ಶಿವಮೊಗ್ಗ: ಜಿಂದಾಲ್ ಗೆ ಜಮೀನು ಮಾರಾಟ ವಿರೋಧಿಸಿ ಬಿಜೆಪಿ ಪ್ರತಿಭಟನೆ

Update: 2019-06-13 18:10 GMT

ಶಿವಮೊಗ್ಗ, ಜೂ. 13: ಜಿಂದಾಲ್ ಕಂಪೆನಿಗೆ 3667 ಎಕರೆ ಜಮೀನು ನೀಡುವ ರಾಜ್ಯ ಸಮ್ಮಿಶ್ರ ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. 

ಜಿಂದಾಲ್ ಕಂಪೆನಿಗೆ ಭೂಮಿ ನೀಡಿಕೆಯಲ್ಲಿ ಭಾರೀ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಖಾಸಗಿ ಕಂಪೆನಿಯೊಂದಕ್ಕೆ 3667 ಎಕರೆ ಜಾಗವನ್ನು ಕೊಡುವಂತಹ ಒಂದು ಕೆಟ್ಟ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ರಾಜ್ಯದ ಸಂಪತ್ತು ರಕ್ಷಿಸಬೇಕಾದ ಕಾಂಗ್ರೆಸ್-ಜೆಡಿಎಸ್ ಸರ್ಕಾರವು, ಬೆಲೆಬಾಳುವ ಅದಿರು ಹೊಂದಿರುವ ಸಾವಿರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಪರಭಾರೆ ಮಾಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಸರ್ಕಾರದ ಸ್ವಾರ್ಥ ಹಿತಾಸಕ್ತಿಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಅತ್ಯಲ್ಪ ಬೆಲೆಗೆ ಜಮೀನು ನೀಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟು ಮಾಡಲು ಸರ್ಕಾರ ಮುಂದಾಗಿದೆ. ತಕ್ಷಣವೇ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಯಾವುದೇ ಕಾರಣಕ್ಕೂ ಖಾಸಗಿ ಕಂಪೆನಿಗೆ ಜಮೀನು ಪರಭಾರೆ ಮಾಡಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. 

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಹೃಷಿಕೇಶ, ಮಾಲತೇಶ, ಭವಾನಿರಾವ್, ವಿಶ್ವಾಸ್, ದಿನೇಶ್, ಸುನೀಲ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News