ಬ್ರಿಟಿಷರಿಗೆ ಬರೆದ ಪತ್ರದಲ್ಲಿ ‘ನಾನು ಪೋರ್ಚುಗಲ್ ಪುತ್ರ’ ಎಂದಿದ್ದ ಸಾವರ್ಕರ್

Update: 2019-06-14 14:51 GMT

 ಜೈಪುರ,ಜೂ.14: ರಾಜಸ್ಥಾನದ ಕಾಂಗ್ರೆಸ್ ಸರಕಾರವು ರಾಜ್ಯ ಶಿಕ್ಷಣ ಮಂಡಳಿ ಅಧೀನದ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ಮಾಡಿದೆ. ಫೆ.13ರಂದು ತಾನು ಸ್ಥಾಪಿಸಿದ್ದ ಪಠ್ಯಪುಸ್ತಕ ಪುನರ್‌ಪರಿಶೀಲನಾ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಹಿಂದಿನ ಎನ್‌ಡಿಎ ಸರಕಾರವು ಕೈಗೊಂಡಿದ್ದ ಹಲವಾರು ನಿರ್ಧಾರಗಳನ್ನು ಅಶೋಕ ಗೆಹ್ಲೋಟ್ ನೇತೃತ್ವದ ಸರಕಾರವು ಹಿಂದೆಗೆದುಕೊಂಡಿದೆ.

12ನೇ ತರಗತಿಯ ಚರಿತ್ರೆ ಪಠ್ಯಪುಸ್ತಕದಿಂದ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ ಸಾವರ್ಕರ್ ಹೆಸರಿನಲ್ಲಿದ್ದ ಗೌರವ ಸೂಚಕ ‘ವೀರ ’ ಪದವನ್ನು ತೆಗೆದಿರುವುದು ಪ್ರಮುಖ ಬದಲಾವಣೆಗಳಲ್ಲೊಂದಾಗಿದೆ. ಸಾವರ್ಕರ್ ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿದ್ದಾಗ ಹೇಗೆ ಬ್ರಿಟಿಷರಿಗೆ ನಾಲ್ಕು ದಯಾಭಿಕ್ಷೆ ಪತ್ರಗಳನ್ನು ಕಳುಹಿಸಿದ್ದರು ಮತ್ತು 1911,ನ.1ರಂದು ಬರೆದಿದ್ದ ತನ್ನ ಎರಡನೇ ಮನವಿಯಲ್ಲಿ ತಾನು ‘ಪೋರ್ಚುಗಲ್‌ನ ಪುತ್ರ’ ಎಂದು ಹೇಳಿಕೊಂಡಿದ್ದರು ಎನ್ನುವುದನ್ನು ಈ ಪುಸ್ತಕದಲ್ಲಿ ಬಣ್ಣಿಸಲಾಗಿದೆ.

ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದ ಸಾವರ್ಕರ್ 1942ರ ಚಲೇಜಾವ್ ಚಳವಳಿಯನ್ನು ಮತ್ತು 1946ರಲ್ಲಿ ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿದ್ದರು ಎಂದು ಪಠ್ಯಪುಸ್ತಕದಲ್ಲಿನ ಅಧ್ಯಾಯವು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ. ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ವಿಚಾರಣೆಯನ್ನು ಉಲ್ಲೇಖಿಸಲಾಗಿದೆಯಾದರೂ,ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು ಎಂದು ಹೇಳಿದೆ.

10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೇವಾಡದ ರಾಜ ಮಹಾರಾಣಾ ಪ್ರತಾಪ್ ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ ನಡುವಿನ ಹಳ್ದಿಘಾಟಿ ಯುದ್ಧದ ವರ್ಣನೆಯನ್ನು ಪರಿಷ್ಕರಿಸಲಾಗಿದೆ. ಪ್ರತಾಪ್‌ನನ್ನು ಸೆರೆ ಹಿಡಿಯಲು ಮತ್ತು ಕೊಲ್ಲುವಲ್ಲಿ ಹಾಗೂ ಆತನ ಇಡೀ ರಾಜ್ಯವನ್ನು ವಶಪಡಿಸಿಕೊಳ್ಳುವಲ್ಲಿ ಅಕ್ಬರ್ ವಿಫಲನಾಗಿದ್ದ ಎಂದು ಹಿಂದಿನ ಅಧ್ಯಾಯಲ್ಲಿ ಹೇಳಿದ್ದರೆ, ಈಗಿನ ಅಧ್ಯಾಯದಲ್ಲಿ ಪ್ರತಾಪ್‌ನ ಯುದ್ಧಾಶ್ವ ಚೇತಕ್ ಸಾವನ್ನಪ್ಪಿತ್ತು ಮತ್ತು ಆತ ಯುದ್ಧರಂಗವನ್ನು ತೊರೆದಿದ್ದ ಎಂದು ಹೇಳಲಾಗಿದೆ.

ಪಠ್ಯಪುಸ್ತಕ ಪುನರ್‌ಪರಿಶೀಲನಾ ಸಮಿತಿಯು 12ನೇ ತರಗತಿಯ ರಾಜಕೀಯ ವಿಜ್ಞಾನ ಪುಸ್ತಕದಿಂದ ನೋಟು ನಿಷೇಧದ ಎಲ್ಲ ಪ್ರಸ್ತಾವಗಳನ್ನು ಕೈಬಿಟ್ಟಿದೆ. ಇದೇ ರೀತಿ ಈ ಪುಸ್ತಕದಲ್ಲಿನ ‘ಜಾತಿವಾದ ಮತ್ತು ಕೋಮುವಾದ’ಅಧ್ಯಾಯದಲ್ಲಿ ಈ ಮೊದಲು ಜಮಾಅತೆ ಇಸ್ಲಾಂ, ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮತ್ತು ಸಿಮಿಯನ್ನು ಮಾತ್ರ ಉಲ್ಲೇಖಿಸಿದ್ದರೆ, ಈಗ ಹಿಂದು ಮಹಾಸಭಾವನ್ನೂ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News