮಾನ್ಯ ಕಾರ್ಯಕರ್ತನಷ್ಟೇ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವ ಮಾತೇ ಇಲ್ಲ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನನ್ನ ನಿರ್ಧಾರ ಅಚಲವೆಂದು ತಿಳಿಸಿದರು. 

ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇನೆಯೇ ಹೊರತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನ್ನ ರಾಜೀನಾಮೆ ಅಂಗೀಕರಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ. ಅವರು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತಿದ್ದಾರೆ. ನಾನು ರಾಜೀನಾಮೆ ಅಂಗೀಕರಿಸುವಂತೆ ಮನವೊಲಿಸುತ್ತಿದ್ದೇನೆ. ಕ್ಷೇತ್ರದ ಶಾಸಕನಾಗಿ ಮತ್ತು ಸಮ್ಮಿಶ್ರದ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾನ ಮನಸ್ಕರು ಒಗ್ಗೂಡಿ ರಾಜಕೀಯ ಅವಲೋಕನ ಮಾಡುವುದಾಗಿ ಹೇಳಿದರು.

ನಾನು ಜೆಡಿಎಸ್ ನ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದತ್ತಣ್ಣ ಹಾಗೂ ಮಧು ಬಂಗಾರಪ್ಪ ಸಮರ್ಥರಿದ್ದಾರೆ ಎಂದರು.

ದಲಿತರಿಗೆ ಸಚಿವ ಸ್ಥಾನ
ಜೆಡಿಎಸ್ ಕೋಟಾದಲ್ಲಿ ಎರಡು ಸಚಿವ ಸ್ಥಾನ ಖಾಲಿಯಿದ್ದು, ಅದರಲ್ಲಿ ಒಂದನ್ನು ದಲಿತರಿಗೆ, ಮತ್ತೊಂದನ್ನು ಅಲ್ಪಸಂಖ್ಯಾತರಿಗೆ ನೀಡುವಂತೆ ಒತ್ತಾಯಿಸಿರುವುದಾಗಿ ವಿಶ್ವನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News