ಕೆ.ಸಿ ವ್ಯಾಲಿ ಯೋಜನೆಗೆ ಹೆಚ್ಚುವರಿ 450 ಕೋಟಿ ಅನುದಾನ: ಸಚಿವ ಸಿ.ಎಸ್ ಪುಟ್ಟರಾಜು

Update: 2019-06-14 18:43 GMT

ಕೋಲಾರ, ಮೂ.14: ಕೆ.ಸಿ ವ್ಯಾಲಿ ನೀರಿನಿಂದ ಇನ್ನೂ 250 ಕೆರೆಗಳನ್ನು ಹೆಚ್ಚುವರಿಯಾಗಿ ತುಂಬಿಸಲು ಮಾನ್ಯ ಮುಖ್ಯಮಂತ್ರಿಗಳು 450 ಕೋಟಿ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವರಾದ ಸಿ.ಎಸ್ ಪುಟ್ಟರಾಜು ಅವರು ತಿಳಿಸಿದರು. 

ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಕೆ.ಸಿ ವ್ಯಾಲಿ ನೀರು ಹರಿಯುವ ಕೆರೆಗಳ ಸ್ಥಳ ಪರಿಶೀಲನೆ ನಡೆಸಿ ನಂತರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋಲಾರ ಜಿಲ್ಲೆಯ ಅಂತರ್ಜಲ ಮಟ್ಟ ಕುಸಿದಿದ್ದು, ಅಂತರ್ಜಲ ಮಟ್ಟ ಅಭಿವೃದ್ಧಿ ಪಡಿಸಲು ಕೆ.ಸಿ ವ್ಯಾಲಿ ನೀರನ್ನು ಜಿಲ್ಲೆಗೆ ಹರಿಸಿ ಕೆರೆಗಳನ್ನು ತುಂಬಿಸಲಾಗುತ್ತಿದೆ. ಒಟ್ಟು 126 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಇಲ್ಲಿಯವರೆಗೆ 19 ಕೆರೆಗಳು ಹಾಗೂ 21 ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿದೆ ಎಂದರು.

ಕೆ.ಸಿ ವ್ಯಾಲಿ ನೀರಿನ ಹರಿವಿಗೆ ಸುಪ್ರಿಂಕೋರ್ಟ್ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಕೆ.ಸಿ ವ್ಯಾಲಿ ಯೋಜನೆ, ಎತ್ತಿನ ಹೊಳೆ ಯೋಜನೆ ಹಾಗೂ ಯರಗೋಳ್ ಡ್ಯಾಂ ಕಾಮಗಾರಿ ಇವು ಜಿಲ್ಲೆಯ ರೈತರಿಗೆ ವರದಾನವಾದ ಯೋಜನೆಗಳಾಗಿವೆ ಎಂದು ತಿಳಿಸಿದರು. ಕೆ.ಸಿ. ವ್ಯಾಲಿ ನೀರನ್ನು ಕುಡಿಯುವ ನೀರು ಯೋಜನೆಯಾದ ಯರಗೋಳ್ ಡ್ಯಾಂಗೆ ಸಂಪರ್ಕ ಮಾಡುವುದಿಲ್ಲ, ಸುಪ್ರೀಂ ಕೋರ್ಟ್ ಆದೇಶ ಯತಾವತ್ತಾಗಿ ಪಾಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಸಿ.ಮೃತ್ಯುಂಜಯ ಸ್ವಾಮಿ, ಕಾರ್ಯಪಾಲಕ ಅಭಿಯಂತರರಾದ ತಿಮ್ಮೆಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋಲಾರ ಜಿಲ್ಲೆ ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದರೂ ಮುಖ್ಯಮಂತ್ರಿಗಳು ಕೋಲಾರ ಜಿಲ್ಲೆಯಲ್ಲಿ ಗ್ರಾಮ ವಾತ್ಸವ್ಯ ಮಾಡುತ್ತಿಲ್ಲವೇಕೆ ಎಂಬ ಸುದ್ಧಿಗಾರರ ಪ್ರಶ್ನೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಒಬ್ಬ ಉಸ್ತುವಾರಿ ಸಚಿವರು, ವಿಧಾನಸಭಾಧ್ಯಕ್ಷರು ಸೇರಿದಂತೆ ಸಣ್ಣ ನೀರಾವರಿ ಸಚಿವರಾಗಿ ತಾನು ಕೂಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದು, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುವ ಅಗತ್ಯ ಇಲ್ಲ ಎಂದರು.

ಸೋತ ಶಾಸಕರೆಲ್ಲರೂ ಮೈತ್ರಿ ಸರ್ಕಾರ ಬೇಗ ಬಿದ್ದು ಹೋಗುತ್ತೆ ಎನ್ನುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ಹೇಳಿಕೆಗೆ ಸಣ್ಣ ನೀರಾವರಿ ಇಲಾಖೆ ಸಚಿವ ಪುಟ್ಟರಾಜು ತಿರುಗೇಟು ನೀಡಿದ್ದಾರೆ. ಕೋಲಾರದ ಕೆ.ಸಿ.ವ್ಯಾಲಿ ಯೋಜನೆಯ ವೀಕ್ಷಣೆಗೆ ಆಗಮಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪುಟ್ಟರಾಜು, ಸೋತು ಮನೆಯಲ್ಲಿ ಕೂರಲು ಆಗದವರು, ಈ ಸರ್ಕಾರ ಬಿದ್ದು ಹೋಗುತ್ತೆ ಅಂದಿದ್ದಾರೆ. ಆದರೆ ಸರ್ಕಾರ 5 ವರ್ಷಗಳು ಸುಭದ್ರವಾಗಿರುತ್ತದೆ ಅದರಲ್ಲಿ ಯಾವುದೇ ಅನುಮಾನಗಳು ಬೇಡ  ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News