ಜಯಪುರ: ಶಾಸನಯುಕ್ತ ವಾಮನ ಶಿಲೆ ಪತ್ತೆ

Update: 2019-06-12 12:24 GMT

ಜಯಪುರ, ಜೂ.12: ಶಾಸನಯುಕ್ತ ವಾಮನಮೂರ್ತಿಯ ಕಲ್ಲು ಜಯಪುರ ಸಮೀಪದ ಲೋಕನಾಥಪುರ ಗ್ರಾಮ ಹೂಗೆಬೈಲು - ಹೆದ್ದೆಸೆಗೆ ಹೋಗುವ ದಾರಿಯ ಪಕ್ಕ ಟಿ.ಕೆ. ಪ್ರಭಾಕರ್ ರವರ ಜಾಗದಲ್ಲಿ ಪತ್ತೆಯಾಗಿದೆ ಎಂದು ಶಿಕ್ಷಕ ಕಲ್ಕೆರೆ ನ.ಸುರೇಶ್ ತಿಳಿಸಿದ್ದಾರೆ. 

65 ಸೆಂ.ಮೀ. ಎತ್ತರ 45 ಸೆಂ.ಮೀ. ಅಗಲವಿರುವ ಈ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಉಬ್ಬು ಶಿಲ್ಪ, ಅದರ ಕೆಳಭಾಗದಲ್ಲಿ ಕೃಷ್ಣರಾಜ ಒಡೆಯ ಧರ್ಮ ಎಂದು ದೇವನಾಗರಿ ಲಿಪಿಯಲ್ಲಿ ಅಕ್ಷರಗಳನ್ನು ಕೆತ್ತಲ್ಪಟ್ಟಿದೆ. ಕೆಳಭಾಗದಲ್ಲಿ ಬಲಗೈಯಲ್ಲಿ ಕಮಂಡ ಹಿಡಿದಿರುವ, ಎಡಗೈಯಲ್ಲಿ ಛತ್ರಿ ಹಿಡಿದಿರುವ ವಾಮನಮೂರ್ತಿಯ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ.

ಈ ಶಾಸಯುಕ್ತ ವಾಮನಮೂರ್ತಿಯ ಕಲ್ಲು ಹೆದ್ದಸೆ ಶಿವಪಂಚಾಯತನ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದೆ. ಶಿವಪಂಚಾಯತನ ದೇವಸ್ಥಾನಕ್ಕೆ ಹೆದ್ದೆಸೆಯ ತಿಮ್ಮಯ್ಯನ ಕೋರಿಕೆ ಮೇರೆಗೆ ಮೈಸೂರಿನ ಕೃಷ್ಣರಾಜ ಒಡೆಯರ್ ಕ್ರಿ.ಶ. 1809ರಲ್ಲಿ ದೇವಸ್ಥಾನ ಐದು ದೇವರುಗಳ ಪೂಜಾ-ವ್ಯವಸ್ಥೆಗಾಗಿ ಸೀತಾನದಿಯ ಎಡದಂಡೆಯ ಲೋಕನಾಥಪುರ ಮತ್ತು ಇನ್ನೂ ಕೆಲವು ಪ್ರದೇಶಗಳ ಜಮೀನನ್ನು ದತ್ತು ನೀಡುತ್ತಾರೆ. ಈ ರೀತಿ ನೀಡಿದ ಜಮೀನಿನ ಗುರುತಿಗಾಗಿ ಶಾಸನಯುಕ್ತ ವಾಮನ ಮುದ್ರೆಯ ಅಡಿಕಲ್ಲನ್ನು ನಡೆಸುತ್ತಾರೆ ಎಂದು ನ.ಸುರೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News