ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯರ್ತೆಯರ ಧರಣಿ

Update: 2019-06-14 18:31 GMT

ಮಂಡ್ಯ, ಜೂ.14: ಕನಿಷ್ಠ 12 ಸಾವಿರ ರೂ. ಮಾಸಿಕ ಗೌರವಧನ ನಿಗದಿ, ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಬೃಹತ್ ಧರಣಿ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ ಆಂಧ್ರಪ್ರದೇಶ ಸರಕಾರ 10 ಸಾವಿರ ರೂ. ಮಾಸಿಕ ಗೌರವಧನ ನಿಗದಿ ಮಾಡಿದ್ದು, ರಾಜ್ಯದಲ್ಲಿಯೂ ಭರವಸೆ ನೀಡಿದಂತೆ ಮುಖ್ಯಮಂತ್ರಿಗಳು ರಾಜ್ಯ ಮತ್ತು ಕೇಂದ್ರದ ಅನುದಾನದಿಂದ 12 ಸಾವಿರ ರೂ. ನಿಗದಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಸುಮಾರು ಮೂರು ವರ್ಷದಿಂದ ಸಹಸ್ರಾರು ರೂ. ಆರ್ಥಿಕ ನಷ್ಟವಾಗಿದೆ. ಈ ಪದ್ದತಿಗೆ ಬದಲಾಗಿ ಮ್ಯಾನುವಲ್ ವರದಿ ತಯಾರಿಸಿ ವೇತನ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

ಇತರ ಬೇಡಿಕೆಗಳು: ಸಾವಿರ ಜನಸಂಖ್ಯೆಗೆ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಜನಸಂಖ್ಯೆಗನುಗುನವಾಗಿ ಮಾಸಿಕ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಇದನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕು. 9 ತಿಂಗಳಿಂದ ಬಾಕಿಯಿರುವ ಎಂಸಿಟಿಎಸ್ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು.
ಅಂಗನವಾಡಿ ಕಾರ್ಯಕರ್ತೆಯರಿಗಿರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಬೇಕು. ಮರಣ ಹೊಂದಿದರೆ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ನಿವೃತ್ತಿ ಹೊಂದಿದ ಆಶಾಗಳಿಗೆ ಪಿಂಚಣಿ, ನಿವೃತ್ತಿ ಪರಿಹಾರ ನೀಡಬೇಕು. ಸಾಮಾಜಿಕ ಸುರಕ್ಷಾ ಯೋಜನೆ ವ್ಯಾಪ್ತಿಗೆ ಸೇರಿಸಬೇಕು.

ಹೆರಿಗೆ ರಜೆ ನೀಡಿ ರಜೆಯಲ್ಲಿ ಮಾಸಿಕ ಗೌರವಧನ ಪಾವತಿಸಬೇಕು. ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಬೇಕು. ಕೇಂದ್ರ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 2000-2500 ಜನಸಂಖ್ಯೆಗೆ ಮಾತ್ರ ಕಾರ್ಯನಿರ್ವಹಿಸಲು ಕ್ರಮವಹಿಸಬೇಕು. ಮೂರು ತಿಂಗಳಿಗೊಮ್ಮೆ ಆಶಾ ಕುಂದುಕೊರತೆ ನಿವಾರಣಾ ಸಭೆ ನಡೆಸಬೇಕು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ಶೋಭಾ, ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ಕಲಾವತಿ, ಸರಸ್ವತಿ, ಇತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News