ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆಗೆ ಖಂಡನೆ: ಕೋಲಾರ ರೈತ ಸಂಘದಿಂದ ಸೂಕ್ತ ಕ್ರಮಕ್ಕೆ ಮನವಿ

Update: 2019-06-12 18:56 GMT

ಕೋಲಾರ, ಜೂ.12: ಗುಂಡ್ಲು ಪೇಟೆ ತಾಲೂಕಿನಲ್ಲಿ ಪ್ರತಾಪ್ ಎಂಬ ದಲಿತ ವ್ಯಕ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಬೇಕು ಹಾಗೂ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ರೈತ ಸಂಘದಿಂದ ಉಪ ತಹಶೀಲ್ದಾರ್ ಮುಖಾಂತರ ಗೃಹ ಮಂತ್ರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇನ್ನೂ ಜಾತಿ ಪದ್ದತಿ ಜೀವಂತವಾಗಿರುವುದು ಮಾನವ ಜನ್ಮಕ್ಕೆ ನಾಚಿಕೆಗೇಡು. ಆದುನಿಕತೆ ಮುಂದುವರೆದು ಜೀವನ ಶೈಲಿ ಬದಲಾಗಿರುವ ಕಾಲದಲ್ಲಿ ಈ ರೀತಿ ಜಾತಿ ಜಾತಿಗಳ ನಡುವೆ ಸಂಘರ್ಷ ಇರುವುದು ನಂಬಲಾರದ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಬೇಕಾದ ಜನ ಪ್ರತಿನಿದಿಗಳು ಕೋಮಾ ಸ್ಥಿತಿಯಲ್ಲಿದ್ದಾರೆ. ದಲಿತ ಯುವಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಅಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಸುಜಾತ, ನಿಮ್ಮ ಈ ಮನವಿಯನ್ನು ಅತೀ ಶೀಘ್ರವಾಗಿ ಗೃಹ ಮಂತ್ರಿಗಳಿಗೆ ಕಳುಹಿಸಿ ಕೊಡುವ ಭರವಸೆ ನೀಡಿದರು.

ಈ ಸಂದರ್ಭ ಜಿಲ್ಲಾದ್ಯಕ್ಷೆ ಎ.ನಳಿನಿ, ಪುರುಷೋತ್ತಮ್, ವೆಂಕಟೇಶಪ್ಪ, ಮಂಜುನಾಥ್, ನವೀನ್, ಮಂಜು, ಪುತ್ತೇರಿ ರಾಜು ಸೇರಿ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News