‘ಚಂದ್ರಯಾನ-2’ ಇಸ್ರೋ ಇತಿಹಾಸದಲ್ಲೇ ಹೊಸ ಮೈಲಿಗಲ್ಲು: ಇಸ್ರೋ ಅಧ್ಯಕ್ಷ ಕೆ.ಶಿವನ್

Update: 2019-06-12 15:22 GMT

ಬೆಂಗಳೂರು, ಜೂ.12: ಬಹುನಿರೀಕ್ಷಿತ ‘ಚಂದ್ರಯಾನ-2’ ಜುಲೈ 15ರ ನಸುಕಿನ 2.51 ನಿಮಿಷಕ್ಕೆ ಶ್ರೀಹರಿ ಕೋಟಾದಿಂದ ಉಡಾವಣೆಗೊಳ್ಳಲಿದ್ದು, ಇಸ್ರೋದ ಇತಿಹಾಸದಲ್ಲೇ ಇದು ಹೊಸ ಮೈಲಿಗಲ್ಲು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹರ್ಷ ವ್ಯಕ್ತಪಡಿಸಿದರು.

ಬುಧವಾರ ನಗರದ ಇಸ್ರೋ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್ ‘ಚಂದ್ರಯಾನ -2’ರ ಪರಿಕರಗಳನ್ನು ಹೊತ್ತೊಯ್ಯಲಿದೆ. ಸೆಪ್ಟೆಂಬರ್ 6 ಅಥವಾ 7ರಂದು ಜಿಎಸ್‌ಎಲ್‌ವಿ ರಾಕೆಟ್ ಚಂದ್ರನ ಮೇಲ್ಮೈ ತಲುಪಲಿದೆ. ರೋವರ್(ವಿಕ್ರಂ), ಲ್ಯಾಂಡರ್(ಪ್ರಜ್ಞಂ) ಮತ್ತು ಆರ್ಬಿಟರ್ ಸಹಿತ 3.8 ಟನ್ ತೂಕದ ಮೂರು ಸಾಮಗ್ರಿಗಳನ್ನು ರಾಕೆಟ್ ಹೊತ್ತೊಯ್ಯಲಿದೆ ಎಂದು ಶಿವನ್ ವಿವರಿಸಿದರು.

ಸೆ.6ರಂದು ವಾಹನ ಚಂದ್ರನ ಮೇಲೆ ಇಳಿಯಲಿದೆ. ಚಂದ್ರನ ಕಕ್ಷೆಯ 100 ಕಿ.ಮೀ. ಅಂತರದಲ್ಲಿ ಆರ್ಬಿಟರ್ ಸುತ್ತಲು ಆರಂಭಿಸುತ್ತದೆ. ನಂತರ ಲ್ಯಾಂಡರ್ (ವಿಕ್ರಂ) ಚಂದ್ರನ ಮೇಲೆ ಪರಿಕರಗಳನ್ನು ಇಳಿಸಲಿದೆ. ನಂತರ ರೋವರ್ (ಪ್ರಜ್ಞಂ) ವಿವಿಧ ಪ್ರಯೋಗಗಳನ್ನು ಆರಂಭಿಸಲಿದೆ. ಚಂದ್ರನ ಅಂಗಳವನ್ನು ತಲುಪಲು ಚಂದ್ರಯಾನ-1ರ ಉಡ್ಡಯನದ ವೇಳೆ ಅನುಸರಿಸಿದ ಕಾರ್ಯತಂತ್ರವನ್ನೇ ಈ ಬಾರಿಯೂ ಅನುಸರಿಸಲಾಗುವುದು. ಆದರೆ ಸುಗಮ ಇಳಿಯುವಿಕೆ (ಸಾಫ್ಟ್ ಲ್ಯಾಂಡಿಂಗ್) ಸವಾಲು ಮಾತ್ರ ಸಂಪೂರ್ಣ ಹೊಸದು ಎಂದು ತಿಳಿಸಿದರು.

ದಿಕ್ಸೂಚಿಗಾಗಿ ವಿದೇಶಿ ಸೇವೆ ಬಳಕೆಯ ಶುಲ್ಕ ಸೇರಿದಂತೆ ಯೋಜನೆಯ ಒಟ್ಟು ವೆಚ್ಚ 603 ಕೋಟಿ ರೂ.ಗಳಾಗಿದ್ದು, ಉಡ್ಡಯನಕ್ಕೆ 375 ಕೋಟಿ ರೂ. ವೆಚ್ಚವಾಗುತ್ತದೆ. ಚಂದ್ರಯಾನ-2 ನಿರ್ಮಾಣದಲ್ಲಿ ಇಸ್ರೋ ಉದ್ಯಮ ಮತ್ತು ಶೈಕ್ಷಣಿಕ ವಲಯದ ತಜ್ಞರನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದರು.

ಕಕ್ಷೆಗಾಮಿಯಲ್ಲಿ ಅಳವಡಿಸಲಾದ ಪ್ರೊಪಲ್ಷನ್ ವ್ಯವಸ್ಥೆಗಳನ್ನು ಬಳಸಿ ಕಕ್ಷೆ ಎತ್ತರಿಸುವ ಮತ್ತು ಪಥ ಬದಲಿಸುವ ಕಾರ್ಯಾಚರಣೆ ಮಾಡಲಾಗುವುದು. ಸಂಕೀರ್ಣ ನಿರ್ಮಾಣದ ಚಂದ್ರಯಾನ-2 ವನ್ನು ಚಂದ್ರನ ಸಮೀಪಕ್ಕೆ ತಲುಪಿಸಲು ಈ ಸಂಚಾಲನ ವ್ಯವಸ್ಥೆಯನ್ನು ಬಳಸಲಾಗುವುದು. ಆ ಬಳಿಕ ಬಾಹ್ಯಾಕಾಶ ನೌಕೆ 3.5 ಲಕ್ಷ ಕಿ.ಮೀ ದೂರ ಕ್ರಮಿಸಲಿದ್ದು, ಐದು ದಿನಗಳ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ಹೇಳಿದರು.

x  ಚಂದ್ರನ ಸಮೀಪ ತಲುಪಿದ ಬಳಿಕ ಕಕ್ಷೆಗಾಮಿಯಲ್ಲಿರುವ ಸಂಚಾಲನ ವ್ಯವಸ್ಥೆ (ಪ್ರೊಪಲ್ಷನ್ ಸಿಸ್ಟಂ) ಬಳಸಿ ಕಕ್ಷೆಗಾಮಿಯನ್ನು ನಿಖರ ಕಕ್ಷೆಯಲ್ಲಿ ಇರಿಸಲಾಗುವುದು. ಬಳಿಕ ಲ್ಯಾಂಡರ್ ಕಕ್ಷೆಗಾಮಿಯಿಂದ ಬೇರ್ಪಡುತ್ತದೆ. ಅದು ನಾಲ್ಕು ದಿನಗಳ ಕಾಲ ಕಕ್ಷೆಯಲ್ಲೇ ಸುತ್ತಿದ ಬಳಿಕ 100 ಕಿ.ಮೀ 30 ಕಿ.ಮೀ ಕಕ್ಷೆ ತಲುಪಲಿದೆ. ಆ ಕಕ್ಷೆ ತಲುಪಿದ ಬಳಿಕ ಚಂದ್ರನಿಂದ 30 ಕಿ.ಮೀ ದೂರದಲ್ಲಿರುವಾಗ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲಾಗುವುದು. ಅಂತಿಮ ಅವತರಣ (ಇಳಿಕೆ) 15 ನಿಮಿಷಗಳದ್ದಾಗಿದ್ದು, ಅತ್ಯಂತ ಕ್ಲಿಷ್ಟಕರವಾಗಿರುತ್ತದೆ ಎಂದು ವಿವರಣೆ ನೀಡಿದರು.

ಸಪ್ಟೆಂಬರ್ 6 ಅಥವಾ 7ರಂದು ಲ್ಯಾಂಡರ್ ಚಂದ್ರನ ನೆಲದ ಮೇಲೆ ಇಳಿಯಲಿದೆ. ಅಂದಿನಿಂದ ಚಂದ್ರನ ದಿನ ಆರಂಭವಾಗುವ ಹಿನ್ನೆಲೆಯಲ್ಲಿ ಆ ದಿನವನ್ನೇ ಆಯ್ದುಕೊಳ್ಳಲಾಗಿದೆ. ಲ್ಯಾಂಡರ್ ಮತ್ತು ರೋವರ್ ಎರಡರ ಆಯುಷ್ಯ ಕೇವಲ ಒಂದು ಚಂದ್ರ ದಿನ ಮಾತ್ರ (ಭೂಮಿಯ ಲೆಕ್ಕಾಚಾರದಲ್ಲಿ 14 ದಿನಗಳು). ಕಕ್ಷೆಗಾಮಿ ಒಂದು ವರ್ಷದವರೆಗೂ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಇರಲಿದೆ ಎಂದು ಮಾಧ್ಯಮದವರಿಗೆ ಕೂಲಂಕಷವಾಗಿ ಶಿವನ್ ಮಾಹಿತಿ ನೀಡಿದರು.

ಚಂದ್ರನ ನೆಲದಲ್ಲಿ ಓಡಾಡುವ ವಾಹನ: ಚಂದ್ರನ ಮೇಲೆ ಇಳಿದ ಬಳಿಕ ಬಾಗಿಲು ನಿಧಾನವಾಗಿ ತೆರೆದುಕೊಳ್ಳುತ್ತದೆ. ಅದೇ ವೇಳೆಗೆ ಕಕ್ಷೆಗಾಮಿ ತನ್ನ ಕಾರ್ಯ ಮುಂದುವರಿಸುತ್ತದೆ. ನಾಲ್ಕು ಗಂಟೆಗಳ ಬಳಿಕ ರೋವರ್ (ಚಂದ್ರನ ನೆಲದಲ್ಲಿ ಓಡಾಡುವ ವಾಹನ) ಬಾಗಿಲಿನಿಂದ ಹೊರಬರುತ್ತದೆ. ಇದು ಅತ್ಯಂತ ನಿಧಾನಗತಿಯ ಕಾರ್ಯಾಚರಣೆ. ಕ್ರಮೇಣ ರೋವರ್ ಚಂದ್ರನ ನೆಲದ ಮೇಲೆ ಚಲಿಸಲಾರಂಭಿಸುತ್ತದೆ. ಪ್ರತಿ ಸೆಕೆಂಡಿಗೆ 1 ಸೆಂಟಿಮೀಟರ್‌ನಷ್ಟು ವೇಗದಲ್ಲಿ ರೋವರ್ ಚಲಿಸಲಿದ್ದು, 500 ಮೀಟರ್‌ಗಳಷ್ಟು ದೂರ ಕ್ರಮಿಸಲಿದೆ ಎಂದು ಶಿವನ್ ತಿಳಿಸಿದರು.

ಜಿಎಸ್‌ಎಲ್‌ವಿ ಎಂಕೆ 3 ಹಾಗೂ ಚಂದ್ರಯಾನ-2 ನಿರ್ಮಾಣದಲ್ಲಿ ಸುಮಾರು 500 ವಿಶ್ವವಿದ್ಯಾಲಯಗಳು ಮತ್ತು 120 ಉದ್ಯಮಗಳು ಭಾಗಿಯಾಗಿವೆ. ವೆಚ್ಚದ ಶೇ.80 ಮತ್ತು ಶೇ.60ರಷ್ಟು ಇದಕ್ಕಾಗಿಯೇ ವ್ಯಯವಾಗಿದೆ.

-ಕೆ.ಶಿವನ್, ಇಸ್ರೋ ಅಧ್ಯಕ್ಷ

ಚಂದ್ರಯಾನ-2 ಅಂಕಿ-ಅಂಶ

* ಉಡಾವಣೆ- ಜುಲೈ 15

* ಲ್ಯಾಂಡಿಂಗ್- ಸೆ.6/ 7

* ಲ್ಯಾಂಡರ್ ರೋವರ್ ಆಯಸ್ಸು-14 ದಿನ

* ಆರ್ಬಿಟರ್ ಆಯಸ್ಸು-1 ವರ್ಷ

* ಚಂದ್ರಯಾನ-2 ಒಟ್ಟು ವೆಚ್ಚ-978 ಕೋಟಿ ರೂ.

* ಸ್ಯಾಟಲೈಟ್ ವೆಚ್ಚ- 603 ಕೋಟಿ ರೂ.

* ಚಂದ್ರಯಾನ ಸ್ಯಾಟಲೈಟ್ ಕೊಂಡೊಯ್ಯುವ ಜಿಎಸ್‌ಎಲ್‌ವಿ ಮಾರ್ಕ್ 3- ವೆಚ್ಚ-375 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News