ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ರಕ್ಷಣೆಗೆ ಧಾವಿಸಿದ ಮೂವರು ವಿದ್ಯುತ್ ಆಘಾತಕ್ಕೆ ಬಲಿ

Update: 2019-06-13 14:24 GMT

ಮಂಡ್ಯ, ಜೂ.13: ಅಪಘಾತಕ್ಕೀಡಾದ ಕಾರಿನ ಚಾಲಕ ಮತ್ತು ಪ್ರಯಾಣಿಕರನ್ನು ರಕ್ಷಿಸಲು ಹೋದ ಮೂವರು ಗ್ರಾಮಸ್ಥರು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿರುವ ಘಟನೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಗೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಮಣಿಗೆರೆ ಗ್ರಾಮದ ಪ್ರಸನ್ನ(50), ದೇವರಾಜು (35) ಹಾಗೂ ಪ್ರದೀಪ್ (ಪುಟ್ಟು)(25) ಮೃತಪಟ್ಟವರು. ಇದೇ ಗ್ರಾಮದ ಮಧು, ನಂದೀಶ್, ಜೀವನ್, ಅರುಣ್ ಸೇರಿದಂತೆ 8 ಮಂದಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಸ್ವಿಫ್ಟ್ ಕಾರಿನಲ್ಲಿ ಮಂಡ್ಯ ತಾಲೂಕು ಹನಕೆರೆ ಗ್ರಾಮದ ಪಾಂಡು ಮಗ ಶಶಿಕುಮಾರ್, ಚಂದ್ರಶೇಖರ್ ಮಗ ನಿತ್ಯಾನಂದ, ಮಲ್ಲೇಶ ಅವರ ಮಗ ಅಭಿಷೇಕ್ ಸೇರಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಮಳವಳ್ಳಿಯಿಂದ ಮದ್ದೂರು ಕಡೆಗೆ ಬರುತ್ತಿತ್ತು. ಕಾರಿನಲ್ಲಿದ್ದವರು ಪಾನಮತ್ತರಾಗಿದ್ದರು ಎನ್ನಲಾಗಿದೆ. ಮಾರ್ಗಮಧ್ಯೆ ಸುಮಾರು ರಾತ್ರಿ 9.45ರ ಸುಮಾರಿಗೆ ಮಣಿಗೆರೆ ಗ್ರಾಮದ ಬಳಿಯ ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಣೆಗೆ ಮುಂದಾದಾಗ ಮುರಿದು ಬಿದ್ದ ವಿದ್ಯುತ್ ಕಂಬದಲ್ಲಿದ್ದ ವಿದ್ಯುತ್ ಪ್ರವಹಿಸಿ ದೇವರಾಜು, ಪ್ರಸನ್ನ, ಪುಟ್ಟ ಸ್ಥಳದಲ್ಲೇ ಅಸುನೀಗಿದ್ದಾರೆ. 

ಅಪಘಾತದ ನಂತರ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ರಕ್ಷಣೆಗೆ ಧಾವಿಸಿ ಸಣ್ಣಪುಟ್ಟ ಗಾಯಗಳಾದವರು ಕೆ.ಎಂ.ದೊಡ್ಡಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು. 

ತಲಾ 2 ಲಕ್ಷ ರೂ. ಪರಿಹಾರ:
ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ  ಡಿವೈಎಸ್ಪಿ ಶೈಲೇಂದ್ರ, ಸೆಸ್ಕ್ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಅವರು ಸಮಾಧಾನಪಡಿಸಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. 

ಮೃತರ ಕುಟುಂಬದವರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸೆಸ್ಕ್ ಎಇಇ ರಾಜೇಂದ್ರ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ವಹಿಸುವುದಾಗಿ ಆಶ್ವಾಸನೆ ನೀಡಿದರು. ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಸಚಿವ ತಮ್ಮಣ್ಣ ಸಾಂತ್ವನ: ವಿಷಯ ತಿಳಿದು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಶಾಸಕ ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೆಸ್ಕ್ ನಿಂದ ಕೊಡಲಾಗುವ 2 ಲಕ್ಷ ರೂ.ಗಳ ಚೆಕ್‍ನ್ನು ಮೃತರ ತಾಯಂದಿರಾದ ಸರೋಜಮ್ಮ, ನಿಂಗಮ್ಮ ಹಾಗೂ ತಾಯಮ್ಮ ಅವರಿಗೆ ವಿತರಿಸಿದರು. 

ಮಗನ ಕಳೆದುಕೊಂಡು ತಬ್ಬಲಿಯಾದ ತಾಯಿ
ಭಾರತೀನಗರ:
ಸಮೀಪದ ಮಣಿಗೆರೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದು ವಿದ್ಯುತ್ ಸ್ಪರ್ಶಕ್ಕೊಳಗಾಗಿ ಮೃತಪಟ್ಟವರಲ್ಲಿ ಪ್ರದೀಪ್ (ಪುಟ್ಟು) ಅವರ ತಾಯಿ ಅಕ್ಷರಶಃ ತಬ್ಬಲಿಯಂತಾಗಿದ್ದಾರೆ. 

25 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ತಾಯಮ್ಮ ಅವರು, ಮೂರು ತಿಂಗಳ ಮಗುವಿನೊಂದಿಗೆ ಬದುಕು ಕಟ್ಟಿಕೊಂಡಿದ್ದಳು. ತನ್ನ ಆಸೆ, ಆಕಾಂಕ್ಷೆ, ಬದುಕು ಎಲ್ಲವೂ ಪ್ರದೀಪನೇ ಆಗಿದ್ದ. ಆದರೆ, ಮೊದಲೇ ಗಂಡನನ್ನ ಕಳೆದುಕೊಂಡ ತಾಯಿ ಮತ್ತೆ ಮಗನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. 

ಪ್ರದೀಪ ತನ್ನ ಮನೆಯಲ್ಲಿ ಊಟ ಮಾಡುತ್ತಿದ್ದ. ಅಷ್ಟರಲ್ಲಿ ಹೊರಗೆ ಭಾರೀ ಶಬ್ಧ ಬಂದಿತ್ತು. ಅಪಘಾತಕ್ಕೊಳಗಾದವರ ರಕ್ಷಣೆಗೆ ಅರ್ಧಕ್ಕೇ ಊಟ ಬಿಟ್ಟು ಎದ್ದು ಹೋದವ ಬಾರದ ಲೋಕಕ್ಕೆ ತೆರಳಿದ್ದ ಎಂದು ತಾಯಮ್ಮ ರೋಧಿಸಿದರು. ಸ್ಥಳದಲ್ಲೇ ಕುಸಿದುಬಿದ್ದ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News